)
ಶಿವಾನಂದ ಗೊಂಬಿ
ಪಶ್ಚಿಮ ಪದವೀಧರರ ಚುನಾವಣೆಯಲ್ಲಿ ಮತದಾರರಿಗೆ ಮತ ಚಲಾವಣೆ ಬಗ್ಗೆ ಜಾಗೃತಿ ಮೂಡಿಸುವುದೇ ರಾಜಕೀಯ ಪಕ್ಷಗಳಿಗೆ ದೊಡ್ಡ ಸವಾಲಾಗಿದೆ.
ಹಿಂದಿನ ಚುನಾವಣೆಯಲ್ಲಿ ಚಲಾವಣೆಯಾದ ಮತಗಳ ಪೈಕಿ ಶೇ.16-18ರಷ್ಟು ಮತಗಳು ಕುಲಗೆಟ್ಟಿವೆ. ಅದಕ್ಕಾಗಿ ಯಾವ ರೀತಿ ಮತಚಲಾಯಿಸಬೇಕು, ಏನು ಮಾಡಬೇಕು ಎಂಬ ಬಗ್ಗೆ ಮಾಹಿತಿ ನೀಡುವುದೇ ಪಕ್ಷಗಳಿಗೆ ದೊಡ್ಡ ತಲೆ ನೋವಾಗಿದೆ.ಪಶ್ಚಿಮ ಪದವೀಧರ ಕ್ಷೇತ್ರವು ಉತ್ತರ ಕನ್ನಡ, ಧಾರವಾಡ, ಹಾವೇರಿ, ಗದಗ ಹೀಗೆ ನಾಲ್ಕು ಜಿಲ್ಲೆಗಳ ವ್ಯಾಪ್ತಿಯ ಹೊಂದಿದ್ದು ಪ್ರತಿ ಸಲವೂ ಮತದಾರರ ನೋಂದಣಿ ಮಾಡಿಸಲೇಬೇಕು. ಪದವೀಧರರೇ ಮತದಾರರು. ಅದರಲ್ಲೂ ವಿವಿಧ ಇಲಾಖೆಗಳ ನೌಕರರು, ಶಿಕ್ಷಕರೇ ಹೆಚ್ಚಿನ ಸಂಖ್ಯೆಯಲ್ಲಿ ಕ್ಷೇತ್ರದ ಮತದಾರರು. ಸುಶಿಕ್ಷಿತರೇ ಮತದಾರರಾಗಿರುವುದು ಮತ ಕುಲಗೇಡುವ ಪ್ರಶ್ನೆಯೇ ಇಲ್ಲ. ಅವರಿಗೇನು ಮತಚಲಾಯಿಸುವ ಬಗ್ಗೆ ಮಾಹಿತಿ ನೀಡುವುದು ಎಂದು ನೀವು ಭಾವಿಸಿದರೆ ಅದು ತಪ್ಪು. ಹಿಂದಿನ ಚುನಾವಣೆಯಲ್ಲಿ ಚಲಾವಣೆಯಾದ ಮತಗಳ ಪೈಕಿ ಶೇ.16-18ರಷ್ಟು ಮತಗಳು ತಿರಸ್ಕಾರಗೊಂಡಿರುತ್ತವೆ.
ಇಲ್ಲಿ ಇವಿಎಂ ಮಷಿನ್ ಇರುವುದಿಲ್ಲ. ಬ್ಯಾಲೇಟ್ ಪೇಪರ್ ಇರುತ್ತದೆ. ಜತೆಗೆ ಪ್ರಾಶಸ್ತ್ಯದ ಮತ ಚಲಾವಣೆ ಮಾಡಬೇಕು. ಮೊದಲ ಪ್ರಾಶಸ್ತ್ಯ, 2ನೆಯ ಪ್ರಾಶಸ್ತ್ಯ.,.. ತಮಗೆ ಯಾರಿಗೆ ಮತ ಚಲಾಯಿಸಬೇಕೋ ಅವರಿಗೆ ಪ್ರಾಶಸ್ತ್ಯದ ಮತ ಚಲಾಯಿಸಬೇಕು. ಅದು ರೋಮನ್ ಅಂಕಿ ಮೂಲಕವೇ ಮತ ಚಲಾಯಿಸಬೇಕು. ಬೇರೆ ಬೇರೆ ಅಂಕಿ ಸಂಖ್ಯೆಗಳನ್ನು ಬರೆದರೆ ಮತ ಕುಲಗೇಡುತ್ತದೆ. ಕೆಲವರು ರೋಮನ್ ಅಂಕಿ ಬದಲು ಬೇರೆ ಬೇರೆ ಅಂಕಿ ಸಂಖ್ಯೆ, ಚಿನ್ಹೆ ಬಳಸುತ್ತಾರೆ. ಆಗ ಸಹಜವಾಗಿ ಮತ ಕುಲಗೇಡುತ್ತದೆ.
ಜಾಗೃತಿ:
ಒಟ್ಟಿನಲ್ಲಿ ಮತದಾರರಿಂದ ಮತ ಹಾಕಿಸಿಕೊಳ್ಳುವುದು ಎಷ್ಟು ಮುಖ್ಯವೋ ಅಷ್ಟೇ ಅದು ಕುಲಗೇಡದಂತೆ ಮತ ಹಾಕಿ ಎಂದು ತಿಳಿಹೇಳುವುದೂ ಆಗಿದೆ ಎಂದರೆ ತಪ್ಪಾಗಲಿಕ್ಕಿಲ್ಲ.ಮತಗಳು ಕುಲಗೇಡದಂತೆ ಯಾವ ರೀತಿ ಮತಚಲಾಯಿಸಬೇಕು ಎಂಬ ಬಗ್ಗೆಯೂ ಪ್ರಚಾರದ ವೇಳೆ ಮತದಾರರಿಗೆ ಜಾಗೃತಿ ಮೂಡಿಸಲಾಗುತ್ತಿದೆ. ಜತೆಗೆ ವಿಡಿಯೋ ಮಾಡಿ ಎಲ್ಲೆಡೆ ಪ್ರಚಾರ ಮಾಡಲಾಗುತ್ತಿದೆ.