ಯುವನಿಧಿಗೆ ಮಂಡ್ಯ ಜಿಲ್ಲೆಯಿಂದ 715 ಜನ ಮಾತ್ರ ನೋಂದಣಿ...!

KannadaprabhaNewsNetwork | Published : Jan 8, 2024 1:45 AM

ಸಾರಾಂಶ

ಮಂಡ್ಯ ಜಿಲ್ಲೆಯಲ್ಲಿ ಅಂದಾಜು 10,000 ವಿದ್ಯಾರ್ಥಿಗಳು 2022-23ನೇ ಸಾಲಿನಲ್ಲಿ ಉತ್ತೀರ್ಣರಾಗಿದ್ದಾರೆ. ಇವರಲ್ಲಿ ಶೇ. 40ರಷ್ಟು ವಿದ್ಯಾರ್ಥಿಗಳು ಉನ್ನತ ವ್ಯಾಸಂಗ ಹಾಗೂ ಉದ್ಯೋಗಕ್ಕೆ ಸೇರ್ಪಡೆಯಾಗಿದ್ದರೆ ಎಂದು ಭಾವಿಸಿದರೂ 6000 ವಿದ್ಯಾರ್ಥಿಗಳು ನೋಂದಣಿಯಾಗಬೇಕು. ಜಿಲ್ಲೆಯಲ್ಲಿ ಈವರೆಗೆ ಕೇವಲ 715 ಅಭ್ಯರ್ಥಿಗಳು ನೋಂದಣಿ ಮಾಡಿಕೊಂಡಿದ್ದಾರೆ.

ಕನ್ನಡಪ್ರಭ ವಾರ್ತೆ ಮಂಡ್ಯಯುವನಿಧಿ ಯೋಜನೆಗೆ ಜಿಲ್ಲೆಯಲ್ಲಿ ಈವರೆಗೆ ಕೇವಲ 715 ಅಭ್ಯರ್ಥಿಗಳು ನೋಂದಣಿ ಮಾಡಿಕೊಂಡಿದ್ದಾರೆ. ಸರ್ಕಾರ ಜಾರಿಗೆ ತಂದಿರುವ ಈ ಯೋಜನೆ ಯಶಸ್ಸಿಗೆ ಜಿಲ್ಲೆಯ ಕಾಲೇಜುಗಳ ಪ್ರಾಂಶುಪಾಲರ ಸಹಕಾರ ಅಗತ್ಯ ಎಂದು ಜಿಲ್ಲಾಧಿಕಾರಿ ಡಾ.ಕುಮಾರ ತಿಳಿಸಿದರು.

ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಯುವನಿಧಿ ನೋಂದಣಿ ಕುರಿತಂತೆ ಜಿಲ್ಲೆಯ ವಿವಿಧ ಕಾಲೇಜುಗಳ ಪ್ರಾಂಶುಪಾಲರ ಸಭೆಯಲ್ಲಿ ಮಾತನಾಡಿದರು.

ಜಿಲ್ಲೆಯ ವಿವಿಧ ಕಾಲೇಜಿನ ಪ್ರಾಂಶುಪಾಲರು ತಮ್ಮಲ್ಲಿ 2022-23ನೇ ಸಾಲಿನಲ್ಲಿ ಉತ್ತೀರ್ಣರಾದ ಪದವಿಧರ ವಿದ್ಯಾರ್ಥಿಗಳ ಮಾಹಿತಿ ಲಭ್ಯವಿದೆ. ಯುವನಿಧಿ ಯೋಜನೆಗೆ ಅಭ್ಯರ್ಥಿಗಳನ್ನು ನೋಂದಾಯಿಸಲು ಸಹಕರಿಸಬೇಕು ಎಂದು ಹೇಳಿದರು.

2022- 23ನೇ ಶೈಕ್ಷಣಿಕ ಸಾಲಿನ 2023ರಲ್ಲಿ ಪದವಿ ಅಥವಾ ಡಿಪ್ಲೋಮಾ ಉತ್ತೀರ್ಣರಾದ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಲು ಅವಕಾಶವಿದೆ. ಪ್ರಾಂಶುಪಾಲರಿಗೆ ಸುಲಭವಾಗಿ ವಿದ್ಯಾರ್ಥಿಗಳನ್ನು ಸಂಪರ್ಕಿಸಲು ಸಾಧ್ಯ. ಉನ್ನತ ವ್ಯಾಸಂಗಕ್ಕೆ, ಉದ್ಯೋಗ ಅಥವಾ ಸ್ವಯಂ ಉದ್ಯೋಗ ಪಡೆದುಕೊಂಡವರನ್ನು ಹೊರತುಪಡಿಸಿ ಉಳಿದ ವಿದ್ಯಾರ್ಥಿಗಳನ್ನು ಈ ಯೋಜನೆಯಡಿ ನೋಂದಣಿ ಮಾಡಿಸಿ‌ ಯಾವುದೇ ಅಭ್ಯರ್ಥಿ ಯೋಜನೆಯಿಂದ ವಂಚಿತರಾಗದಂತೆ ನೋಡಿಕೊಳ್ಳುವಂತೆ ಸೂಚಿಸಿದರು.

ಜಿಲ್ಲೆಯಲ್ಲಿ ಅಂದಾಜು 10000 ವಿದ್ಯಾರ್ಥಿಗಳು 2022-23ನೇ ಸಾಲಿನಲ್ಲಿ ಉತ್ತೀರ್ಣರಾಗಿದ್ದಾರೆ. ಇವರಲ್ಲಿ ಶೇ. 40ರಷ್ಟು ವಿದ್ಯಾರ್ಥಿಗಳು ಉನ್ನತ ವ್ಯಾಸಂಗ ಹಾಗೂ ಉದ್ಯೋಗಕ್ಕೆ ಸೇರ್ಪಡೆಯಾಗಿದ್ದರೆ ಎಂದು ಭಾವಿಸಿದರೂ 6000 ವಿದ್ಯಾರ್ಥಿಗಳು ನೋಂದಣಿಯಾಗಬೇಕು. ಜಿಲ್ಲೆಯಲ್ಲಿ ಈವರೆಗೆ ಕೇವಲ 715 ಅಭ್ಯರ್ಥಿಗಳು ನೋಂದಣಿ ಮಾಡಿಕೊಂಡಿದ್ದಾರೆ. ನೋಂದಣಿ ಪ್ರಕ್ರಿಯೆ ಚುರುಕುಗೊಳ್ಳಬೇಕು ಎಂದರು.

ವಿಶ್ವವಿದ್ಯಾಲಯಗಳಿಂದ ಎನ್ಎಡಿನಲ್ಲಿ ಅಂಕಪಟ್ಟಿ ಅಪ್‌ಲೋಡ್ ಆಗಿಲ್ಲದ ಕಾರಣ ನೋಂದಣಿ ಕ್ಷೀಣವಾಗಿದೆ ಎಂದು ತಿಳಿಸಿರುವ ಹಿನ್ನೆಲೆಯಲ್ಲಿ ವಿಶ್ವವಿದ್ಯಾಲಯಗಳೊಂದಿಗೆ ಚರ್ಚಿಸಿ ಎನ್ಎಡಿನಲ್ಲಿ ಅಂಕಪಟ್ಟಿ ಅಪ್‌ಲೋಡ್ ಮಾಡಲು ತಿಳಿಸಲಾಗಿದೆ. ಕಾಲೇಜಿನ ಪ್ರಾಂಶುಪಾಲರು ವಿಶೇಷ ಕಾಳಜಿ ವಹಿಸಿ ವಿಶ್ವವಿದ್ಯಾಲಯದೊಂದಿಗೆ ಸಮನ್ವಯ ಸಾಧಿಸಿ ತಮ್ಮ ಕಾಲೇಜಿನ ವಿದ್ಯಾರ್ಥಿಗಳ ಅಂಕಪಟ್ಟಿ ಎನ್ಎಡಿನಲ್ಲಿ ಅಪ್‌ಲೋಡ್ ಮಾಡಿಸಿ ಎಂದು ಹೇಳಿದರು.

ಇದೇ ವೇಳೆ ಕೌಶಲ್ಯಾಭಿವೃದ್ದಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ವತಿಯಿಂದ ವಿಶ್ವ ಕೌಶಲ್ಯ ಸ್ಪರ್ಧೆ -2024 ಪೋಸ್ಟರ್ ಅನ್ನು ಬಿಡುಗಡೆ ಮಾಡಲಾಯಿತು.

ಸಭೆಯಲ್ಲಿ ಜಿಲ್ಲಾ ಎಸ್ಪಿ ಎನ್.ಯತೀಶ್, ಜಿಪಂ ಕಾರ್ಯದರ್ಶಿ ಆನಂದ್ ಕುಮಾರ್ , ಪಾಂಡವಪುರ ಎಸಿ ನಂದೀಶ್, ಜಿಲ್ಲಾ ಕೌಶಲ್ಯ ಅಭಿವೃದ್ಧಿ ಅಧಿಕಾರಿ ಆರ್.ನಾಗನಂದ, ಜಿಲ್ಲಾ ಕೈಗಾರಿಕಾ ಕೇಂದ್ರದ ಉಪನಿರ್ದೇಶಕಿ ಶೈಲಜಾ, ಜಿಲ್ಲಾ ಉದ್ಯೋಗ ವಿನಿಮಯಾಧಿಕಾರಿ ನಾಗರಾಜು ಸೇರಿದಂತೆ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.

Share this article