ಹೊನ್ನಾಳಿ: ಎಂ.ಇ.ಎಸ್. ಸಂಘಟನೆಯವರಿಂದ ಬೆಳಗಾವಿಯಲ್ಲಿ ಇತ್ತೀಚೆಗೆ ರಾಜ್ಯ ಸಾರಿಗೆ ಬಸ್ ಕಂಡಕ್ಟರ್ ಮೇಲೆ ನಡೆಸಿರುವ ಮಾರಣಾಂತಿಕ ಹಲ್ಲೆ ಹಾಗೂ ಸುಳ್ಳು ಫೋಕ್ಸೋ ಕೇಸ್ ದಾಖಲಿಸಿದ್ದನ್ನು, ಹಾಗೂ ಸಂಗೊಳ್ಳಿ ರಾಯಣ್ಣ ಪ್ರತಿಮೆಯನ್ನು ಈ ಹಿಂದೆ ವಿಘ್ನಗೊಳಿಸಿರುವುದನ್ನು ಖಂಡಿಸಿ ಶನಿವಾರ ತಾಲೂಕು ವಿಶ್ವ ಕರ್ನಾಟಕ ರಕ್ಷಣಾ ವೇದಿಕ ಹಾಗೂ ವಿವಿಧ ಕನ್ನಡ ಪರ ಸಂಘಟನೆಗಳು ತಹಸೀಲ್ದಾರ್ ಪಟ್ಟರಾಜ ಗೌಡಗೆ ಮನವಿ ಪತ್ರ ಸಲ್ಲಿಸಿದರು.
ವಿಶ್ವ ಕರ್ನಾಟಕ ರಕ್ಷಣಾ ವೇದಿಕೆ ತಾಲೂಕು ಅಧ್ಯಕ್ಷ ಪ್ರದೀಪ್ ಮಾರಗೊಂಡನಹಳ್ಳಿ ಮಾತನಾಡಿ, ಬೆಳಗಾವಿಯಲ್ಲಿ ಇತ್ತೀಚೆಗೆ ರಾಜ್ಯ ರಸ್ತೆ ಸಾರಿಗೆ ಬಸ್ ಕಂಡಕ್ಟರ್ ಮೇಲೆ ನಡೆಸಿರುವ ಮಾರಣಾಂತಿಕ ಹಲ್ಲೆ ಹಾಗೂ ಸುಳ್ಳು ಫೋಕ್ಸೋ ಕೇಸ್ ದಾಖಲಿಸಿ ವಾಪಾಸ್ ಪಡೆದಿದ್ದಾರೆ. ಕನ್ನಡ ಮಾತಾಡಿ ಎಂದು ಬಸ್ ಕಂಡಕ್ಟರ್ ಹೇಳಿದ್ದಕ್ಕೆ ತಿರುಗಿ ಕಂಡಕ್ಟರ್‌ನನ್ನೇ ಮರಾಠಿ ಮಾತಾಡುವಂತೆ ಒತ್ತಾಯಿಸಿ ಹಲ್ಲೆ ನಡೆಸಿದ್ದಲ್ಲದೇ ಕನ್ನಡಿಗರಿಗೆ ಅವಮಾನ ಮಾಡುವ ಮೂಲಕ ಎಂ.ಇ ಎಸ್. ನವರ ಪುಂಡಾಟಿಕೆ ನೆಡೆಸಿಕೊಂಡು ಬರುತ್ತಿದ್ದು ಇದನ್ನು ಕರ್ನಾಟಕದ ಜನತೆ ಎಂದಿಗೂ ಸಹಿಸುವುದಿಲ್ಲ ಎಂದರು.ಎಂ.ಇ.ಎಸ್. ಸಂಘಟನೆಯ ಕೆಲ ಮುಖಂಡರುಗಳು ಯಾವುದಾದರೊಂದು ರೀತಿಯಲ್ಲಿ ಪುಂಡಾಟಿಕೆ ಮತ್ತು ಉದ್ಧಟತನವನ್ನು ಪ್ರತೀ ಬಾರಿಯೂ ಮಾಡುತ್ತಲೇ ಬಂದಿದ್ದಾರೆ. ದಶಕಗಳಿಂದಲೂ ಎಂಇಎಸ್ ಮತ್ತು ಶಿವಸೇನೆ ಬೆಳಗಾವಿ ಗಡಿಭಾಗದಲ್ಲಿ ಮರಾಠಿಗರು ಮತ್ತು ಕನ್ನಡಿಗರ ಮಧ್ಯೆ ಭಾಷಾ ಸಾಮರಸ್ಯವನ್ನು ಹದಗೆಡಿಸಿ ದ್ವೇಷದ ವಾತಾವರಣ ಮೂಡಿಸುತ್ತಿದ್ದಾರೆ ಎಂದರು.ಈ ಕೃತ್ಯದಿಂದ ಕರ್ನಾಟಕದ ಎಲ್ಲಾ ಕನ್ನಡಿಗರಿಗೆ ಅವಮಾನವಾಗಿರುತ್ತದೆ. ಅಲ್ಲದೇ ಮಹಾರಾಷ್ರದ ಕೊಲ್ಲಾಪುರದಲ್ಲಿ ಎಂ.ಇ.ಎಸ್. ಹಾಗೂ ಶಿವಸೇನೆಯ ಸಂಘಟನೆಗಳು ಸಂಗೊಳ್ಳಿ ರಾಯಣ್ಣ ಪ್ರತಿಮೆಯನ್ನು ಈ ಹಿಂದೆ ವಿಘ್ನಗೊಳಿಸಿರುತ್ತಾರೆ. ಇವರ ಈ ದುಷ್ಕೃತ್ಯಗಳಿಂದ ಬೇಸತ್ತ ಕನ್ನಡಪರ ಸಂಘಟನೆಗಳು ರೊಚ್ಚಿಗೆದ್ದು ಇವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಂಡು ಇವರನ್ನು ಕರ್ನಾಟಕದಿಂದಲೇ ಗಡಿಪಾರು ಮಾಡಬೇಕು ಎಂದರು. ಹೊಳೆಹರಳಹಳ್ಳಿ ಗ್ರಾಮ ಘಟಕದ ಅಧ್ಯಕ್ಷ ಅಣ್ಣಪ್ಪ,ಸೋಮೇಶ್ವರಯ್ಯ, ಸುಜಯ್,ಮಧು, ಬಸವರಾಜ್, ಆಂಜನೇಯ, ಸುನಿಲ್, ಯಶವಂತ್, ಪ್ರಮೋದ್, ಅಭಿ, ಮಂಜು ಇದ್ದರು.