ಕನ್ನಡಪ್ರಭ ವಾರ್ತೆ ಮಂಡ್ಯ
ಭೂಮಿಬೆಳಗು ಸಾಂಸ್ಕೃತಿಕ ಸಂಘ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ನಗರದ ನಾಲ್ವಡಿ ಕೃಷ್ಣರಾಜ ಒಡೆಯರ್ ಕಲಾ ಮಂದಿರದಲ್ಲಿ ನಡೆದ ಸಿಜಿಕೆಗೆ ರಂಗನಮನ, ನೀನಾಸಂ ನಾಟಕೋತ್ಸವ-೨೦೨೬ ನಾಟಕ ಪ್ರದರ್ಶನ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ನಾಟಕೋತ್ಸವದಂತಹ ಸಾಂಸ್ಕೃತಿಕ ಕಾರ್ಯಕ್ರಮಗಳು ಕಲಾವಿದರನ್ನು ಪ್ರೋತ್ಸಾಹಿಸುವುದರ ಜೊತೆಗೆ ಕನ್ನಡ ರಂಗಭೂಮಿಯ ಬೆಳವಣಿಗೆಗೆ ಸಹಕಾರಿಯಾಗಿವೆ ಎಂದರು.
ತಮ್ಮ ತಂದೆಯವರು ಸ್ಥಾಪಿಸಿ ಬೆಳೆಸಿದ ಸಂಸ್ಥೆಯ ವೇದಿಕೆಯಲ್ಲಿ ನಾಟಕ ಪ್ರದರ್ಶನ ನಡೆಯುತ್ತಿರುವುದು ಸಂತೋಷದ ಸಂಗತಿ. ಹಿರಿಯರು ಹಾಕಿಕೊಟ್ಟ ಮಾರ್ಗದಲ್ಲಿ ಸಂಸ್ಥೆಯ ಚಟುವಟಿಕೆಗಳನ್ನು ಮುಂದುವರಿಸಿಕೊಂಡು ಹೋಗುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದರು.ವಿಧಾನ ಪರಿಷತ್ ಸದಸ್ಯ ಮಧು ಜಿ. ಮಾದೇಗೌಡ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ನಾಟಕಗಳ ಬಗ್ಗೆ ತಮಗೆ ಅಪಾರ ಆಸಕ್ತಿಯಿದ್ದು, ಸಮಯದ ಅಭಾವದಿಂದ ಇಂತಹ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಭಾಗವಹಿಸಲು ಸಾಧ್ಯವಾಗುತ್ತಿಲ್ಲ. ಆದರೂ ಕನ್ನಡ ರಂಗಭೂಮಿ ಮತ್ತು ಸಾಂಸ್ಕೃತಿಕ ಚಟುವಟಿಕೆಗಳ ಬಗ್ಗೆ ವಿಶೇಷ ಒಲವಿದೆ ಎಂದರು.
ಪತ್ರಕರ್ತ ಡಿ.ಎನ್.ಶ್ರೀಪಾದು ಮಾತನಾಡಿ, ಸಿ.ಜಿ.ಕೆ.ಅವರ ಜೀವನದ ಕೊನೆಯ ದಿನಗಳ ಕುರಿತು ಪುಸ್ತಕದಲ್ಲಿ ಓದುವಾಗ ಕಣ್ಣೀರು ಬಂತು. ಅಷ್ಟೊಂದು ನೋವು ಮತ್ತು ಸಂಕಷ್ಟಗಳ ನಡುವೆಯೂ ಅವರು ಬದುಕಿನಲ್ಲಿ ತೋರಿದ ಧೈರ್ಯ ಹಾಗೂ ಸಾಧನೆ ಸ್ಮರಣೀಯ. ದೈಹಿಕ ಸಂಕಷ್ಟಗಳ ನಡುವೆಯೂ ಜೀವನದಲ್ಲಿ ಮುನ್ನಡೆಯಲು ಪ್ರಯತ್ನಿಸಿದ ಅವರಿಗೆ ಅನೇಕ ಕಷ್ಟಗಳು ಎದುರಾಗಿದ್ದವು. ಇಂತಹ ಸಂದರ್ಭದಲ್ಲಿ ಅವರ ಬೆನ್ನಿಗೆ ನಿಂತು ಆತ್ಮಸ್ಥೈರ್ಯ ತುಂಬಿದವರ ಸಹಕಾರವೂ ಮಹತ್ವದ್ದಾಗಿತ್ತು. ಅವರ ಬದುಕು ಮತ್ತು ಸಾಧನೆ ಇಂದಿನ ಪೀಳಿಗೆಗೆ ಸ್ಫೂರ್ತಿಯಾಗಬೇಕು ಎಂದರು.
ಕಾರ್ಯಕ್ರಮದಲ್ಲಿ ಸಿ.ಜಿ.ಕೆ. ಅವರ ಧರ್ಮಪತ್ನಿ ಬೆಂಗಳೂರಿನ ಜಯಲಕ್ಷ್ಮಿ ಕೃಷ್ಣಸ್ವಾಮಿ ಅವರಿಗೆ ರಂಗಗೌರವ ಸಲ್ಲಿಸಲಾಯಿತು. ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಜಿಲ್ಲಾಧ್ಯಕ್ಷ ಎಂ.ವಿ. ಧರಣೇಂದ್ರಯ್ಯ, ಭೂಮಿ ಬೆಳಗು ಸಾಂಸ್ಕೃತಿಕ ಸಂಘದ ಅಧ್ಯಕ್ಷ ಮಂಗಲ ಎಂ. ಯೋಗೀಶ್, ಕರ್ನಾಟಕ ಸಂಘದ ಪ್ರಧಾನ ಕಾರ್ಯದರ್ಶಿ ಚಂದಗಾಲು ಲೋಕೇಶ್ ಸೇರಿದಂತೆ ಇತರರು ಉಪಸ್ಥಿತರಿದ್ದರು.