ಸಹಕಾರಿ ಕ್ಷೇತ್ರದಲ್ಲಿ ರಾಜಕಾರಣ ಸಲ್ಲ

KannadaprabhaNewsNetwork | Published : Jan 8, 2024 1:45 AM

ಸಾರಾಂಶ

ಸಹಕಾರಿ ಕ್ಷೇತ್ರ ಜೀವಂತವಾಗಿರಬೇಕಾದರೆ ರೈತರು ಮೊದಲು ಜೀವಂತವಾಗಿರಬೇಕು. ಸಹಕಾರಿ ಕ್ಷೇತ್ರದ ಕಾನೂನಿನ ತಿದ್ದುಪಡಿಗೆ ತಿದ್ದುಪಡಿ ಕಮೀಟಿ ಅಂತಿಮ ಹಂತಕ್ಕೆ ಬಂದಿದೆ. ಅನುಭವದ ಆಧಾರದ ಮೇಲೆ ತಿದ್ದುಪಡಿ ತರುವ ಅನಿವಾರ್ಯತೆ ಇದೆ.

ಸಿದ್ದಾಪುರ: ಸಹಕಾರಿ ಕ್ಷೇತ್ರದಲ್ಲಿ ರಾಜಕೀಯ ವ್ಯಕ್ತಿಗಳು ಇರಬಹುದು. ಆದರೆ ಅಲ್ಲಿ ರಾಜಕಾರಣ ಮಾಡುವುದಕ್ಕೆ ಹೋಗಬಾರದು. ರಾಜಕಾರಣ ಮಾಡಿದರೆ ಸಹಕಾರಿ ಸಂಘಗಳ ಉದ್ದೇಶ ಈಡೇರುವುದಿಲ್ಲ. ರೈತರ ಸಂಕಷ್ಟಗಳಿಗೆ ಸ್ಪಂದಿಸುವುದು ಸಹಕಾರಿ ಸಂಘದ ಮುಖ್ಯ ಉದ್ದೇಶವಾದಾಗ ಮಾತ್ರ ಸರ್ಕಾರದ ಕಾರ್ಯಕ್ರಮ ಬಡವರ ಅಭಿವೃದ್ಧಿ ಕಾರ್ಯಕ್ರಮಗಳಾಗಿರುತ್ತವೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದರು.

ತಾಲೂಕು ವ್ಯವಸಾಯ ಹುಟ್ಟವಳಿಗಳ ಸಹಕಾರಿ ಮಾರಾಟ ಸಂಘ (ಟಿಎಂಎಸ್)ದ ಕಾನಸೂರು ಶಾಖಾ ಕಟ್ಟಡಗಳ ಉದ್ಘಾಟನೆ, ಸಹಕಾರಿಗಳಿಗೆ ಸನ್ಮಾನ ನೆರವೇರಿಸಿ ಮಾತನಾಡಿದರು.

ಶಾಸಕ ಶಿವರಾಮ ಹೆಬ್ಬಾರ ಮಾತನಾಡಿ, ಸಹಕಾರಿ ಕ್ಷೇತ್ರ ಜೀವಂತವಾಗಿರಬೇಕಾದರೆ ರೈತರು ಮೊದಲು ಜೀವಂತವಾಗಿರಬೇಕು. ಸಹಕಾರಿ ಕ್ಷೇತ್ರದ ಕಾನೂನಿನ ತಿದ್ದುಪಡಿಗೆ ತಿದ್ದುಪಡಿ ಕಮೀಟಿ ಅಂತಿಮ ಹಂತಕ್ಕೆ ಬಂದಿದೆ. ಅನುಭವದ ಆಧಾರದ ಮೇಲೆ ತಿದ್ದುಪಡಿ ತರುವ ಅನಿವಾರ್ಯತೆ ಇದೆ. ಸಹಕಾರಿ ಕ್ಷೇತ್ರದ ಕಾನೂನನ್ನು ತಿದ್ದುಪಡಿ ಮಾಡದಿದ್ದರೆ ಸಹಕಾರಿ ಕ್ಷೇತ್ರ ಉಳಿಯುವುದಿಲ್ಲ. ತಿದ್ದುಪಡಿ ಮಾಡದಿದ್ದರೆ ರೈತರು ಮೀಟರ್ ಬಡ್ಡಿ ಸಾಲಕ್ಕೆ ಬಲಿಯಾಗುವಂತಾಗುತ್ತದೆ. ಸಹಕಾರಿ ಸಂಘಗಳು ಪತ್ತು ಮತ್ತು ಮಾರಾಟ ಜೋಡಣೆಯಲ್ಲಿ ಹೆಚ್ಚೆಚ್ಚು ತೊಡಗಿಸಿಕೊಳ್ಳಬೇಕು ಎಂದರು.

ಶಾಸಕ ಭೀಮಣ್ಣ ನಾಯ್ಕ ಅಧ್ಯಕ್ಷತೆ ವಹಿಸಿದ್ದರು.

ಇದೇ ಸಂದರ್ಭದಲ್ಲಿ ತಾಲೂಕಿನ ೨೩ ಹಾಗೂ ಸೊರಬ ತಾಲೂಕಿನ ಹರೀಶಿ ಮತ್ತು ಶಿರಸಿ ತಾಲೂಕಿನ ಅಜ್ಜಿಬಳ ಪ್ರಾಥಮಿಕ ಸಹಕಾರಿ ಸಂಘಗಳ ಅಧ್ಯಕ್ಷರನ್ನು ಹಾಗೂ ಸಹಕಾರಿ ರತ್ನ ಪುರಸ್ಕೃತ ವಿನೋದ ನಾಯಕ ಅವರನ್ನು ಸನ್ಮಾನಿಸಲಾಯಿತು.

ರಾಜ್ಯ ಸಹಕಾರ ಮಾರಾಟ ಮಹಾಮಂಡಳದ ಉಪಾಧ್ಯಕ್ಷ ಶಿವಕುಮಾರ ಎಸ್.ಪಾಟೀಲ, ರಾಜ್ಯ ಅಡಕೆ ಮಾರಾಟ ಸಹಕಾರ ಮಂಡಳದ ಅಧ್ಯಕ್ಷ ಎಚ್.ಎಸ್. ಮಂಜಪ್ಪ, ಕೆಡಿಸಿಸಿ ಬ್ಯಾಂಕ್ ನಿರ್ದೇಶಕ ರಾಘವೇಂದ್ರ ಶಾಸ್ತ್ರಿ, ಟಿಎಸ್‌ಎಸ್ ಉಪಾಧ್ಯಕ್ಷ ಎಂ.ಎನ್. ಭಟ್ಟ, ರಾಮಕೃಷ್ಣ ಹೆಗಡೆ ಕಡವೆ, ತಬಲಿ ಬಂಗಾರಪ್ಪ, ಎಸ್.ಕೆ. ಭಾಗ್ವತ್, ಎಂ.ಜಿ. ನಾಯ್ಕ ಹಾದ್ರಿಮನೆ, ಜಿ.ಆರ್. ಹೆಗಡೆ ಹಳದೋಟ,ತಹಸೀಲ್ದಾರ್‌ ಎಂ.ಆರ್. ಕುಲಕರ್ಣಿ, ವ್ಯವಸ್ಥಾಪಕ ಸತೀಶ ಎಸ್. ಹೆಗಡೆ ಇತರರಿದ್ದರು.

ಸಂಘದ ಅಧ್ಯಕ್ಷ ಆರ್.ಎಂ. ಹೆಗಡೆ ಬಾಳೇಸರ ಸ್ವಾಗತಿಸಿದರು. ಜಿ.ಜಿ. ಹೆಗಡೆ ಬಾಳಗೋಡ, ಪ್ರಸನ್ನಕುಮಾರ ಭಟ್ಟ ಕಾರ್ಯಕ್ರಮ ನಿರ್ವಹಿಸಿದರು.

Share this article