ವ್ಯಸನಮುಕ್ತ ಸಮಾಜ ರೂಪಿಸುವುದು ಶ್ರೇಷ್ಠ ಸೇವಾಕಾರ್ಯ: ಡಾ. ವೀರೇಂದ್ರ ಹೆಗ್ಗಡೆ

KannadaprabhaNewsNetwork | Published : Jan 11, 2025 12:46 AM

ಸಾರಾಂಶ

ಕೊಪ್ಪಳ ಜಿಲ್ಲೆಯ ಹಗರಿಬೊಮ್ಮನಹಳ್ಳಿಯ ನಟರಾಜ ಬಾದಾಮಿ ಅವರನ್ನು ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್‌ನ ನೂತನ ರಾಜ್ಯ ಸಂಘಟನೆನಾ ಅಧ್ಯಕ್ಷರಾಗಿ ಆಯ್ಕೆ ಮಾಡಲಾಯಿತು. ರಾಜ್ಯ ಸಂಘಟನಾ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ ರಾಜಣ್ಣ ಕೊರವಿ ಅವರನ್ನು ಈ ಸಂದರ್ಭದಲ್ಲಿ ಗೌರವಿಸಲಾಯಿತು.

ಕನ್ನಡಪ್ರಭ ವಾರ್ತೆ ಬೆಳ್ತಂಗಡಿ ಧರ್ಮಸ್ಥಳದ ಆಶ್ರಯದಲ್ಲಿ ನಡೆಯುತ್ತಿರುವ ಅನೇಕ ಪವಿತ್ರ ಸೇವಾಕಾರ್ಯಗಳಲ್ಲಿ ಮದ್ಯವ್ಯಸನಿಗಳನ್ನು ಮನಪರಿವರ್ತನೆ ಮೂಲಕ ವ್ಯಸನಮುಕ್ತರನ್ನಾಗಿ ಮಾಡಿ ಆರೋಗ್ಯಪೂರ್ಣ ಸಮಾಜ ರೂಪಿಸುವ ಕಾಯಕ ಅತ್ಯಂತ ಶ್ರೇಷ್ಠ, ಪವಿತ್ರ ಹಾಗೂ ಉತ್ತಮ ಸೇವೆಯಾಗಿದೆ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆ ಹೇಳಿದರು. ಅವರು ಶುಕ್ರವಾರ ಧರ್ಮಸ್ಥಳದಲ್ಲಿ ಅಮೃತವರ್ಷಿಣಿ ಸಭಾಭವನದಲ್ಲಿ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್ ಆಶ್ರಯದಲ್ಲಿ ಆಯೋಜಿಸಿದ್ದ ಜನಜಾಗೃತಿವೇದಿಕೆಯ ಸರ್ವಸದಸ್ಯರ ಸಮಾವೇಶದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಧರ್ಮಸ್ಥಳದ ಮೇಲಿನ ಭಕ್ತಿ, ಪ್ರೀತಿ, ವಿಶ್ವಾಸ ಮತ್ತು ಗೌರವದಿಂದ ಜನಜಾಗೃತಿವೇದಿಕೆಯ ಎಲ್ಲ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ತ್ರಿಕರಣಪೂರ್ವಕವಾಗಿ ನಿಸ್ವಾರ್ಥ ಸೇವೆ ಸಲ್ಲಿಸುತ್ತಿರುವುದರಿಂದ ಎಲ್ಲರಿಗೂ ಸಮಾಜದಲ್ಲಿ ವಿಶೇಷ ಗೌರವ, ಮಾನ್ಯತೆ ದೊರಕುತ್ತಿದೆ. ವೇದಿಕೆಯ ಕೀರ್ತಿಯೂ ಹೆಚ್ಚಾಗಿದೆ. ವ್ಯಸನಮುಕ್ತರು ಪವಿತ್ರಾತ್ಮರಾಗಿ ಧರ್ಮಸ್ಥಳಕ್ಕೆ ಬಂದು ದೇವರ ದರ್ಶನ ಮಾಡಿದಾಗ ಅವರಿಗೆ ವಿಶೇಷ ಅನುಗ್ರಹವಾಗುತ್ತದೆ. ಮುಂದೆ ಅವರು ನವಜೀವನ ಸಮಿತಿ ಸದಸ್ಯರಾಗಿ ದೃಢಸಂಕಲ್ಪದಿಂದ ಸುಖ- ಶಾಂತಿ ನೆಮ್ಮದಿಯ ಕೌಟುಂಬಿಕ ಜೀವನ ನಡೆಸುವುದು ತಮಗೆ ಹೆಚ್ಚಿನ ಸಂತೋಷ ಮತ್ತು ತೃಪ್ತಿ ನೀಡುತ್ತದೆ ಎಂದು ಹೆಗ್ಗಡೆಯವರು ಹೇಳಿದರು.ಜನಜಾಗೃತಿ ವೇದಿಕೆಯ ಸರ್ವಸದಸ್ಯರ ಸಮಾವೇಶವನ್ನು ಉದ್ಘಾಟಿಸಿದ ಹೇಮಾವತಿ ವೀ. ಹೆಗ್ಗಡೆ, ಯುವಜನಾಂಗ ದೇಶದ ಅಮೂಲ್ಯ ಮಾನವಸಂಪನ್ಮೂಲವಾಗಿದ್ದಾರೆ. ಆದರೆ ತಮ್ಮ ಬುದ್ಧಿ ಮತ್ತು ವಿವೇಕವನ್ನು ಕಳೆದುಕೊಂಡು ಮದ್ಯ ವ್ಯಸನಕ್ಕೆ ಬಲಿಯಾಗಬಾರದು ಎಂದು ಕಿವಿಮಾತು ಹೇಳಿದರು.

ಇಡೀ ರಾಜ್ಯದಲ್ಲಿ ವಟವೃಕ್ಷದಂತೆ ಹಲವು ಶಾಖೆಗಳೊಂದಿಗೆ ಬೆಳೆದಿರುವ ಜನಜಾಗೃತಿ ವೇದಿಕೆಯ ನೇತೃತ್ವದಲ್ಲಿ ಕಾರ್ಯಕರ್ತರ ಜನಹಿತ ಹಾಗೂ ಜನಪರ ಸೇವೆಯಿಂದಾಗಿ ಅನೇಕ ಮಂದಿ ಇಂದು ವ್ಯಸನಮುಕ್ತರಾಗಿ ಶಾಂತಿ, ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಎಲ್ಲರ ಮನೆಗಳಲ್ಲಿ ಹಾಗೂ ಮನಗಳಲ್ಲಿ ಶಾಂತಿ, ನೆಮ್ಮದಿ ನೆಲೆಸಿದೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು. ವಿಶೇಷ ಸೇವೆ, ಸಾಧನೆ ಮಾಡಿ ಪ್ರಶಸ್ತಿ, ಪುರಸ್ಕಾರ ಪಡೆದ ಕಾರ್ಯಕರ್ತರನ್ನು ಅಭಿನಂದಿಸಲಾಯಿತು. ಸತೀಶ್ ಬಳೆಗಾರ ಬರೆದ ‘ಕತ್ತಲ ಕುಡುಕರ ಬೆಳಕಿನ ಮಕ್ಕಳು’ ಎಂಬ ಕೃತಿಯನ್ನು ಶ್ರದ್ಧಾಅಮಿತ್ ಬಿಡುಗಡೆಗೊಳಿಸಿ ಶುಭ ಹಾರೈಸಿದರು. ಕೊಪ್ಪಳ ಜಿಲ್ಲೆಯ ಹಗರಿಬೊಮ್ಮನಹಳ್ಳಿಯ ನಟರಾಜ ಬಾದಾಮಿ ಅವರನ್ನು ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್‌ನ ನೂತನ ರಾಜ್ಯ ಸಂಘಟನೆನಾ ಅಧ್ಯಕ್ಷರಾಗಿ ಆಯ್ಕೆ ಮಾಡಲಾಯಿತು. ರಾಜ್ಯ ಸಂಘಟನಾ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ ರಾಜಣ್ಣ ಕೊರವಿ ಅವರನ್ನು ಈ ಸಂದರ್ಭದಲ್ಲಿ ಗೌರವಿಸಲಾಯಿತು.

ಗ್ರಾಮಾಭಿವೃದ್ಧಿ ಯೋಜನೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅನಿಲ್‌ಕುಮಾರ್ ಆಶಯ ನುಡಿಗಳೊಂದಿಗೆ ಯೋಜನೆಯ ಸೇವೆ, ಸಾಧನೆಯ ಪಕ್ಷಿನೋಟ ವಿವರಿಸಿದರು.

ಜನಜಾಗೃತಿ ವೇದಿಕೆ ಟ್ರಸ್ಟ್‌ನ ಕಾರ್ಯದರ್ಶಿ ವಿವೇಕ್ ವಿ. ಪಾಯಸ್‌ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಜನಜಾಗೃತಿ ವೇದಿಕೆಯ ಮಾಜಿ ಅಧ್ಯಕ್ಷ ರಾಮಸ್ವಾಮಿ ವಂದಿಸಿದರು. ಜನಜಾಗೃತಿ ವೇದಿಕೆಯ ಯೋಜನಾಧಿಕಾರಿಗಳಾದ ಗಣೇಶ ಆಚಾರ್ಯ ಮತ್ತು ನಾಗರಾಜ ಕಾರ್ಯಕ್ರಮ ನಿರ್ವಹಿಸಿದರು.

Share this article