ಗದಗ: ಕಾವ್ಯ ರಚನೆಯಲ್ಲಿ ತೊಡಗುವ ಇಂದಿನ ಯುವ ಜನತೆ ವಾಸ್ತವತೆ ಮತ್ತು ಸಾಮಾಜಿಕ ಕಾಳಜಿಯನ್ನು ಕೇಂದ್ರವನ್ನಾಗಿಸಿಕೊಂಡು ಜನಮುಖಿ ಕಾವ್ಯ ರಚಿಸಬೇಕೆಂದು ಕೇಂದ್ರ ಯುವ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಕವಿ ವೀರಣ್ಣ ಮಡಿವಾಳರ ಹೇಳಿದರು.
ಇಂದಿನ ಕವಿಗಳಲ್ಲಿ ಹಿಂದಿನ ಹೆಜ್ಜೆಯನರಿತು ಮುಂದಿನ ಹೆಜ್ಜೆಯ ನೂರುವ ಜಾಣ್ಮೆಯ ಕೊರತೆ ಇದೆ. ಲಕ್ಷಗಂಟಲೇ ಕವಿಗಳು ಹುಟ್ಟಿಕೊಳ್ಳುತ್ತಿರುವ ವರ್ತಮಾನದ ಹೊತ್ತಿನಲ್ಲಿ ವಿಶಿಷ್ಟವಾಗಿ ಗುರುತಿಸಿಕೊಳ್ಳುವ, ತಮ್ಮ ಅಸ್ಮಿತೆ ಕಾಪಾಡಿಕೊಳ್ಳುವ ಹೊಣೆ ಇಂದಿನ ಕವಿಗಳ ಮೇಲಿದೆ. ಕವಿಗಳಿಗೆ ಬರವಣಿಗೆ ಎನ್ನುವುದು ಉಸಿರು ಮತ್ತು ಜೀವಂತಿಕೆಯ ಸಂಕೇತ. ನಿಜ ಬದುಕಿನ ಅಗ್ನಿ ದಿವ್ಯದಿಂದೆದ್ದು ಬರುವ ಕಾವ್ಯ ಬಹು ಜನರನ್ನುತಲುಪಲು ಯಶಸ್ವಿಯಾಗುವುದು ಎಂದರು.
ಮಹಾವಿದ್ಯಾಲಯದ ಉಪ ಪ್ರಾ.ಡಾ.ವೀಣಾ ಮಾತನಾಡಿ, ಕನ್ನಡದ ಕಾವ್ಯ ಪರಂಪರೆ ಜಗತ್ತಿಗೆ ಮಾದರಿಯಾಗಿದ್ದು, ನಾವೆಲ್ಲರೂ ಕಾವ್ಯ ಬೆಳೆಸುವ ಕಡೆ ಮುಖ ಮಾಡಬೇಕು. ನಮ್ಮ ನೆಲ ಕಾವ್ಯ ಸೃಷ್ಟಿಸುವ ಸುಂದರ ನಾಡು. ಇಲ್ಲಿ ಅನೇಕರು ಕಾವ್ಯ ಬರೆದಿದ್ದಾರೆ, ಆದರೆ ಅವರಿಗೆ ಉತ್ತಮ ವೇದಿಕೆ ದೊರಕಿಲ್ಲ, ಕವನಗಳನ್ನು ಸೃಷ್ಟಿಸುವ ವ್ಯಕ್ತಿಯೂ ಉತ್ತಮ ಕವಿಯಾಗಬಲ್ಲ ಎಂದರು.ಈ ವೇಳೆ ಕವಿಗಳೊಂದಿಗೆ ವಿದ್ಯಾರ್ಥಿಗಳ ಸಂವಾದ ಜರುಗಿತು. ಕನ್ನಡ ವಿಭಾಗದ ಮುಖ್ಯಸ್ಥ ಡಾ. ಅಂದಯ್ಯ ಅರವಟಗಿಮಠ ಪ್ರಾಸ್ತಾವಿಕವಾಗಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಮಹಾವಿದ್ಯಾಲಯದ ಬೋಧಕ, ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿಗಳು ಇದ್ದರು. ಮೇಘಾ ಮುದ್ದಿ ಪ್ರಾರ್ಥಿಸಿದರು. ವಿಜಯಲಕ್ಷ್ಮೀ ಬಂಡಿವಾಡ ನಿರೂಪಿಸಿದರು. ಡಾ. ರಾಮಚಂದ್ರ ಪಡೆಸೂರ ವಂದಿಸಿದರು.