ಕನ್ನಡಪ್ರಭ ವಾರ್ತೆ ಮುದ್ದೇಬಿಹಾಳಅಭಿವೃದ್ಧಿ ಪೂರಕ ಯೋಜನೆಗಳನ್ನು ಕೈಗೊಳ್ಳದೆ, ಸುಳ್ಳು ಭರವಸೆಗಳನ್ನು ನೀಡಿದ್ದಲ್ಲದೆ ತಮ್ಮ ಸರ್ಕಾರದ ದುರಾಡಳಿತ ಮುಚ್ಚಿಟ್ಟುಕೊಳ್ಳಲು ಬಿಜೆಪಿಯವರು ಹಿಂದೂ-ಮುಸ್ಲಿಂ ಎಂಬ ಕೋಮು ಭಾವನೆ ಮೂಡಿಸುತ್ತಿದ್ದಾರೆ. ಈ ಮೂಲಕ ಗಲಭೆ ಸೃಷ್ಟಿಸಿ ದೇಶದಲ್ಲಿ ಅಶಾಂತಿಯ ವಾತಾವರಣ ನಿರ್ಮಿಸಿ ಜನರ ನೆಮ್ಮದಿ ಹಾಳು ಮಾಡುತ್ತಿದ್ದಾರೆ ಎಂದು ಶಾಸಕ ಹಾಗೂ ಕರ್ನಾಟಕ ರಾಜ್ಯ ಸಾಬೂನು ಮತ್ತು ಮಾರ್ಜಕ ನಿಗಮದ ಅಧ್ಯಕ್ಷ ಸಿ.ಎಸ್.ನಾಡಗೌಡ(ಅಪ್ಪಾಜಿ) ಬಿಜೆಪಿ ವಿರುದ್ಧ ಹರಿಹಾಯ್ದರು.
ಪ್ರಧಾನಿ ನರೇಂದ್ರ ಮೋದಿಯವರು ಬಾಂಡ್ ಮೂಲಕ ₹9 ಸಾವಿರ ಕೋಟಿ ಲಂಚ ಪಡೆದುಕೊಂಡಿದ್ದಾರೆ. ಅದರ ಲೆಕ್ಕ ಕೊಡಿ ಎಂದರೆ ಬಾಂಡ್ ಮೂಲಕ ಪಡೆದ ಹಣದ ಬಗ್ಗೆ ಮಾಹಿತಿ ಕೊಡುತ್ತಿಲ್ಲ. ದೇಶದಲ್ಲಿನ ಯುವ ಜನಾಂಗಕ್ಕೆ ಉದ್ಯೋಗ ಕೊಡಲು ಸಾಧ್ಯವಾಗಲಿಲ್ಲ. ಇದರಿಂದ ನಿರುದ್ಯೋಗ ಸಮಸ್ಯೆ ಹೆಚ್ಚಾಗಿದ್ದು, ಯುವಕರು ಸಂಕಷ್ಟದಲ್ಲಿದ್ದಾರೆ. ಕಾರಣ ಜನರು ಬಿಜೆಪಿಯವರ ಪೊಳ್ಳು ಆಶ್ವಾಸನೆ ಹಾಗೂ ಭರವಸೆಗಳನ್ನು ನಂಬದೆ ಜನಪರವಾದ ಉತ್ತಮ ಆಡಳಿತ ನೀಡುವ ಕಾಂಗ್ರೆಸ್ ಬೆಂಬಲಿಸುವಂತೆ ಮನವಿ ಮಾಡಿದರು.
ವಿಜಯಪುರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ರಾಜು ಆಲಗೂರ ಮಾತನಾಡಿ, 72 ಸಾವಿರ ಕೋಟಿ ರೈತರ ಸಾಲಮನ್ನಾ ಮಾಡಿದ ಕೀರ್ತಿ ಕೇಂದ್ರದ ಕಾಂಗ್ರೆಸ್ ಸರ್ಕಾರಕ್ಕೆ ಸಲ್ಲುತ್ತದೆ. ಅಲ್ಲಿಂದ ಇಲ್ಲಿಯವರೆಗೆ ಯಾವ ಕೇಂದ್ರ ಸರ್ಕಾರಗಳು ರೈತರ ಸಾಲಮನ್ನಾ ಮಾಡಲು ಮನಸು ಮಾಡಲಿಲ್ಲ. ಇಂದು ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದ ಬಿಜೆಪಿ ಸರ್ಕಾರ ತನ್ನ ಹೊಣೆಗಾರಿಕೆ ಮರೆತು ಬಿಟ್ಟಿದೆ ಎಂದು ಆರೋಪ ಮಾಡಿದರು.ಜಿಎಸ್‌ಟಿ ಮೂಲಕ ಕೇಂದ್ರಕ್ಕೆ ಸಂದಾಯವಾಗಿರುವ ಹಣವನ್ನು ಮರಳಿ ರಾಜ್ಯಕ್ಕೆ ಕೊಡದೇ, ಬರಗಾಲ ನಿರ್ವಹಣೆಗಾಗಿ ರೈತರಿಗೆ ಬರ ಪರಿಹಾರ ರೂಪದಲ್ಲಿ ಕೊಡಿ ಎಂದರೂ ಹಣ ಕೊಡುತ್ತಿಲ್ಲ. ಆದರೆ ದೇಶದಲ್ಲಿನ ಶ್ರೀಮಂತ ಬಂಡವಾಳಶಾಹಿಗಳಾದ ಅದಾನಿ, ಅಂಬಾನಿ ಸೇರಿದಂತೆ ಸುಮಾರು ೨೧ ಜನ ಶ್ರೀಮಂತರು ದೇಶಕ್ಕೆ ಕೊಡಬೇಕಾದ ₹14 ಲಕ್ಷ ಕೋಟಿ ಸಾಲ ಮನ್ನಾ ಮಾಡುವ ಮೂಲಕ ರೈತರಿಗೆ ಮತ್ತು ಮಧ್ಯಮ ವರ್ಗಕ್ಕೆ ಅನ್ಯಾಯ ಮಾಡಿದ್ದಾರೆ ಎಂದು ಆರೋಪಿಸಿದರು.
----------
ಕೋಟ್ಮೋದಿಯವರ ಹಾಗೆ ಜಾತಿ- ಧರ್ಮಗಳ ಮಧ್ಯೆ ವೈಷಮ್ಯ ಸೃಷ್ಟಿಸಿ ಜನರ ದಾರಿ ತಪ್ಪಿಸಿಲ್ಲ. ಸುಳ್ಳು ಭರವಸೆಗಳನ್ನು ಕೊಟ್ಟಿಲ್ಲ. ನಾವು ಕೊಟ್ಟ ಭರವಸೆಗಳನ್ನು ಈಡೇರಿಸಿದ್ದೇವೆ ಎಂಬ ಕಾರಣಕ್ಕೆ ನಮ್ಮ ದುಡಿಮೆಗೆ ಕೂಲಿ ರೂಪದಲ್ಲಿ ಮತ ನೀಡಿ ಎಂದು ಕೇಳುತ್ತಿದ್ದೇವೆ.
- ಸಿ.ಎಸ್.ನಾಡಗೌಡ(ಅಪ್ಪಾಜಿ), ಶಾಸಕ, ಕರ್ನಾಟಕ ರಾಜ್ಯಸಾಬೂನು ಮತ್ತು ಮಾರ್ಜಕ ನಿಮಗದ ಅಧ್ಯಕ್ಷ
-------ಈ ಬಾರಿ ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ದೇಶದ ಎಲ್ಲ ರೈತರ ಸಾಲ ಮನ್ನಾ ಮಾಡುವ ಮೂಲಕ ರೈತರನ್ನು ಸಾಲ ಮುಕ್ತರನ್ನಾಗಿ ಮಾಡಲಾಗುತ್ತದೆ. ಕಳೆದ ಮೂರು ಬಾರಿ ವಿಜಯಪುರ ಜಿಲ್ಲೆಯ ಸಂಸದರಾಗಿರುವ ರಮೇಶ ಜಿಗಜಿಣಗಿಯವರಿಂದ ಜಿಲ್ಲೆಗೆ ಅವರ ಸಾಧನೇ ಶೂನ್ಯವಾಗಿದೆ. ಈ ಬಾರಿ ದೇಶದಲ್ಲಿ ಮೋದಿ ಹವಾ ಕಡಿಮೆಯಾಗಿದೆ. ಈಗ ಕಾಂಗ್ರೆಸ್ ಗಾಳಿ ಬೀಸುತ್ತಿದ್ದು, ಈ ಬಾರಿ ಕಾಂಗ್ರೆಸ್ ಅಭ್ಯರ್ಥಿಗಳಿಗೆ ಮತ ನೀಡಿ ಆಶೀರ್ವದಿಸಿ.
- ರಾಜು ಆಲಗೂರ, ಕಾಂಗ್ರೆಸ್ ಅಭ್ಯರ್ಥಿ