ಕನ್ನಡಪ್ರಭ ವಾರ್ತೆ ಮಂಡ್ಯ
ಕಾಂಗ್ರೆಸ್ ಸರ್ಕಾರ ಹಗರಣಗಳನ್ನು ಮುಚ್ಚಿಕೊಳ್ಳುವ ಸಲುವಾಗಿ ಜನರ ದಿಕ್ಕು ತಪ್ಪಿಸಲು ಸುಳ್ಳಿನ ಆಫರ್‌ಗಳ ಕತೆಯನ್ನು ತೇಲಿಬಿಡುತ್ತಿದ್ದಾರೆ. ಶಾಸಕರು ದಿನೇ ದಿನೇ ತಮ್ಮ ಆಫರನ್ನು ಹೆಚ್ಚಳ ಮಾಡಿಕೊಳ್ಳುತ್ತಿದ್ದಾರೆ. ಸತ್ಯಾಂಶವಿಲ್ಲದ ಈ ಕತೆಗಳನ್ನು ಜನರು ನಂಬುವಷ್ಟು ದಡ್ಡರಲ್ಲ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಡಾ.ಎನ್.ಎಸ್.ಇಂದ್ರೇಶ್ ಟೀಕಿಸಿದರು.ಶಾಸಕ ರವಿಕುಮಾರ್ ಈಗ ‘ಆಫರ್’ ರವಿಕುಮಾರ್ ಆಗಿದ್ದಾರೆ. ಹಿಂದೆ ಬಿಜೆಪಿಯವರು ಸರ್ಕಾರ ಉರುಳಿಸಲು ಕಾಂಗ್ರೆಸ್ ಶಾಸಕರಿಗೆ ೫೦ ಕೋಟಿ ರು. ಆಫರ್ ನೀಡಿರುವುದಾಗಿ ಹೇಳಿದ್ದರು. ಆದರೆ, ಈಗ ೧೦೦ ಕೋಟಿ ಆಫರ್ ನೀಡಿದ್ದಾರೆ ಎನ್ನುತ್ತಿದ್ದಾರೆ. ಈ ಆಫರ್ ಕೊಟ್ಟವರು ಯಾರು, ಯಾರು ಯಾರನ್ನು ಯಾವಾಗ ಎಲ್ಲಿ ಸಂಪರ್ಕಿಸಿದ್ದಾರೆ ಎಂಬ ಬಗ್ಗೆ ತಾಕತ್ತಿದ್ದರೆ ಆಡಿಯೋ, ವಿಡಿಯೋ ಸೇರಿದಂತೆ ಏನೆಲ್ಲಾ ದಾಖಲೆಗಳಿವೆಯೋ ಎಲ್ಲವನ್ನೂ ರಿಲೀಸ್ ಮಾಡಲಿ. ಅದನ್ನು ಬಿಟ್ಟು ಕೇವಲ ಪ್ರಚಾರಕ್ಕೆ ಮಾತನಾಡಿದರೆ ಜನರು ನಂಬುವರೇ ಎಂದು ಸುದ್ದಿಗೋಷ್ಠಿಯಲ್ಲಿ ಪ್ರಶ್ನಿಸಿದರು.
ಕೋಟ್ಯಂತರ ರು. ನೀಡಿ ಶಾಸಕರನ್ನು ಕೊಂಡುಕೊಳ್ಳುವ ಶಕ್ತಿ ನಮಗಿಲ್ಲ. ಅದರ ಅವಶ್ಯಕತೆಯೂ ನಮಗಿಲ್ಲ.ಜನರ ನೀಡಿರುವ ತೀರ್ಪಿನಂತೆ ವಿರೋಧ ಪಕ್ಷದ ಸ್ಥಾನದಲ್ಲೇ ಕುಳಿತು ಕೆಲಸ ಮಾಡುತ್ತೇವೆ. ಈ ಸರ್ಕಾರವನ್ನು ಯಾರೂ ಬೀಳಿಸಬೇಕಾಗಿಲ್ಲ. ತನ್ನಿಂ ತಾನೇ ಬಿದ್ದುಹೋಗುತ್ತದೆ ಎಂದು ಭವಿಷ್ಯ ನುಡಿದರು.ಅಭಿವೃದ್ಧಿ ಸಂಪೂರ್ಣ ಸ್ತಬ್ಧ:
ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ದಿನದಿಂದ ಅಭಿವೃದ್ಧಿ ಕಾಮಗಾರಿಗಳಿಗೆ ಹಣವಿಲ್ಲದೆ ಸ್ತಬ್ಧವಾಗಿದೆ. ಕೇವಲ ಭ್ರಷ್ಟಾಚಾರ, ಹಗರಣಗಳ ಸರಮಾಲೆಯೇ ನಡೆದಿದೆ. ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದರೆ ಕಳೆದ ಒಂದೂವರೆ ವರ್ಷದಿಂದ ಏನು ಕೆಲಸಗಳನ್ನು ಮಾಡಿದ್ದೇವೆ ಎಂದು ಶ್ವೇತಪತ್ರ ಹೊರಡಿಸಲಿ. ನಮ್ಮ ಅಧಿಕಾರವಧಿಯಲ್ಲಿ ಏನೇನು ಅಭಿವೃದ್ಧಿ ಕೆಲಸ ಮಾಡಿದ್ದೇವೆ ಎಂಬುದನ್ನು ನಾವು ಶ್ವೇತಪತ್ರ ಹೊರಡಿಸುತ್ತೇವೆ ಎಂದು ಸವಾಲು ಹಾಕಿದರು.ನ.೨೨ರಂದು ಧರಣಿ:
ಇಡೀ ರಾಜ್ಯಾದ್ಯಂತ ರೈತರಲ್ಲಿ ಆತಂಕ ಸೃಷ್ಟಿಸಿರುವ ವಕ್ಫ್ ಸಮಸ್ಯೆ ಪರಿಹಾರಕ್ಕೆ ಆಗ್ರಹಿಸಿ ಭಾರತೀಯ ಜನತಾ ಪಾರ್ಟಿ ೨೧ ಮತ್ತು ೨೨ರಂದು ರಾಜ್ಯದ ಎಲ್ಲ ಜಿಲ್ಲಾಧಿಕಾರಿ ಕಚೇರಿ ಹಾಗೂ ತಹಸೀಲ್ದಾರ್ ಕಚೇರಿಗಳ ಎದುರು ಹೋರಾಟಕ್ಕೆ ಕರೆ ನೀಡಿದ್ದು, ಅದರಂತೆ ನ.೨೨ರಂದು ನಗರದ ಸರ್ ಎಂ.ವಿಶ್ವೇಶ್ವರಯ್ಯ ಪ್ರತಿಮೆ ಎದುರು ಧರಣಿ ಸತ್ಯಾಗ್ರಹ ನಡೆಸಲಾಗುವುದು ಎಂದರು.೨೨ರ ಶುಕ್ರವಾರ ಬೆಳಗ್ಗೆ ೯ ರಿಂದ ಸಂಜೆ ೫ ಗಂಟೆಯವರೆಗೂ ಧರಣಿ ನಡೆಸಲಿದ್ದು, ಮಾಜಿ ಸಂಸದೆ ಸುಮಲತಾ, ಮಾಜಿ ಸಚಿವ ಕೆ.ಸಿ. ನಾರಾಯಣಗೌಡ, ಜಿಲ್ಲಾ ಮುಖಂಡರಾದ ಡಾ. ಸಿದ್ದರಾಮಯ್ಯ, ಎಸ್. ಸಚ್ಚಿದಾನಂದ, ಅಶೋಕ್ ಜಯರಾಮು, ರೈತ ನಾಯಕ ಕೆ.ಎಸ್. ನಂಜುಂಡೇಗೌಡ ಸೇರಿದಂತೆ ನೂರಾರು ಕಾರ್ಯಕರ್ತರು ಭಾಗವಹಿಸಲಿದ್ದಾರೆ. ಧರಣಿ ನಂತರ ಜಿಲ್ಲಾಧಿಕಾರಿ ಹಾಗೂ ತಹಸೀಲ್ದಾರರಿಗೆ ಮನವಿ ಸಲ್ಲಿಸಲಾಗುವುದು ಎಂದರು.
ವಕ್ಫ್ ಆಸ್ತಿ ಸಂಬಂಧ ಇಡೀ ರಾಜ್ಯದಲ್ಲಿ ಸಮಸ್ಯೆ ಎದುರಾಗಿದೆ. ಆ ಸಮಸ್ಯೆಗೆ ತಾರ್ಕಿಕ ಅಂತ್ಯ ಹುಡುಕುವ ನಿಟ್ಟಿನಲ್ಲಿ ಪಕ್ಷದ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರ ನೇತೃತ್ವದಲ್ಲಿ ಚರ್ಚೆ ನಡೆಸಿ, ವ್ಯವಸ್ಥಿತವಾಗಿ ಜನರನ್ನು ಸಂಪರ್ಕಿಸಿ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಪ್ರತಿ ಜಿಲ್ಲೆಯಲ್ಲೂ ೫ ಜನರ ತಂಡ ರಚಿಸಲಾಗಿದ್ದು, ಅದರಲ್ಲಿ ವಕೀಲರು, ರೈತ ಮುಖಂಡರು ಇರಲಿದ್ದಾರೆ ಎಂದರು.ಶೋಷಣೆಗೆ ಒಳಗಾದ ಸಹಸ್ರಾರು ಸಂಖ್ಯೆಯ ಸಾರ್ವಜನಿಕರು, ರೈತರು, ಮಠ-ಮಂದಿರಗಳು, ಶಾಲೆಗಳು ಹಾಗೂ ಸಾರ್ವಜನಿಕ ಆಸ್ತಿಗಳ ಕುರಿತು ಅಹವಾಲು ಸ್ವೀಕರಿಸಲಿದ್ದು, ಸಮಸ್ಯೆಯ ಗಂಭೀರತೆಯನ್ನು ಜಿಲ್ಲಾವಾರು ಪರಾಮರ್ಶೆ ಮಾಡುತ್ತೇವೆ ಎಂದರು.
ಮೂರು ತಂಡ ರಚನೆ:ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ೩ ತಂಡಗಳನ್ನು ರಚಿಸಿದ್ದು, ವಿಜಯೇಂದ್ರ ಅವರ ನೇತೃತ್ವದ ಒಂದು ತಂಡ, ವಿಪಕ್ಷ ನಾಯಕ ಆರ್. ಅಶೋಕ್, ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ನೇತೃತ್ವದಲ್ಲಿ ತಂಡಗಳು ಕಾರ್ಯನಿರ್ವಹಿಸಲಿವೆ. ಈ ಮೂರು ತಂಡಗಳು ಡಿಸೆಂಬರ್ ಮೊದಲ ವಾರದಿಂದ ರಾಜ್ಯಾದ್ಯಂತ ಪ್ರತಿ ಜಿಲ್ಲೆಯಲ್ಲಿ ಪ್ರವಾಸ ಮಾಡಿ, ರೈತರು, ಮಠಮಾನ್ಯಗಳು ಮತ್ತು ಸಾರ್ವಜನಿಕರ ಸಮಸ್ಯೆಯನ್ನು ಆಲಿಸಿವೆ. ಅವರ ಸಮಸ್ಯೆಯನ್ನು ಮುಂಬರುವ ಬೆಳಗಾವಿ ಅವೇಶನದಲ್ಲಿ ಪ್ರಸ್ತಾಪಿಸುತ್ತೇವೆ ಎಂದರು.
ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್. ಯಡಿಯೂರಪ್ಪ, ಡಿ.ವಿ. ಸದಾನಂದಗೌಡ, ಬಸವರಾಜ ಬೊಮ್ಮಾಯಿ, ಜಗದೀಶ್ ಶೆಟ್ಟರ್ ಹಾಗೂ ರಾಜ್ಯ ನಾಯಕರು ೮ ರಿಂದ ೧೦ ಜಿಲ್ಲೆಗಳಲ್ಲಿ ಪ್ರವಾಸ ಮಾಡಲಿದ್ದಾರೆ. ಡಿಸೆಂಬರ್‌ನಲ್ಲಿ ಬೆಳಗಾವಿಯಲ್ಲಿ ರಾಜ್ಯಾಧ್ಯಕ್ಷರ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ವಿವರಿಸಿದರು.ಪಹಣಿ ಪರೀಕ್ಷಿಸಿಕೊಳ್ಳಿ:
ಪ್ರತಿಯೊಬ್ಬ ರೈತರು ಹಾಗೂ ಸಾರ್ವಜನಿಕರು ತಪ್ಪದೇ ತಮ್ಮ ಜಾಗದ ಪಹಣಿಯನ್ನು ಪರೀಕ್ಷಿಸಿಕೊಳ್ಳಿ. ವಕ್ಫ್ ಬೋರ್ಡ್ ನೀಡಿರುವ ನೋಟಿಸ್ ಹಿಂಪಡೆಯುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದು, ಕೇವಲ ಮಹಾರಾಷ್ಟ್ರ, ಜಾರ್ಖಂಡ್ ಚುನಾವಣೆಯ ಕಣ್ಣೊರೆಸುವ ತಂತ್ರವಾಗಿದೆ. ೧೯೭೪ರ ವಕ್ಫ್ ಆಸ್ತಿ ಕುರಿತ ಗೆಜೆಟ್ ಹಿಂಪಡೆಯಲು ರಾಜ್ಯದ ಕಾಂಗ್ರೆಸ್ ಸರ್ಕಾರ ಬದ್ಧತೆ ಪ್ರದರ್ಶಿಸಬೇಕೆಂದು ಆಗ್ರಹಿಸಿದರು.ಗೋಷ್ಠಿಯಲ್ಲಿ ಮುಖಂಡರಾದ ಸಿ.ಟಿ. ಮಂಜುನಾಥ್, ಟಿ.ಎಸ್. ವಿವೇಕ್, ನಾಗಾನಂದ ಹಾಜರಿದ್ದರು.