ಬಳ್ಳಾರಿ: ಬಾಲ್ಯಾವ್ಯಸ್ಥೆಯಲ್ಲಿ ಮಕ್ಕಳು ಶಿಕ್ಷಣ ಪಡೆದು ವಿದ್ಯಾವಂತರಾಗಬೇಕೆಂದರೆ, ಪ್ರತಿಯೊಬ್ಬರು ಬಾಲ ಕಾರ್ಮಿಕ ಪದ್ಧತಿಯನ್ನು ವಿರೋಧ ಮಾಡಿ, ಮಕ್ಕಳಲ್ಲಿ ಶಿಕ್ಷಣದ ಕುರಿತು ಅರಿವು ಮೂಡಿಸಿ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರೂ ಆಗಿರುವ ಎಸ್.ಎಚ್. ಪುಷ್ಪಾಂಜಲಿದೇವಿ ಕರೆ ನೀಡಿದರು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾಡಳಿತ, ಜಿಪಂ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಕಾರ್ಮಿಕ ಇಲಾಖೆ, ಪೊಲೀಸ್ ಇಲಾಖೆ, ಜಿಲ್ಲಾ ಬಾಲಕಾರ್ಮಿಕ ಯೋಜನೆ, ಎಸ್‍ಜಿಆರ್‍ಸಿಎಂ ಕಾಲೇಜು ಮತ್ತು ವಿವಿಧ ಸಂಘ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ “ವಿಶ್ವ ಬಾಲಜಕಾರ್ಮಿಕ ಪದ್ಧತಿ ವಿರೋಧಿ ದಿನಾಚರಣೆ” ಅಂಗವಾಗಿ ಬುಧವಾರ ನಗರದ ಗೃಹರಕ್ಷಕ ದಳ ಆವರಣದಿಂದ ಏರ್ಪಡಿಸಿದ್ದ ಜನ ಜಾಗೃತಿ ಕಾರ್ಯಕ್ರಮಕ್ಕೆ ಚಾಲನೆ ಅವರು ಮಾತನಾಡಿದರು.18 ವರ್ಷದೊಳಗಿನ ಮಕ್ಕಳನ್ನು ದುಡಿಮೆಗೆ ಕಳುಹಿಸದೇ ಪ್ರತಿಯೊಬ್ಬರು ಶಾಲೆಗೆ ಕಳುಹಿಸಿ ಶಿಕ್ಷಣ ಒದಗಿಸುವುದು ಎಲ್ಲ ಪೋಷಕರ ಕರ್ತವ್ಯವಾಗಿದೆ. ಮಕ್ಕಳನ್ನು ಕೆಲಸಕ್ಕೆ ಕಳುಹಿಸುವಂತಹ ಪೋಷಕರಿಗೆ ಮತ್ತು ಕೆಲಸಕ್ಕೆ ನೇಮಿಸಿಕೊಳ್ಳುವಂತಹ ಮಾಲೀಕರಿಗೆ ಕಾನೂನಿನಡಿ ಶಿಕ್ಷೆಗೆ ಒಳಪಡಿಸಲಾಗುತ್ತದೆ ಎಂದು ತಿಳಿಸಿದರು.ಕಿಶೋರ ಕಾರ್ಮಿಕರ ರಕ್ಷಣೆಗೆ ಮತ್ತು ಬಾಲಕಾರ್ಮಿಕ ಪದ್ಧತಿ ನಿರ್ಮೂಲನೆಗೆ ಸಾರ್ವಜನಿಕರು, ಪೋಷಕರು ಸೇರಿದಂತೆ ವಿವಿಧ ಇಲಾಖೆಗಳು ಕೈ ಜೋಡಿಸಬೇಕು ಎಂದರು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಧೀಶರಾದ ರಾಜೇಶ್ ಎನ್.ಹೊಸಮನೆ ನಗರದ ಎಸ್‍ಜಿಆರ್‍ಸಿಎಂ ಕಾಲೇಜಿನ ಸಭಾಂಗಣದಲ್ಲಿ ಆಯೋಜಿಸಿದ್ದ ವೇದಿಕೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಸದೃಢ ದೇಶ ನಿರ್ಮಾಣ ಮಾಡುವಲ್ಲಿ ಮಕ್ಕಳ ಪಾತ್ರ ಬಹುಮುಖ್ಯವಾಗಿದೆ. ಮಕ್ಕಳು ಶಿಕ್ಷಣದಿಂದ ವಂಚಿತರಾಗದೆ, ವಿದ್ಯಾವಂತರಾದಾಗ ಮಾತ್ರ ಬಾಲ ಕಾರ್ಮಿಕ ಪದ್ಧತಿ ನಿವಾರಣೆಯಾಗುತ್ತದೆ ಎಂದು ಅಭಿಪ್ರಾಯಪಟ್ಟರು.ಬಾಲ ಕಾರ್ಮಿಕರನ್ನು ದುಡಿಸಿಕೊಳ್ಳುವುದು ಸಂವಿಧಾನದಡಿ ಅಪರಾಧವಾಗಿದೆ. ಕಿಶೋರ ಮಕ್ಕಳ ರಕ್ಷಣೆ ಪ್ರತಿಯೊಬ್ಬರ ಹೊಣೆಯಾಗಿದೆ. ಇದರ ಬಗ್ಗೆ ಪೋಷಕರಿಗೆ, ಮಾಲೀಕರಿಗೆ ಹಾಗೂ ಸಾರ್ವಜನಿಕರಿಗೆ ಅರಿವು ಮೂಡಿಸಿ, ಕಿಶೋರ ಮಕ್ಕಳಿಗೆ ಶಿಕ್ಷಣ ಒದಗಿಸುವ ಕಾರ್ಯವಾಗಬೇಕು ಎಂದರು.
ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಬಾಲ ಕಾರ್ಮಿಕ ಯೋಜನೆಯ ಅಧ್ಯಕ್ಷರೂ ಆದ ಪ್ರಶಾಂತಕುಮಾರ್ ಮಿಶ್ರಾ ಅಧ್ಯಕ್ಷತೆ ವಹಿಸಿ ಮಾತನಾಡಿ, ಮಕ್ಕಳು ದೇಶದ ಆಸ್ತಿಯಾಗಿದ್ದು, ಮಕ್ಕಳನ್ನು ಬಾಲ ಕಾರ್ಮಿಕ ಪದ್ಧತಿಯಿಂದ ದೂರವಿರಿಸಬೇಕು ಎಂದು ಹೇಳಿದರು.ಬಾಲ್ಯಾವ್ಯಸ್ಥೆಯಲ್ಲಿ ಮಕ್ಕಳು ಶಿಕ್ಷಣ ವಂಚಿತರಾಗದೇ ಪ್ರತಿಯೊಬ್ಬರೂ ಶಿಕ್ಷಣ ಪಡೆದು ಉಜ್ವಲ ಭವಿಷ್ಯ ರೂಪಿಸಿಕೊಳ್ಳಬೇಕು ಎಂದರು.
ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಯ ಅಧ್ಯಕ್ಷೆ ವಿಜಯಲಕ್ಷ್ಮಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡಿ, ಪ್ರತಿಯೊಬ್ಬರೂ ಬಾಲ ಕಾರ್ಮಿಕ ಪದ್ಧತಿ ವಿರೋಧಿಸಿ, ಶಿಕ್ಷಣ ಕೊಡಿಸಬೇಕು. ಅಸಹಾಯಕ ಮಕ್ಕಳ ರಕ್ಷಣೆಗೆ ಎಲ್ಲರೂ ಸಹಕರಿಸಬೇಕು ಎಂದು ತಿಳಿಸಿದರು.ಬಾಲ ಕಾರ್ಮಿಕ ಮಕ್ಕಳು ಕಂಡುಬಂದಲ್ಲಿ ಉಚಿತ ಸಹಾಯವಾಣಿ 1098 ಗೆ ಕರೆಮಾಡಿ ಮಾಹಿತಿ ನೀಡಿ ಅಥವಾ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ, ಕಾರ್ಮಿಕ ಇಲಾಖೆ, ಪೊಲೀಸ್ ಇಲಾಖೆಗಳಿಗೆ ಮಾಹಿತಿ ನೀಡಬಹುದು. ಮಾಹಿತಿ ನೀಡಿದವರ ಹೆಸರನ್ನು ಗೌಪ್ಯವಾಗಿ ಇಡಲಾಗುವುದು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಪ್ರತಿಜ್ಞಾವಿಧಿ ಸ್ವೀಕರಿಸಲಾಯಿತು.ವಿಶ್ವ ಬಾಲಕಾರ್ಮಿಕ ಪದ್ಧತಿ ವಿರೋಧಿ ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ಜಾಥಾದಲ್ಲಿ ಜನಸಾಮಾನ್ಯರಲ್ಲಿ ಅರಿವು ಮೂಡಿಸಲು ವಿವಿಧ ಘೋಷಣೆಗಳನ್ನು ಕೂಗಲಾಯಿತು. ಚಿಗುರು ಕಲಾ ತಂಡದವರಿಂದ ಜಾಗೃತಿ ಗೀತೆಗಳನ್ನು ಹಾಡಿದರು.
ಜಾಥಾವು ಜಿಲ್ಲಾ ಗೃಹ ರಕ್ಷಕ ದಳ ಕಚೇರಿ ಆವರಣದಿಂದ ಆರಂಭವಾಗಿ ಕೆಎಸ್‍ಆರ್‍ಟಿಸಿ ಹೊಸ ಬಸ್ ನಿಲ್ದಾಣ, ಉಜ್ಜಿನಿ ಶಾಲೆ, ಎಪಿಎಂಸಿ ವೃತ್ತ, ಲಾರಿ ಟರ್ಮಿನಲ್ ಮೂಲಕ ಎಸ್‍ಜಿಆರ್‍ಸಿಎಂ ಕಾಲೇಜಿನ ವೇದಿಕೆ ಸಭಾಂಗಣದವರೆಗೆ ತಲುಪಿತು.ಜಿಪಂ ಸಿಇಒ ರಾಹುಲ್ ಶರಣಪ್ಪ ಸಂಕನೂರ, ಎಡಿಸಿ ಮೊಹಮ್ಮದ್ ಝುಬೇರ್, ಜಿಲ್ಲಾ ಬಾಲಾಕಾರ್ಮಿಕ ಯೋಜನೆಯ ಯೋಜನಾ ನಿರ್ದೇಶಕ ಎ.ಮೌನೇಶ್, ಜಿಲ್ಲಾ ಕಾರ್ಮಿಕ ಅಧಿಕಾರಿ ಕಮಲ್ ಷಾ ಅಲ್ತಾಫ್ ಅಹ್ಮದ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ವಿಜಯ ಕುಮಾರ್, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ರಕ್ಷಣಾಧಿಕಾರಿ ಜಲಾಲಪ್ಪ, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಕೆ.ಎರ್ರಿಗೌಡ, ಎಸ್‍ಜಿಆರ್‍ಸಿಎಂ ಕಾಲೇಜನ ಪ್ರಾಚಾರ್ಯ ಡಾ.ಸುಧಾಕರ್ ಸೇರಿದಂತೆ ಜಿಲ್ಲಾ ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದವರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.