ಬೆಂಗಳೂರು : ಮಳೆ ಅಬ್ಬರಕ್ಕೆ ಪಾಟರಿ ಟೌನ್ ಬೋರ್ ಬ್ಯಾಂಕ್ ರಸ್ತೆಯಲ್ಲಿ ನಿರ್ಮಾಣ ಹಂತದ ಮೆಟ್ರೋ ಸುರಂಗ ನಿಲ್ದಾಣದ ಮೇಲ್ಭಾಗದ ರಸ್ತೆ ಮಣ್ಣು ಕುಸಿದು ದೊಡ್ಡ ಕಂದಕ ಉಂಟಾಗಿ ಕೆಲಕಾಲ ಆತಂಕ ಸೃಷ್ಟಿಸಿತು. ಘಟನೆಯಿಂದ ವಾಹನ ಸಂಚಾರಕ್ಕೆ ತೊಡಕುಂಟಾಗಿ ಪ್ರಯಾಣಿಕರು ಪರದಾಡಿದರು.
ಕಾಳೇನ ಅಗ್ರಹಾರ-ನಾಗವಾರದ ಗುಲಾಬಿ ಮಾರ್ಗಕ್ಕಾಗಿ ನಿರ್ಮಿಸಲಾಗುತ್ತಿರುವ ಸುರಂಗ ನಿಲ್ದಾಣ ಕಾಮಗಾರಿ ಇದಾಗಿದೆ. ಸಂಜೆ 5.45ರ ಹೊತ್ತಿಗೆ ದೊಡ್ಡ ಶಬ್ದದೊಂದಿಗೆ ಹಲವು ಅಡಿಗಳಷ್ಟು ಮಣ್ಣು ಕುಸಿಯಿತು. ಅದೃಷ್ಟವಶಾತ್ ಆ ವೇಳೆ ರಸ್ತೆ ಮೇಲೆ ಪ್ರಯಾಣಿಕರು ಸಂಚರಿಸುತ್ತಿರಲಿಲ್ಲ ಹಾಗೂ ಮಣ್ಣು ಕುಸಿತದ ಸ್ಥಳದಲ್ಲಿ ಯಾವುದೇ ಕಾರ್ಮಿಕರು ಇರದಿದ್ದರಿಂದ ಬಚಾವಾಗಿದ್ದಾರೆ.
ಪಾಟರಿ ಟೌನ್ ಮೆಟ್ರೋ ನಿಲ್ದಾಣಕ್ಕಾಗಿ ಮಣ್ಣು ಅಗೆಯಲು ಮಾಡಿದ್ದ ತಾತ್ಕಾಲಿಕ ತಡೆಗೋಡೆ ಪೈಲ್ಸ್ ವ್ಯವಸ್ಥೆ ಕುಸಿದ ಪರಿಣಾಮ ಬೋರ್ ಬ್ಯಾಂಕ್ ರಸ್ತೆ ಮಧ್ಯದಲ್ಲೇ ಗುಂಡಿ ಉಂಟಾಯಿತು. ಹೀಗಾಗಿ ರಸ್ತೆಯನ್ನು ಮುಚ್ಚಿ ವಾಹನ ಚಾಲನೆಗೆ ಪರ್ಯಾಯ ಮಾರ್ಗ ಕಲ್ಪಿಸಲಾಗಿದೆ. ದುರಸ್ತಿ ಆಗುವವರೆಗೆ ವಾಹನ ಸಂಚಾರ ನಿರ್ಬಂಧಿಸಲಾಗಿದೆ ಎಂದು ಬೆಂಗಳೂರು ಮೆಟ್ರೋ ನಿಗಮ ತಿಳಿಸಿದೆ.
ಮಳೆ ನಿಂತ ಬಳಿಕ ಮಣ್ಣನ್ನು ತೆರವುಗೊಳಿಸುವ ಕೆಲಸ ನಡೆಸಲಾಗುವುದು. ಬಳಿಕ ಪುನಃ ಪೈಲ್ಸ್ ವ್ಯವಸ್ಥೆ ಮರು ರೂಪಿಸಿಕೊಂಡು ಸುರಂಗ ನಿಲ್ದಾಣದ ಕಾಮಗಾರಿ ಮುಂದುವರಿಸಲಿದ್ದೇವೆ. ಎಚ್ಚರಿಕೆಯಿಂದ ಕಾಮಗಾರಿ ನಡೆಸಲು ಅಗತ್ಯ ಕ್ರಮ ವಹಿಸಲಾಗಿದ್ದು, ಜಾಗೃತಿ ವಹಿಸುವಂತೆ ಕಾರ್ಮಿಕರಿಗೂ ಸೂಚಿಸಲಾಗಿದೆ ಎಂದು ಮೆಟ್ರೋ ಅಧಿಕಾರಿಗಳು ತಿಳಿಸಿದ್ದಾರೆ.
ಕಳೆದ ವರ್ಷ ಬ್ರಿಗೇಡ್ ರಸ್ತೆ ಮೆಟ್ರೋ ಸುರಂಗ ಕಾಮಗಾರಿಯಿಂದಾಗಿ ರಸ್ತೆಯ ಮಣ್ಣು ಕುಸಿದು ದೊಡ್ಡ ಪ್ರಮಾಣದ ಗುಂಡಿ ಉಂಟಾಗಿತ್ತು. ಇಲ್ಲಿ ಬೈಕ್ ಸವಾರನೊಬ್ಬ ಬಿದ್ದು ಗಾಯಗೊಂಡಿದ್ದ. ಅದೇ ರೀತಿ ಮೆಟ್ರೋದಿಂದಾಗಿ ಬನ್ನೇರುಘಟ್ಟ ರಸ್ತೆಯ ಚಿನ್ನಯ್ಯನಪಾಳ್ಯದಲ್ಲಿಯೂ ಮಣ್ಣು ಕುಸಿದಿತ್ತು.