ಗಂಗಾವತಿಯಲ್ಲಿ ಮಳೆ ಬಂದರೆ ರಸ್ತೆ ಜಲಾವೃತ

KannadaprabhaNewsNetwork | Published : Jun 13, 2024 12:47 AM

ಸಾರಾಂಶ

ನಗರದಲ್ಲಿ ಮಳೆ ಬಂದರೆ ರಸ್ತೆಯಲ್ಲಿ ನೀರು ಹರಿದು ಜನರ ಸಂಚಾರಕ್ಕೆ ಅಡ್ಡಿ ಉಂಟಾಗುವುದು ಸಾಮನ್ಯವಾಗಿದೆ. ಈಗ ನಗರದಲ್ಲಿ ಸುರಿದ ಧಾರಾಕಾರ ಮಳೆಯಿಂದಾಗಿ ರಸ್ತೆಗಳು ಕೆರೆ, ನದಿಯಂತಾಗಿದ್ದರಿಂದ ಜನರು ಸಂಚಾರಕ್ಕಾಗಿ ಪರದಾಡುವಂತಾಗಿದೆ.

ಅವೈಜ್ಞಾನಿಕ ಚರಂಡಿಗಳ ನಿರ್ಮಾಣ, ಮಳೆಯಿಂದಾಗಿ ಕೆರೆ, ನದಿಯಂತಾಗುವ ರಸ್ತೆಗಳುರಾಮಮೂರ್ತಿ ನವಲಿ

ಕನ್ನಡಪ್ರಭ ವಾರ್ತೆ ಗಂಗಾವತಿ

ನಗರದಲ್ಲಿ ಮಳೆ ಬಂದರೆ ರಸ್ತೆಯಲ್ಲಿ ನೀರು ಹರಿದು ಜನರ ಸಂಚಾರಕ್ಕೆ ಅಡ್ಡಿ ಉಂಟಾಗುವುದು ಸಾಮನ್ಯವಾಗಿದೆ. ಈಗ ನಗರದಲ್ಲಿ ಸುರಿದ ಧಾರಾಕಾರ ಮಳೆಯಿಂದಾಗಿ ರಸ್ತೆಗಳು ಕೆರೆ, ನದಿಯಂತಾಗಿದ್ದರಿಂದ ಜನರು ಸಂಚಾರಕ್ಕಾಗಿ ಪರದಾಡುವಂತಾಗಿದೆ.

ಮಹಾವೀರ ವೃತ್ತದ ರಸ್ತೆಗಳಲ್ಲಿ ತಗ್ಗು ದಿನ್ನೆಗಳು ಇದ್ದಿದ್ದರಿಂದ ಮಳೆ ನೀರು ಎಲ್ಲೂ ಹೋಗದೆ ರಸ್ತೆ ಮೇಲೆಯೇ ನಿಂತಿತ್ತು. ಅಜ್ಞಾನಿಕ ಚರಂಡಿಗಳ ನಿರ್ಮಾಣ ಮತ್ತು ಚರಂಡಿಗಳ ಮೇಲೆ ಕಟ್ಟಡಗಳ ನಿರ್ಮಾಣವೇ ಇದಕ್ಕೆ ಕಾರಣ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಅವೈಜ್ಞಾನಿಕ ಚರಂಡಿಗಳ ನಿರ್ಮಾಣ:

ನಗರದಲ್ಲಿ ಚರಂಡಿಗಳು ಅಜ್ಞಾನಿಕವಾಗಿ ನಿರ್ಮಾಣವಾಗಿದ್ದು, ಅದರಲ್ಲಿ ಮಹಾವೀರ ವೃತ್ತದ ರಸ್ತೆ ಸಂಪೂರ್ಣವಾಗಿ ಮುಚ್ಚಿಹೋಗಿದೆ. ನಗರಕ್ಕೆ ಅಮೃತ ಸಿಟಿ ಯೋಜನೆಡಿಯಲ್ಲಿ ₹120 ಕೋಟಿ ಅನುದಾನ ಬಂದಿದ್ದರೂ ಸಹ ಸಮರ್ಪಕವಾಗಿ ಚರಂಡಿಗಳ ಕಾಮಗಾರಿ ನಿರ್ಮಾಣಗೊಂಡಿಲ್ಲ. ಸಮೀಪದಲ್ಲಿ ದುರಗಮ್ಮ ಹಳ್ಳ ಇದ್ದು, ಮಳೆ ನೀರು ಚರಂಡಿಗಳ ಮೂಲಕ ಹಳ್ಳ ಸೇರಬೇಕು. ಆದರೆ ಹಾಗೆ ಆಗುತ್ತಿಲ್ಲ. ಗಣೇಶ ವೃತ್ತ, ಮಹಾವೀರ ವೃತ್ತ ಸೇರಿದಂತೆ ವಿವಿಧ ವೃತ್ತಗಳ ರಸ್ತೆಗಳು ಕಡಿದಾದರಿಂದ ವಾಹನಗಳ ಸಂಚಾರವು ದುಸ್ತರವಾಗಿದೆ.

ಚರಂಡಿಗಳ ಮೇಲೆ ಕಟ್ಟಡ ನಿರ್ಮಾಣ:

ಕಡಿದಾದ ರಸ್ತೆಗಳು ಒಂದಡೆ ಇದ್ದರೆ ಚರಂಡಿಗಳ ಮೇಲೆ ಕಟ್ಟಡ ನಿರ್ಮಿಸಿಕೊಂಡಿದ್ದರಿಂದ ಮಳೆ ನೀರು ಚರಂಡಿ ಮೂಲಕ ಹೋಗದೆ ರಸ್ತೆ ಮೇಲೆ ನಿಲ್ಲುತ್ತದೆ. ಈ ಪ್ರದೇಶದಲ್ಲಿ ಹೆಚ್ಚಾಗಿ ವಾಣಿಜ್ಯ ಮಳಿಗೆಗಳು ಮತ್ತು ಚಿತ್ರಮಂದಿರಗಳಿದ್ದು, ಇದರಿಂದ ನಗರ ಸೇರಿದಂತೆ ಗ್ರಾಮೀಣ ಪ್ರದೇಶದಿಂದ ಬಂದ ಜನರು ರೋಸಿ ಹೋಗಿದ್ದಾರೆ.

ಚರಂಡಿಗಳಿಗೆ ಬಿದ್ದ ವಾಹನಗಳು:

ರಸ್ತೆ ಮೇಲೆ ನೀರು ನಿಂತಿದ್ದರಿಂದ ವಾಹನಗಳ ಸವಾರರು ಚರಂಡಿ ಕಾಣದೆ ಬಿದ್ದು ಅಪಘಾತಕ್ಕೆ ಒಳಗಾಗುವುದು ಕೂಡ ಸಾಮಾನ್ಯ ಎನ್ನುವಂತಾಗಿದೆ. ಮಳೆ ಬಂದರೆ ಈ ಪ್ರದೇಶವು ಜಲಾವೃಗೊಳ್ಳುತ್ತದೆ. ಚರಂಡಿ ಯಾವುದೋ, ರಸ್ತೆ ಯಾವುದೋ ಎಂದು ತಿಳಿಯದೆ ದ್ವಿ ಚಕ್ರ ವಾಹನ ಸವಾರರು ಜೀವವನ್ನು ಕೈಯಲ್ಲಿ ಹಿಡಿದುಕೊಂಡು ಓಡಾಡುವಂತ ಪರಿಸ್ಥಿತಿ ಇದೆ.

ಇನ್ನಾದರೂ ನಗರಸಭೆಯ ಆಡಳಿತ ಎಚ್ಚೆತ್ತುಕೊಂಡು ಅವೈಜ್ಞಾನಿಕ ಚರಂಡಿ ಸರಿಪಡಿಸುವ ಮೂಲಕ ಸುಗಮ ಜನ, ವಾಹನ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕು ಎಂಬುದು ಜನರ ಒತ್ತಾಯವಾಗಿದೆ.

Share this article