ರಾಣಿ ಸಂಯುಕ್ತಾಗೆ ಕಾಂಗ್ರೆಸ್‌ ಟಿಕೆಟ್‌ ನೀಡಿದರೆ ನಾನೇ ಸ್ಪರ್ಧೆ: ಆನಂದ ಸಿಂಗ್

KannadaprabhaNewsNetwork |  
Published : Oct 17, 2026, 02:15 AM IST
ಫೋಟೋವಿವರ- (16ಎಚ್‌ಪಿಟಿ2) ಹೊಸಪೇಟೆ ನಗರದಲ್ಲಿ ಶುಕ್ರವಾರ ಮಾಜಿ ಸಚಿವ ಆನಂದ್ ಸಿಂಗ್‌ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು | Kannada Prabha

ಸಾರಾಂಶ

ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಯಾರು ಎಂಬುದರ ಮೇಲೆ ನನ್ನ ಸ್ಪರ್ಧೆ ನಿರ್ಧರಿಸುತ್ತೇನೆ.

ಹೊಸಪೇಟೆ: ಚುನಾವಣೆಗೆ ಸ್ಪರ್ಧೆ ಮಾಡಬಾರದು ಎಂದುಕೊಂಡಿದ್ದೆ, ಆದರೆ 2028ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಯಾರಿಗೆ ಟಿಕೆಟ್‌ ಕೊಡುತ್ತದೆ ಎಂಬುದರ ಮೇಲೆ ನನ್ನ ಸ್ಪರ್ಧೆ ನಿರ್ಧರಿಸುತ್ತೇನೆ. ಹಾಲಿ ಶಾಸಕ ಗವಿಯಪ್ಪ ವಿರುದ್ಧ ಯಾರು ಬೇಕಾದರೂ ಗೆಲ್ಲಬಹುದು. ಆದರೆ ರಾಣಿ ಸಂಯುಕ್ತಾ ಅವರಿಗೆ ಕಾಂಗ್ರೆಸ್‌ ಟಿಕೆಟ್‌ ನೀಡಿದರೆ ನಾನೇ ಸ್ಪರ್ಧೆ ಮಾಡುವೆ ಎಂದು ಮಾಜಿ ಸಚಿವ ಆನಂದ ಸಿಂಗ್ ಹೇಳಿದರು.

ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಯಾರು ಎಂಬುದರ ಮೇಲೆ ನನ್ನ ಸ್ಪರ್ಧೆ ನಿರ್ಧರಿಸುತ್ತೇನೆ. ಶಾಸಕ ಗವಿಯಪ್ಪ ಆಡಳಿತದಲ್ಲಿ ಕ್ಷೇತ್ರದ ಅಭಿವೃದ್ಧಿ ಕಾರ್ಯ ನೆಲಕಚ್ಚಿವೆ. ನನ್ನ ಅವಧಿಯಲ್ಲಿ ಪ್ರವಾಸೋದ್ಯಮ ಇಲಾಖೆ ಮಂಜೂರು ಮಾಡಿದ್ದ 60ಕ್ಕೂ ಹೆಚ್ಚು ಕಾಮಗಾರಿ ಇನ್ನೂ ಆರಂಭವಾಗಿಲ್ಲ. ಬಡವರಿಗೆ ಒಂದೇ ಒಂದು ನಿವೇಶನ ನೀಡಿಲ್ಲ. ಹೊಸ ಕಾಮಗಾರಿ, ಅನುದಾನ ಇಲ್ಲವೇ ಇಲ್ಲ ಇದರಿಂದ ವಿಜಯನಗರ ಕ್ಷೇತ್ರದ ಜನತೆ ರೋಸಿ ಹೋಗಿದ್ದಾರೆ ಎಂದರು.

ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಸ್ಥಳೀಯ ಶಾಸಕರ ಪ್ರತಿಷ್ಠೆಯಿಂದ ಸಕ್ಕರೆ ಕಾರ್ಖಾನೆ ಸ್ಥಾಪನೆ ನನೆಗುದಿಗೆ ಬಿದ್ದಿದೆ. ಸಕ್ಕರೆ ಕಾರ್ಖಾನೆ ಸ್ಥಾಪನೆ ಇಂದು, ನಾಳೆ ಎನ್ನುತ್ತಲೇ ಮೂರುವರೆ ವರ್ಷ ಕಳೆದಿದ್ದಾರೆ. ಈ ಹಿಂದೆ ಬಿಜೆಪಿ ಸರ್ಕಾರದ ಅವಧಿಯಲ್ಲಿ ಭೂಮಿ ಕಾಯ್ದಿರಿಸಿ ಖಾಸಗಿಯವರಿಗೆ ಸಕ್ಕರೆ ಕಾರ್ಖಾನೆ ಸ್ಥಾಪಿಸಲು ಅವಕಾಶ ನೀಡಲಾಗಿತ್ತು. ಆದರೆ ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ಭೂಮಿ ಹಸ್ತಾಂತರ ಮಾಡದ ಹಿನ್ನೆಲೆ ಸಕ್ಕರೆ ಕಾರ್ಖಾನೆ ಸ್ಥಾಪನೆ ನನೆಗುದಿಗೆ ಬಿದ್ದಿದೆ. ರಾಜ್ಯದಲ್ಲಿ ಎಲ್ಲೂ ಸರ್ಕಾರದಿಂದ ಸಕ್ಕರೆ ಕಾರ್ಖಾನೆ ಆರಂಭ ಮಾಡಿದ ಉದಾಹರಣೆಗಳಿಲ್ಲ. ಈ ಹಿನ್ನೆಲೆ ಸರ್ಕಾರದಿಂದ ಅಗತ್ಯ ಭೂಮಿ ನೀಡಿದರೆ, ನಾನೇ ಸಕ್ಕರೆ ಕಾರ್ಖಾನೆ ಸ್ಥಾಪಿಸುತ್ತೇನೆ ಎಂದು ಸವಾಲು ಹಾಕಿದರು.

ಕ್ಷೇತ್ರದ ಅಭಿವೃದ್ಧಿ ದೃಷ್ಟಿಯಿಂದ ಹಲವು ಬಾರಿ ಶಾಸಕ ಎಚ್‌.ಆರ್‌. ಗವಿಯಪ್ಪ ಅವರನ್ನು ಭೇಟಿ ಮಾಡಿದ್ದೇನೆ. ಅವರಿಂದ ಯಾವುದಕ್ಕೂ ಸ್ಪಂದನೆಯಿಲ್ಲ. ಯಾರು ಏನೇ ಹೇಳಿದರೂ ಅದಕ್ಕೆ ಪ್ರತಿಕ್ರಿಯೆ ನೀಡುವುದಿಲ್ಲ. ಕ್ಷೇತ್ರದ ಜನತೆ ಗವಿಯಪ್ಪ ಅವರನ್ನು ಶಾಸಕರನ್ನಾಗಿ ಆಯ್ಕೆ ಮಾಡಿ ಅಧಿಕಾರದ ಕುದುರೆ ಕೊಟ್ಟಿದ್ದಾರೆ. ಕೊಟ್ಟ ಕುದುರೆ ಎರದವನು ಶೂರನೂ ಅಲ್ಲ, ಧೀರನೂ ಅಲ್ಲ ಎಂದು ಶಾಸಕ ಗವಿಯಪ್ಪ ಆಡಳಿತ ವೈಖರಿ ಲೇವಡಿ ಮಾಡಿದರು.

ನಾನು ಬಿಜೆಪಿಯಲ್ಲಿದ್ದೇನೆ, ಇಲ್ಲೇ ಇರುತ್ತೇನೆ, ಕಾಂಗ್ರೆಸ್‌ ಹೋಗುತ್ತಾರೆ ಎಂಬ ಊಹಾಪೋಹಗಳಿಗೆ ಸ್ಪಷ್ಟನೆ ನೀಡಿದ ಅವರು, ಕಾಂಗ್ರೆಸ್‌ ನಾಯಕಿ ರಷ್ಮಿ ರಾಜಶೇಖರ ಹಿಟ್ನಾಳ ಸಂಘಟನಾ ಕೌಶಲ್ಯಕ್ಕೆ ಮೆಚ್ಚುಗೆ ಸೂಚಿಸಿದರು. ಮುಂದಿನ ದಿನಗಳಲ್ಲಿ ವಿಜಯನಗರ ಮಹಿಳಾ ಮೀಸಲು ಕ್ಷೇತ್ರವಾದರೆ ಅವರನ್ನು ಕರೆದು ಪಕ್ಷದ ಟಿಕೆಟ್‌ ನೀಡುತ್ತೇವೆ. ಅವರಿಗೆ ಬಿಜೆಪಿ ಬಾಗಿಲು ಸದಾ ತೆರೆದಿದೆ ಎಂದು ಬಹಿರಂಗವಾಗಿ ಆಹ್ವಾನ ನೀಡಿದರು.

ಸಕ್ಕರೆ ಕಾರ್ಖಾನೆ ಸ್ಥಾಪನೆ ಕುರಿತು ನಡೆಯುತ್ತಿರುವ ಹೋರಾಟಕ್ಕೆ ನನ್ನ ಬೆಂಬಲವಿದೆ. ನನಗೆ ಅಧಿಕೃತ ಆಹ್ವಾನ ಬಂದಿಲ್ಲ. ಅಗತ್ಯ ಬಿದ್ದರೆ ಹೋರಾಟದಲ್ಲಿ ಭಾಗವಹಿಸುತ್ತೇನೆ ಎಂದರು.

ಹೊಸಪೇಟೆ ನಗರದ ಹೃದಯ ಭಾಗದ ಸಂಕ್ಲಾಪುರ ಗ್ರಾಮದಲ್ಲಿ 64.50 ಎಕರೆ ಜಮೀನನ್ನು ಆರ್‌ಬಿಎಸ್‌ಎಸ್‌ಎನ್‌ ಕಂಪನಿಗೆ ಬೆನಿಫಿಕೇಷನ್‌ ಪ್ಲಾಂಟ್‌ ಉದ್ದೇಶಕ್ಕಾಗಿ 30 ವರ್ಷಗಳ ಅವಧಿಗೆ ಗುತ್ತಿಗೆ ಆಧಾರದ ಮೇಲೆ ಅತ್ಯಂತ ಕಡಿಮೆ ₹2.29 ಪೈಸಗೆ ಲೀಸ್‌ ನೀಡಿದ್ದಾರೆ. ಇದೇ ರೀತಿಯಲ್ಲಿ ಪವನ ವಿದ್ಯುತ್‌ ಯೋಜನೆಗಾಗಿ ಎಂಎಸ್‌ಪಿಎಲ್‌ ಗ್ಯಾಸಸ್‌ ಲಿಮಿಟೆಡ್‌ ಇವರಿಗೆ ಈಗಾಗಲೇ ಗುತ್ತಿಗೆ ಆಧಾರದ ಮೇಲೆ ಹೊಸಪೇಟೆಯ ಅಮರಾವತಿಯಲ್ಲಿ 9.20 ಹೆಕ್ಟೇರ್‌ (22.73 ಎಕರೆ) ಜಮೀನನ್ನು ಕಾಯಂ ಆಗಿ ಮಂಜೂರು ಮಾಡಿಸಿಕೊಳ್ಳುವ ಮೂಲಕ ಹೊಸಪೇಟೆಯನ್ನು ಮಾರಾಟಕ್ಕೆ ಇಟ್ಟಿದ್ದಾರೆ ಎಂದು ಆರೋಪಿಸಿದರು.

ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಎಸ್‌.ಸಂಜೀವರೆಡ್ಡಿ, ಬಿಜೆಪಿ ಬಳ್ಳಾರಿ ವಿಭಾಗದ ಸಹ ಪ್ರಭಾರಿ ಚನ್ನಬಸವನಗೌಡ ಪಾಟೀಲ್, ಜಿಲ್ಲಾ ವಕ್ತಾರ ಅಶೋಕ ಜೀರೆ ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗ್ರಾಹಕರ ಅನುಕೂಲಕ್ಕಾಗಿ ಬಿಡಿಸಿಸಿ ನೂತನ ಶಾಖೆ ಆರಂಭ
ಡಿ.ಕೆ. ಶಿವಕುಮಾರ್‌ ಸ್ಟಿಂಗ್ ಆಪರೇಶನ್‌ ಪಿತಾಮಹ: ಶೆಟ್ಟರ್