ಕೇಂದ್ರ ಸರ್ಕಾರದಿಂದ ದೇಶದಲ್ಲಿ ಅಸಮಾನತೆ ಸೃಷ್ಟಿ

KannadaprabhaNewsNetwork |  
Published : Jun 13, 2024, 12:47 AM IST
ಹರಿಹರದಲ್ಲಿ ಸಿಐಟಿಯುನಿಂದ ಆಯೋಜಿಸಿದ್ದ ಕಾರ್ಮಿಕರ ತಾಲೂಕು ಸಮಾವೇಶದಲ್ಲಿ ಮಾನವ ಬಂಧುತ್ವ ವೇದಿಕೆ ರಾಜ್ಯ ಸಂಚಾಲಕ ಡಾ.ಎ.ಬಿ.ರಾಮಚಂದ್ರಪ್ಪ ಮಾತನಾಡಿದರು. ನಗರಸಭೆ ಮಾಜಿ ಸದಸ್ಯ ಸುರೇಶ್ ತೆರದಹಳ್ಳಿ ಹಾಗೂ ಇತರರಿದ್ದರು. | Kannada Prabha

ಸಾರಾಂಶ

ಕೇಂದ್ರ ಸರ್ಕಾರವು ಮಾಲೀಕರ ಪರ ಕಾನೂನುಗಳನ್ನು ರಚಿಸಿ, ಜಾರಿ ಮಾಡುತ್ತಿರುವುದರಿಂದ ದೇಶದಲ್ಲಿ ಅಸಮಾನತೆ ಸೃಷ್ಟಿಯಾಗಿದೆ ಎಂದು ಮಾನವ ಬಂಧುತ್ವ ವೇದಿಕೆ ರಾಜ್ಯ ಸಂಚಾಲಕ ಡಾ. ಎ.ಬಿ. ರಾಮಚಂದ್ರಪ್ಪ ಹರಿಹರದಲ್ಲಿ ಅಭಿಪ್ರಾಯಪಟ್ಟಿದ್ದಾರೆ.

- ಹರಿಹರ ತಾಲೂಕು ಕಾರ್ಮಿಕರ ಸಮಾವೇಶದಲ್ಲಿ ಡಾ.ರಾಮಚಂದ್ರಪ್ಪ ಹೇಳಿಕೆ - - - ಕನ್ನಡಪ್ರಭ ವಾರ್ತೆ ಹರಿಹರ

ಕೇಂದ್ರ ಸರ್ಕಾರವು ಮಾಲೀಕರ ಪರ ಕಾನೂನುಗಳನ್ನು ರಚಿಸಿ, ಜಾರಿ ಮಾಡುತ್ತಿರುವುದರಿಂದ ದೇಶದಲ್ಲಿ ಅಸಮಾನತೆ ಸೃಷ್ಟಿಯಾಗಿದೆ ಎಂದು ಮಾನವ ಬಂಧುತ್ವ ವೇದಿಕೆ ರಾಜ್ಯ ಸಂಚಾಲಕ ಡಾ. ಎ.ಬಿ. ರಾಮಚಂದ್ರಪ್ಪ ಅಭಿಪ್ರಾಯಪಟ್ಟರು.

ನಗರದ ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯುನಿಯನ್ಸ್ (ಸಿಐಟಿಯು) ಕಚೇರಿ ಆವರಣದಲ್ಲಿ ಮಂಗಳವಾರ ನಡೆದ ಹರಿಹರ ತಾಲೂಕು ಕಾರ್ಮಿಕರ ಸಮಾವೇಶದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.

ಕಾರ್ಮಿಕರ ಪರ ಕಾನೂನುಗಳನ್ನು ಉದ್ದೇಶಪೂರ್ವಕವಾಗಿ ಬಲಹೀನಗೊಳಿಸಲಾಗಿದೆ. ಕಾರ್ಖಾನೆಗಳ ಮಾಲೀಕರು, ಬಂಡವಾಳಶಾಹಿಗಳ ಪರ ಕಾನೂನುಗಳನ್ನು ಪ್ರೋತ್ಸಾಹಿಸಲಾಗುತ್ತಿದೆ. ಆಡಳಿತಗಾರರಿಗೆ ಕಾರ್ಮಿಕರ ಹಿತಕ್ಕಿಂತ ಮಾಲೀಕರ ಹಿತವೇ ಮುಖ್ಯವಾಗಿದೆ. ಇದು ದೇಶದಲ್ಲಿ ಅಸಮಾನತೆ ಹೆಚ್ಚಾಗಲು ಕಾರಣವಾಗುತ್ತಿದೆ ಎಂದರು.

ಹರಿಹರದಲ್ಲೂ ಸಂಘಟಿತ, ಅಸಂಘಟಿತ ಕಾರ್ಮಿಕರ ಅಪಾರ ಪ್ರಮಾಣದಲ್ಲಿದ್ದಾರೆ. ವಿವಿಧ ಕಟ್ಟಡ ಕಾರ್ಮಿಕರು, ಬೀಡಿ ಕಾರ್ಮಿಕರು, ಹಮಾಲರು, ಆಟೋ, ಕಾರು, ಬಸ್ಸು, ಲಾರಿ ಹಾಗೂ ವಿವಿಧ ವಾಹನಗಳ ಚಾಲಕರನ್ನು ಸಂಘಟಿಸುವ ಕೆಲಸ ಆಗಬೇಕಿದೆ. ಕೇಂದ್ರ, ರಾಜ್ಯ ಸರ್ಕಾರಗಳಿಂದ ದೊರಕುವ ಸೌಲಭ್ಯಗಳನ್ನು ಅವರಿಗೆ ತಲುಪಿಸಲು ಕಾರ್ಮಿಕ ಸಂಘಟನೆ ಹಾಗೂ ಅಧಿಕಾರಿಗಳು ಆದ್ಯತೆ ನೀಡಬೇಕಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಸಿಐಟಿಯು ಜಿಲ್ಲಾ ಸಂಚಾಲಕ ಆನಂದರಾಜು ಕೆ.ಎಚ್. ಮಾತನಾಡಿ, ಹರಿಹರ ತಾಲೂಕಿನ ಕಟ್ಟಡ ಕಾರ್ಮಿಕರಿಗೆ ಮತ್ತು ರಸ್ತೆ ಸಾರಿಗೆ ಹಾಗೂ ಇತರೆ ಕ್ಷೇತ್ರದ ನೌಕರರ ಸೌಲಭ್ಯಗಳನ್ನು ಪರಿಣಾಮಕಾರಿಯಾಗಿ ಜಾರಿ ಮಾಡಿಸಲು ಸಂಘದ ಕಚೇರಿಯನ್ನು ಪ್ರಾರಂಭಿಸಲಾಗಿದೆ. ಅದರ ಪ್ರಯೋಜನ ಕಾರ್ಮಿಕರು ಪಡೆಯಬೇಕು ಎಂದು ತಿಳಿಸಿದರು.

ಸಮಾವೇಶ ಉದ್ಘಾಟಿಸಿದ ನಗರಸಭೆ ಮಾಜಿ ಸದಸ್ಯ ಸುರೇಶ್ ತೆರದಹಳ್ಳಿ ಮಾತನಾಡಿ, ಕಾರ್ಮಿಕರು ದುಶ್ಚಟಗಳಿಂದ ದೂರವಿದ್ದು ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಅನುದಾನದಲ್ಲಿ ನಡೆಯುತ್ತಿರುವ ವಿವಿಧ ವಸತಿ ಶಾಲೆಗಳಲ್ಲಿ ಮಕ್ಕಳನ್ನು ಸೇರಿಸಿದರೆ ಉತ್ತಮ ಶಿಕ್ಷಣ ಪಡೆಯಲು ಸಾಧ್ಯವಾಗುವುದು ಎಂದರು ಸಲಹೆ ನೀಡಿದರು.

ಸಮಾವೇಶದಲ್ಲಿ ಸಿಐಟಿಯು ರಾಜ್ಯ ಸಮಿತಿ ಸದಸ್ಯ ಮಲಿಯಪ್ಪ, ಕಟ್ಟಡ ಕಾರ್ಮಿಕ ಸಂಘದ ತಾಲೂಕು ಮುಖಂಡ ಅಬೂಸ್ವಾಲೇಹಾ, ರಾಜಾಸಾಬ್, ಹರಿಹರ ಪಾಲಿಫೈಬರ್ಸ್ ಕಾರ್ಮಿಕರ ಸಂಘದ ಸಂಚಾಲಕ ಕೊಟ್ರೇಶ್ ಎಚ್. ಓಲೇಕಾರ್, ರಾಮ್ಕೋ ಕಾರ್ಮಿಕರ ಸಂಘದ ಹನುಮಂತಪ್ಪ, ಬೀದಿಬದಿ ಮಾರಾಟಗಾರರ ಸಂಘದ ಸಂಚಾಲಕಿ ಮಂಜಮ್ಮ ಡಿ., ಬೀಡಿ ಕಾರ್ಮಿಕರ ಸಂಘದ ಸಂಚಾಲಕ ಅಶ್ಫಾಖ್ ಆಹಮದ್ ಮಾತನಾಡಿದರು.

ಆಲ್ ಇಂಡಿಯಾ ರೋಡ್ ಟ್ರಾನ್ಸ್‌ಪೋರ್ಟ್ ವರ್ಕರ್ಸ್ ಫೆಡರೇಷನ್‌ ಜಿಲ್ಲಾ ಮುಖಂಡ ಶ್ರೀನಿವಾಸಮೂರ್ತಿ ಸ್ವಾಗತಿಸಿದರು. ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫೆಡರೇಷನ್‌ ಜಿಲ್ಲಾ ಖಜಾಂಚಿ ನೇತ್ರಾವತಿ ಮಹಾದೇವಪ್ಪ ಮಣ್ಣೂರ್ ವಂದಿಸಿದರು.

- - - -೧೨ಎಚ್‌ಆರ್‌ಆರ್೧:

ಕಾರ್ಮಿಕರ ತಾಲೂಕು ಸಮಾವೇಶದಲ್ಲಿ ಡಾ.ಎ.ಬಿ.ರಾಮಚಂದ್ರಪ್ಪ ಮಾತನಾಡಿದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ