ಕನ್ನಡಪ್ರಭ ವಾರ್ತೆ ಯಾದಗಿರಿ
ಸ್ಫರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳಲ್ಲಿ ನಾನಾ ಪ್ರತಿಭೆಗಳಿರುತ್ತವೆ. ಶಾಲೆಯಲ್ಲಿ ಶಿಕ್ಷಕರು ಸೂಕ್ಷ್ಮವಾಗಿ ಅವರ ಆಸಕ್ತಿ ಪ್ರತಿಭೆಗಳನ್ನು ಗಮನಿಸಿ, ಅವರಲ್ಲಿ ಸ್ಪರ್ಧಾ ಮನೋಭಾವನೆ ಮೂಡಿಸಬೇಕೆಂದು ಗುರುಮಠಕಲ್ ಖಾಸಾಮಠದ ಪೀಠಾಧಿಪತಿ ಶಾಂತವೀರ ಮಹಾಸ್ವಾಮೀಜಿ ಹೇಳಿದರು.ನಗರದ ಗ್ರೀನ್‌ಸಿಟಿಯಲ್ಲಿರುವ ಸೆಂಚುರಿಯನ್ ಅಂತಾರಾಷ್ಟ್ರೀಯ ಶಾಲೆಯ ಆವರಣದಲ್ಲಿ ಹಮ್ಮಿಕೊಂಡಿದ್ದ 7ನೇ ವಾರ್ಷಿಕ ಸ್ನೇಹ ಸಮ್ಮೇಳನ ಕಾರ್ಯಕ್ರಮ ಉದ್ಘಾಟಿಸಿ ಅವರು ಆಶೀರ್ವಚನ ನೀಡಿದರು.
ವಿದ್ಯಾರ್ಥಿಗಳಿಗೆ ಪಠ್ಯ ಪುಸ್ತಕಗಳ ಅಭ್ಯಾಸದ ಜೊತೆಗೆ ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡಬೇಕು. ಅಂದಾಗ ಮಾತ್ರ ಅವರು ಸಮಗ್ರ ಬೆಳವಣಿಗೆ ಸಾಧಿಸುತ್ತಾರೆ ಎಂದು ಹೇಳಿದರು.ವಿದ್ಯಾರ್ಥಿಗಳ ಶೈಕ್ಷಣಿಕ ಬೆಳವಣಿಗೆ ಮೇಲೆ ಪರಿಸರದ ಪಾತ್ರ ಕೂಡ ಇದೆ. ಯಾವುದೇ ಶಾಲೆಯಲ್ಲಾಗಲಿ ಆಡಳಿತ ಮಂಡಳಿಯವರು ಉತ್ತಮ ಪರಿಸರ ಹಾಗೂ ಅಗತ್ಯ ಮೂಲಭೂತ ಸೌಕರ್ಯ ಒದಗಿಸಬೇಕು. ಇದು ಅವರ ಮೇಲೆ ಸಕರಾತ್ಮಕ ಪರಿಣಾಮ ಬೀರಿ, ಶೈಕ್ಷಣಿಕ ಬೆಳವಣಿಗೆಗೆ ಸಹಕಾರಿಯಾಗುತ್ತದೆ ಎಂದರು.
ತಾಲೂಕು ಪಂಚಾಯಿತಿ ಇಒ ಬಸವರಾಜ ಶರಬೈ ಮತ್ತು ಪ್ರಾಂಶುಪಾಲ ರುದ್ರಗೌಡ ಪಾಟೀಲ್ ಮಾತನಾಡಿ, ಈ ಹಿಂದೆ ದೇಶದಲ್ಲಿ ಋಷಿಮುನಿಗಳು ಹಾಗೂ ಸಮಾಜ ಸುಧಾರಣೆಗೆ ಶ್ರಮಿಸಿದ ಹಲವಾರು ಮಹನೀಯರು ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಲು ಜಾಗೃತಿ ಮೂಡಿಸಿದ್ದಾರೆ. ಗುಣಮಟ್ಟದ ಮಾನವ ಸಂಪನ್ಮೂಲ ಸೃಷ್ಟಿಯಾಗಿ, ಬೆಳವಣಿಗೆ ಸಾಧಿಸಿದ ಪರಿಣಾಮ ಇಂದು ದೇಶದಲ್ಲಿ ಹಲವಾರು ಕ್ಷೇತ್ರಗಳಲ್ಲಿ ನಾವು ಬದಲಾವಣೆ ಕಾಣುತ್ತಿದ್ದೇವೆ ಎಂದರು.ಶಾಲೆಯ ಸಂಸ್ಥಾಪಕರಾದ ಶಿವರಾಜ ಹುಡೇದ್ ಮಾತನಾಡಿ, 2024-25ರಲ್ಲಿ ಶಾಲೆಯಲ್ಲಿ ಹಮ್ಮಿಕೊಳ್ಳಲಿರುವ ಯೋಜನೆಗಳನ್ನು ಪ್ರಸ್ತಾಪ ಮಾಡಿ, ಪ್ರಸಕ್ತ ವರ್ಷದಲ್ಲಿ ವಿದ್ಯಾರ್ಥಿಗಳು ಮಾಡಿದ ಸಾಧನೆಗಳನ್ನು ವಿವರಿಸಿದರು.
ಈ ಸಂದರ್ಭದಲ್ಲಿ ಕಾರ್ಯಕ್ರಮ ನಿಮಿತ್ತ ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಂಡಿದ್ದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಪ್ರಶಸ್ತಿ ಪತ್ರ ಹಾಗೂ ಬಹುಮಾನ ನೀಡಿ, ಗೌರವಿಸಲಾಯಿತು.ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಸುಜಾತ ಎಸ್. ಹುಡೇದ್ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಗಂವ್ಹಾರದ ತ್ರಿವಿಕ್ರಮಾನಂದ ಮಠದ ಶ್ರೀಗಳಾದ ಪಾಂಡುರಂಗ ಜ್ಯೋಷಿ, ಜಿಪಂ ಮುಖ್ಯ ಲೆಕ್ಕಾಧಿಕಾರಿ ವೆಂಕಟೇಶ ಚಟ್ನಳ್ಳಿ, ಶಿವಗಂಗಮ್ಮ ಹುಡೇದ್, ಸೂಗರಡ್ಡಿ ದೇಸಾಯಿ ಇದ್ದರು. ಶಿಕ್ಷಕಿಯರಾದ ಪರಿಮಳ ಸ್ವಾಗತಿಸಿದರು. ಅಕ್ಷತಾ ನಿರೂಪಿಸಿ, ವಂದಿಸಿದರು. ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮ ಪೋಷಕರ ಹಾಗೂ ಸಾರ್ವಜನಿಕರ ಗಮನ ಸೆಳೆಯಿತು.