ಯಾದಗಿರಿ: ಪ್ರತಿಯೊಬ್ಬರಲ್ಲಿಯೂ ಒಂದು ಅದ್ಭುತವಾದ ಕೌಶಲ್ಯವಿರುತ್ತದೆ. ಅದನ್ನು ಯುವಕರು ಬಳಸಿಕೊಂಡು ಬದುಕು ರೂಪಿಸಿಕೊಳ್ಳಬೇಕೆಂದು ಖಾಸಗಿ ಪತ್ರಿಕೆಯೊಂದರ ಸಂಪಾದಕ ಶಂಕ್ರಪ್ಪ ಅರುಣಿ ಕರೆ ನೀಡಿದರು.
ವಿದ್ಯಾರ್ಥಿಗಳಲ್ಲಿ ಸೂಕ್ತವಾದ ಪ್ರತಿಭೆ ಇರುತ್ತದೆ. ಅದನ್ನು ಅವಕಾಶ ಸಿಕ್ಕಾಗ ಸಮರ್ಥವಾಗಿ ಬಳಸಿಕೊಂಡಲ್ಲಿ ವಿದ್ಯಾರ್ಥಿಗಳು ಜೀವನದಲ್ಲಿ ಯಶಸ್ಸನ್ನು ಪಡೆಯಲು ಸಾಧ್ಯವಾಗುತ್ತದೆ ಎಂದರು.
ಕ್ರೀಡಾ ಮತ್ತು ಯುವ ಸಬಲೀಕರಣದ ಸಹಾಯಕ ನಿರ್ದೇಶಕ ರಾಜು ಹಾಲಬಾವಿ ಮಾತನಾಡಿ, ಬೆಳಕು ಇಲ್ಲದ ಹಾದಿಯಲ್ಲಿ ನಡೆಯಬಹುದು. ಕನಸು ಇಲ್ಲದ ಬದುಕಿನ ದಾರಿಯಲ್ಲಿ ನಡೆಯಲಾಗದು ಎಂಬ ಕವಿ ವಾಣಿ ನೆನಪಿಸಿ, ಹಿರಿಯರ ಮಾರ್ಗದರ್ಶನದಲ್ಲಿ ಯುವಕರು ಉತ್ತಮವಾದ ಕನಸುಗಳನ್ನು ಕಾಣುತ್ತಾ, ಶ್ರದ್ಧೆಯಿಂದ ಶ್ರಮವಹಿಸಿ ಬದುಕನ್ನು ರೂಪಿಸಿಕೊಳ್ಳಲು ಕರೆ ನೀಡಿದರು.ಡಾ.ಪ್ರಕಾಶ ಪಾಟೀಲ್ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿ, ಭಾರತ ದೇಶ ಪ್ರಸಕ್ತ ಸಂದರ್ಭದಲ್ಲಿ ಸಾಕಷ್ಟು ಅಭಿವೃದ್ಧಿ ಹೊಂದುತ್ತಿದೆ. ವಿಜ್ಞಾನ-ತಂತ್ರಜ್ಞಾನಗಳ ಪ್ರಗತಿ ನಾಗಾಲೋಟದಲ್ಲಿ ಸಾಗುತ್ತಿದೆ. ಅದಕ್ಕೆ ತಕ್ಕಂತೆ ಯುವಕರು ಲಭ್ಯ ಅವಕಾಶಗಳನ್ನು ದೊರಕಿಸಿಕೊಂಡು ದೇಶದ ಪ್ರಗತಿಗಾಗಿ ತಮ್ಮದೆ ಆದ ಕೊಡುಗೆ ನೀಡಬೇಕು ಎಂದರು.
ಕಾಲೇಜಿನ ಪ್ರಾಂಶುಪಾಲ ಡಾ.ಸುಭಾಶ್ಚಂದ್ರ ಕೌಲಗಿ ಅಧ್ಯಕ್ಷತೆವಹಿಸಿ ಮಾತನಾಡಿ, ಯುವಕರು ನಮ್ಮ ದೇಶದ ಆಸ್ತಿಯಾಗಬೇಕಾದರೆ ವಿದ್ಯಾರ್ಥಿ ಜೀವನದಲ್ಲಿ ಕಷ್ಟಪಟ್ಟು ಅಧ್ಯಯನ ಮಾಡಿದರೆ ಅದು ಸಾಧ್ಯವಾಗುತ್ತದೆ ಎಂದರು.ಡಾ.ಜಟ್ಟೆಪ್ಪ ದೋರನಹಳ್ಳಿ, ಯಲ್ಲಪ್ಪ ಕಶೆಟ್ಟಿ, ಡಾ.ಅಶೋಕರೆಡ್ಡಿ ಪಾಟೀಲ್, ಶಹನಾಜ್ ಬೇಗಮ್ ವೇದಿಕೆಯಲ್ಲಿದ್ದರು. ಗಂಗಮ್ಮ ಮತ್ತು ಚಂದ್ರಕಲಾ ಪ್ರಾರ್ಥಿಸಿದರು. ಎನ್ನೆಸ್ಸೆಸ್ ಅಧಿಕಾರಿ ಡಾ.ಚಂದ್ರಶೇಖರ ಕೊಂಕಲ್ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಎನ್ನೆಸ್ಸೆಸ್ ಅಧಿಕಾರಿ ಮಂಜುನಾಥ ಪ್ರತಿಜ್ಞಾ ವಿಧಿ ಬೋಧಿಸಿದರು.