ಗಜೇಂದ್ರಗಡ:
ತಾಲೂಕಿನಲ್ಲಿ ರೋಹಿಣಿ ಮಳೆಯಿಂದ ಬೆಟ್ಟ-ಗುಡ್ಡಗಳಲ್ಲಿ ಕಿರು ಜಲಪಾತಗಳು ಮೈದುಂಬಿ ಹರಿಯುತ್ತಿವೆ. ಗಜೇಂದ್ರಗಡ ತಾಲೂಕಿನ ದಕ್ಷಿಣ ಕಾಶಿ ಕಾಲಕಾಲೇಶ್ವರ ಬೆಟ್ಟದಲ್ಲಿ ಅಂತರ ಗಂಗೆ ಹಾಗೂ ಸುತ್ತಲಿನ ಬೆಟ್ಟದಲ್ಲಿ ಕಿರು ಜಲಪಾತಗಳು ಸೃಷ್ಟಿಯಾಗಿ ಪರಿಸರ ಸೌಂದರ್ಯ ಹೆಚ್ಚಿಸಿದೆ.
ಸೃಷ್ಟಿಕರ್ತನೂ ಒಮ್ಮೆ ಬೆರಗಾಗುವಂತಹ ಅನುಭವ. ಕಣ್ಣು ಹಾಯಿಸಿದಲ್ಲೆಲ್ಲ ಹಚ್ಚ ಹಸುರಿನ ರಮಣೀಯ ದೃಶ್ಯ. ಊಹೆಗೂ ನಿಲುಕದ ಚಿತ್ತಾರ ಮೈತುಂಬಿ ಹರಿಯುವ ಗುಡ್ಡದ ಪಡೆಯಿಂದ ವಯ್ಯಾರದಿಂದ ಧರೆಗೆ ಹಾಲಿನ ಕಡಲಿನಂತೆ ಧುಮುಕುತ್ತಿರುವ ಕಿರು ಜಲಪಾತಗಳು ನೋಡುವ ಕಣ್ಣಿಗೆ ರಸದೌತಣ ನೀಡುತ್ತಿವೆ. ವಿಶಾಲ ಹೃದಯದ ಪ್ರತೀಕದಂತಿರುವ ಇಲ್ಲಿನ ಬೆಟ್ಟದ ಮೇಲೆ ಹಾಗೂ ಕಣವಿ ವೀರಭದ್ರೇಶ್ವರ ಮಂದಿರದ ಎದುರಿನ ರಸ್ತೆ, ಎಡಗಡೆ ಗುಡ್ಡದ ಅಂಚಿನಿಂದ ನೈಜ ಸೌಂದರ್ಯ ಸವಿಯುತ್ತ ಒಂದು ಕಿಮೀ ವರೆಗೂ ನನ್ನನ್ನು ನೋಡಲು ಬನ್ನಿ ಎಂದು ಕೈ ಬೀಸಿ ಕರೆಯುತ್ತಿವೆ.ಅಸಂಖ್ಯಾತ ಭಕ್ತರ ಆರಾಧ್ಯದೈವ ದಕ್ಷಿಣಕಾಶಿ ಪ್ರಸಿದ್ಧಿಯ ಕಾಲಕಾಲೇಶ್ವರ ದೇವಸ್ಥಾನದ ಅಂತರಗಂಗೆ ಇಡೀ ನಾಡಿಗೆ ಚಿರಪರಿಚಿತ. ಆದರೆ ಅದಕ್ಕೆ ಹೊಂದಿರುವ ಬೆಟ್ಟಗಳಲ್ಲಿ ಮಳೆಯಾದಾಗ ತಾತ್ಕಾಲಿಕಾಗಿ ಉದ್ಭವವಾಗುವ ಸಣ್ಣ-ಸಣ್ಣ ಜಲಪಾತಗಳು ಹೆಚ್ಚಿನ ಪ್ರಚಾರ ದೊರೆಯದೆ ನಾಡಿಗೆ ಅಪರಿಚಿತವಾಗಿಯೇ ಉಳಿದು ಕೊಂಡಿದೆ. ಗುಡ್ಡದ ಅಂಚಿನಿಂದ ಪ್ರಕೃತಿ ಮಾತೆಯ ಬೆಟ್ಟದ ಕಲ್ಲು ಬಂಡೆಗಳ ಮಧ್ಯದಲ್ಲಿ ಅಬ್ಬರದೊಂದಿಗೆ ನುಸುಳುವ ಜಲ ಧಾರೆಯು, ವೈಯ್ಯಾರದಿಂದ ಧುಮುಕುವ ತಿಳಿ ಹಸಿರು ನೀಲಿ ಬಣ್ಣದ ಜಲ ವೈಭವದ ನಯನಮನೋಹರದ ಸೊಬಗನ್ನು ಕಂಡ ಜನ ಆನಂದಿಸುತ್ತಿದ್ದಾರೆ.