-ಮಾಜಿ ತಾಪಂ ಸದಸ್ಯ ಅನಿಲ್ ಗೌಡ ಮಾಲಿಪಾಟೀಲ್ ಗ್ರಾಮಸ್ಥರೊಂದಿಗೆ ಪ್ರತಿಭಟನೆ
ಕನ್ನಡಪ್ರಭ ವಾರ್ತೆ ವಡಗೇರಾ ತಾಲೂಕಿನ ತೇಕರಾಳ ಗ್ರಾಮದ ಸಾರ್ವಜನಿಕ ಸ್ಮಶಾನ ಜಾಗಕ್ಕೆ ತೆರಳಲು ದಾರಿ ಮಾಡಿಕೊಡುವಂತೆ ಮಾಜಿ ತಾಲೂಕು ಪಂಚಾಯಿತಿ ಸದಸ್ಯ ಅನಿಲ್ ಗೌಡ ಮಾಲಿಪಾಟೀಲ್ ಆಗ್ರಹಿಸಿದ್ದಾರೆ.
ಇಲ್ಲಿನ ಸ್ಮಶಾನಕ್ಕೆ ಹೋಗುವ ಜಾಗದಲ್ಲಿ ಗ್ರಾಮಸ್ಥರೊಂದಿಗೆ ಪ್ರತಿಭಟನೆ ನಡೆಸಿ ಮಾತನಾಡಿ, ನಮ್ಮ ಗ್ರಾಮಕ್ಕೆ ಸಾರ್ವಜನಿಕ ಸ್ಮಶಾನಭೂಮಿ ಮಂಜೂರಾಗಿ 10 ವರ್ಷ ಕಳೆದರೂ ಸ್ಮಶಾನ ಜಾಗಕ್ಕೆ ಹೋಗಲು ರಸ್ತೆ ಇಲ್ಲ. ಖಾಸಗಿ ಜಮೀನಿನ ವ್ಯಕ್ತಿಗಳು ದಾರಿ ಬಿಡದ ಕಾರಣ ಗ್ರಾಮಸ್ಥರು ತೀವ್ರ ತೊಂದರೆ ಅನುಭವಿಸುವಂತಾಗಿದೆ. ಇದಕ್ಕೆ ಸಂಬಂಧಪಟ್ಟ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ನೋವು ತೋಡಿಕೊಂಡರು.ಜಮೀನು ಉಳ್ಳವರು ತಮ್ಮ ಹೊಲಗಳಲ್ಲಿ ಅಂತ್ಯಸಂಸ್ಕಾರ ನೆರವೇರಿಸುತ್ತಾರೆ. ಜಮೀನು ಇಲ್ಲದವರು ಅಂತ್ಯಸಂಸ್ಕಾರ ಮಾಡಲು ಖಾಸಗಿ ಭೂಮಿ ಖರೀದಿಸಿ ಅಂತ್ಯಸಂಸ್ಕಾರ ಮಾಡುವಂತ ಪರಸ್ಥಿತಿ ಎದುರಾಗಿದೆ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿ, ಸ್ಮಶಾನ ಭೂಮಿಗೆ ದಾರಿ ವ್ಯವಸ್ಥೆ ಮಾಡಿಕೊಡಬೇಕು. ಇಲ್ಲವೆ ಬೇರೆಡೆ ಸ್ಥಳ ಗುರುತಿಸಿ, ಜಮೀನು ಮಂಜೂರು ಮಾಡಬೇಕೆಂದು ಒತ್ತಾಯಿಸಿದರು.
----