ಕಾರಟಗಿ: ಸಾರ್ವಜನಿಕ ಸ್ಥಳಗಳಲ್ಲಿ ಕಸ ಎಸೆಯುವುದನ್ನು ತಡೆಯಲು ಕಾರಟಗಿ ಪುರಸಭೆ ಹೊಸ ರೀತಿಯ ಜಾಗೃತಿ ಅಭಿಯಾನಕ್ಕೆ ಮುಂದಾಗಿದೆ. ಸಾರ್ವಜನಿಕರು ಕಸ ಹಾಕುತ್ತಿದ್ದ ಸ್ಥಳಗಳನ್ನು ಸ್ವಚ್ಛಗೊಳಿಸಿ, ಅದೇ ಜಾಗದಲ್ಲಿ ವಿವಿಧ ಬಣ್ಣಗಳ ರಂಗೋಲಿ ಬಿಡಿಸುವ ಮೂಲಕ ಸ್ವಚ್ಛತೆ ಕುರಿತು ಜನರಲ್ಲಿ ಅರಿವು ಮೂಡಿಸಲಾಗುತ್ತಿದೆ.
ಸಮುದಾಯ ಸಂಘಟಕರು ವಾರ್ಡ್‌ಗಳ ಸಾರ್ವಜನಿಕರನ್ನು ಸ್ಥಳಕ್ಕೆ ಕರೆಸಿ, ಮತ್ತೆ ಅದೇ ಜಾಗದಲ್ಲಿ ಕಸದ ರಾಶಿ ನಿರ್ಮಾಣವಾಗದಂತೆ ಎಚ್ಚರಿಕೆ ನೀಡಿದರು. ಮನೆಗಳಲ್ಲಿ ಉತ್ಪತ್ತಿಯಾಗುವ ಹಸಿ ಕಸ, ಒಣ ಕಸ, ಸ್ಯಾನಿಟರಿ ತ್ಯಾಜ್ಯ ಹಾಗೂ ವಿಶೇಷ ಕಾಳಜಿಯ ತ್ಯಾಜ್ಯ ಸೇರಿದಂತೆ ನಾಲ್ಕು ವಿಧದ ತ್ಯಾಜ್ಯಗಳನ್ನು ಪ್ರತ್ಯೇಕವಾಗಿ ವಿಂಗಡಿಸಿ, ಪ್ರತಿದಿನ ಬರುವ ಪುರಸಭೆಯ ಕಸ ಸಂಗ್ರಹಣಾ ವಾಹನಕ್ಕೆ ನೀಡುವಂತೆ ತಿಳಿಸಿದರು.
ಬಯಲು ಶೌಚಕ್ಕೆ ಕಡಿವಾಣ ಹಾಕಿ: ಸಮುದಾಯ ಸಂಘಟಕರು ಮಾತನಾಡಿ, ಯಾವುದೇ ಕಾರಣಕ್ಕೂ ಬಯಲು ಪ್ರದೇಶಗಳಲ್ಲಿ ಮಲ-ಮೂತ್ರ ವಿಸರ್ಜನೆ ಮಾಡಬಾರದು. ಸಾರ್ವಜನಿಕ ಶೌಚಾಲಯಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಮನವಿ ಮಾಡಿದರು.ಕಸ ನಿರ್ವಹಣೆ ಕುರಿತು ಸಾರ್ವಜನಿಕರಿಗೆ ಮಾಹಿತಿ ನೀಡಿ, ನಿಯಮ ಉಲ್ಲಂಘಿಸಿ ರಸ್ತೆ ಬದಿ ಕಸ ಹಾಕುವವರಿಗೆ ದಂಡ ವಿಧಿಸಲಾಗುತ್ತದೆ ಎಂದು ಎಚ್ಚರಿಸಿದರು.
ಪುರಸಭೆ ಆಡಳಿತ ಕೆಲವು ವಾರ್ಡ್‌ಗಳಲ್ಲಿ ಸ್ವಚ್ಛತೆಗೆ ಆದ್ಯತೆ ನೀಡುತ್ತಿಲ್ಲ. ಕಸ ಸಂಗ್ರಹಣಾ ವಾಹನಗಳು ಪ್ರತಿದಿನ ನಿಗದಿತ ಸಮಯಕ್ಕೆ ಕೆಲವು ವಾರ್ಡ್‌ಗಳಿಗೆ ಬಾರದಿರುವುದರಿಂದ ಸಾರ್ವಜನಿಕರು ಅನಿವಾರ್ಯವಾಗಿ ರಸ್ತೆ ಬದಿ ಕಸ ಎಸೆಯುವಂತಾಗಿದೆ. ಪುರಸಭೆ ಆಡಳಿತ ನಿತ್ಯದ ಕಸ ವಿಲೇವಾರಿ ವ್ಯವಸ್ಥೆಯನ್ನು ಸಮರ್ಪಕವಾಗಿ ನಿರ್ವಹಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದರು.
ವಾರ್ಡ್ ನಿವಾಸಿಗಳಾದ ದುರ್ಗಮ್ಮ, ಯಲ್ಲಮ್ಮ, ವಿಜಯಲಕ್ಷ್ಮೀ, ಸಮುದಾಯ ಸಂಘಟಕರಾದ ಅರುಣಾ ಬಾಯಿ, ಮಡಿವಾಳ ದೇವರಮ್ಮ, ಉಮಾದೇವಿ, ಗಂಗಮ್ಮ, ಮಡಿವಾಳ ಭೀಮಮ್ಮ ಉಪಸ್ಥಿತರಿದ್ದರು.