ನೀರು ತುಂಬಿದ ಗುಂಡಿಯಲ್ಲಿ ಶವ ಸಂಸ್ಕಾರ!

KannadaprabhaNewsNetwork |  
Published : Nov 13, 2025, 12:15 AM IST
12 ಟಿವಿಕೆ 1 – ತುರುವೇಕೆರೆ ತಾಲೂಕು ದಂಡಿನಶಿವರದಲ್ಲಿ ಶವ ಸಂಸ್ಕಾರ ಮಾಡುವ ವೇಳೆ ಗುಂಡಿಯಲ್ಲಿ ನೀರು ಜಿನುಗುತ್ತಿರುವುದು. | Kannada Prabha

ಸಾರಾಂಶ

ಸತ್ತು ಹೋದ ವ್ಯಕ್ತಿಯ ಶವವನ್ನು ನೀರು ತುಂಬಿದ ಗುಂಡಿಯಲ್ಲೇ ಹೂತಿರುವ ಘಟನೆ ತಾಲೂಕಿನ ದಂಡಿನಶಿವರದಲ್ಲಿ ಬುಧವಾರ ನಡೆದಿದೆ.

ಎಸ್.ನಾಗಭೂಷಣ ಕನ್ನಡಪ್ರಭ ವಾರ್ತೆ ತುರುವೇಕೆರೆ

ಸತ್ತು ಹೋದ ವ್ಯಕ್ತಿಯ ಶವವನ್ನು ನೀರು ತುಂಬಿದ ಗುಂಡಿಯಲ್ಲೇ ಹೂತಿರುವ ಘಟನೆ ತಾಲೂಕಿನ ದಂಡಿನಶಿವರದಲ್ಲಿ ಬುಧವಾರ ನಡೆದಿದೆ. ಬುಧವಾರ ದಂಡಿನಶಿವರ ಗ್ರಾಮದ ಹೊಸ ಕಾಲೋನಿಯ ಸಿದ್ದಮ್ಮ ಎಂಬ ವಯೋವೃದ್ಧರೊಬ್ಬರು ಮರಣ ಹೊಂದಿದ್ದರು. ಇವರ ಶವಸಂಸ್ಕಾರ ಮಾಡಲು ಆ ಕುಟುಂಬದ ಸದಸ್ಯರು ದಲಿತರಿಗಾಗಿ ಮೀಸಲಿಟ್ಟಿದ್ದ ಪ್ರದೇಶಕ್ಕೆ ಶವ ತಂದರು. ಶವ ಹೂಳಲು ಅಗೆದಂತೆಲ್ಲಾ ನೀರು ಜಿನುಗುತ್ತಿತ್ತು. ಎಷ್ಟು ನೀರು ಹೊರಗೆ ಚೆಲ್ಲಿದರೂ ನೀರು ಬರುತ್ತಲೇ ಇತ್ತು. ಬೇರೊಂದು ಗುಂಡಿ ತೆಗೆಯಲ ಪ್ರಯತ್ನಿಸಿದರೂ ಸಹ ಇದಕ್ಕಿಂತ ಭಿನ್ನವೇನಿಲ್ಲ. ಕೊನೆಗೆ ವಿಧಿ ಇಲ್ಲದೇ ನೀರು ತುಂಬಿದ ಗುಂಡಿಯಲ್ಲೇ ಸಿದ್ದಮ್ಮನವರ ಶವವನ್ನು ಹೂಳಲಾಯಿತು. ಈ ದುಃಸ್ಥಿತಿ ಕಂಡು ಶವ ಸಂಸ್ಕಾರಕ್ಕೆ ಬಂದಿದ್ದ ಕುಟುಂಬದ ಸದಸ್ಯರು ತಾಲೂಕು ಆಡಳಿತಕ್ಕೆ ಹಿಡಿಶಾಪ ಹಾಕಿದರು.

ಗ್ರಾಮದ ಕೆರೆಯ ಬಳಿ ಸುಮಾರು 20 ಗುಂಟೆ ಜಮೀನನ್ನು ಸ್ವಶಾನಕ್ಕೆಂದು ಗುರುತಿಸಲಾಯಿತು. ಸುಮಾರು 13 ಲಕ್ಷ ರು ವೆಚ್ಚದಲ್ಲಿ ಅದರ ಅಭಿವೃದ್ಧಿಗೆಂದು ನಿರ್ಮಿತಿ ಕೇಂದ್ರಕ್ಕೆ ವಹಿಸಲಾಗಿತ್ತು. ಆದರೆ ನಿರ್ಮಿತಿ ಕೇಂದ್ರ 20 ಗುಂಟೆ ಜಮೀನಿನಲ್ಲಿರುವ ನೂರಾರು ಗುಂಡಿಗಳನ್ನು ಮುಚ್ಚಲು ನಮಗೆ ಆದೇಶಿಸಿಲ್ಲ. ಕೇವಲ ಬೇಲಿ, ಶವ ಇಡುವ ಸ್ಥಳ ಸೇರಿದಂತೆ ಇನ್ನಿತರ ಕಾಮಗಾರಿಗಳನ್ನಷ್ಟೇ ಮಾಡಲು ತಿಳಿಸಲಾಗಿದೆ ಎಂದು ಹೇಳಿ ಕೈ ತೊಳೆದುಕೊಂಡಿದೆ. 20 ಗುಂಟೆ ಜಮೀನಿನಲ್ಲಿ ನೂರಾರು ಆಳುದ್ದದ ಗುಂಡಿಗಳಿವೆ. ಅವುಗಳನ್ನು ಸಮತಟ್ಟು ಮಾಡದ ವಿನಃ ಸ್ವಶಾನದ ಅಭಿವೃದ್ಧಿ ಸಾಧ್ಯವಿಲ್ಲ. ಗ್ರಾಮ ಪಂಚಾಯಿತಿಯಿಂದ ಸುಮಾರು 6 ಲಕ್ಷ ರುಗಳಲ್ಲಿ 20 ಗುಂಟೆ ಜಮೀನಿನಲ್ಲಿರುವ ಗುಂಡಿಗಳನ್ನು ಮುಚ್ಚಿಸಲು ಕ್ರಮ ಕೈಗೊಳ್ಳಲಾಗಿತ್ತು. ಅದರೆ ಕಾಮಗಾರಿ ಅರ್ಧಂಬರ್ಧ ಆಗಿದೆ. ಆಗಿರುವ ಕಾಮಗಾರಿಯೂ ಕೆಲಸಕ್ಕೆ ಬಾರದಾಗಿದೆ. ಹಣ ಮಾತ್ರ ಖರ್ಚಾಗಿದೆ. ದಲಿತರಿಗೆ ಪ್ರಾತಿನಿಧ್ಯ ನೀಡುತ್ತೇವೆಂದು ಹೇಳುವ ಜನಪ್ರತಿನಿಧಿಗಳು ತಮ್ಮ ಹೀನಾಯ ಸ್ಥಿತಿಯನ್ನೊಮ್ಮೆ ನೋಡಲಿ ಎನ್ನುವುದು ಪ್ರಜ್ಞಾವಂತರ ಸವಾಲಾಗಿದೆ.

ಕೋಟ್‌... ದಂಡಿನಶಿವರ ಹೋಬಳಿ ಒಂದೇ ಅಲ್ಲ. ತಾಲೂಕಿನ ಬಹುತೇಕ ಗ್ರಾಮಗಳಲ್ಲಿ ದಲಿತರಿಗೆ ಸ್ಮಶಾನ ಇಲ್ಲವೇ ಇಲ್ಲ. ಶವ ಹೂಳುವ ಸಂದರ್ಭ ಬಂದಾಗ ಕಷ್ಟವಾಗುತ್ತಿದೆ. ಸ್ವಾತಂತ್ರ್ಯ ಬಂದು ಇಷ್ಟು ವರ್ಷವಾದರೂ ಇನ್ನೂ ಹೀಗೆ ಹೀನಾಯವಾಗಿ ಬದುಕುತ್ತಿದ್ದೇವಲ್ಲಾ ಎಂದು ನಾಚಿಕೆಯಾಗುತ್ತದೆ. - ದಂಡಿನಶಿವರ ಕುಮಾರ್ ಡಿಎಸ್ ಎಸ್ ನ ಜಿಲ್ಲಾ ಸಂಘಟನಾ ಸಂಚಾಲಕ.

PREV

Recommended Stories

ಬಿಳಿಕೆರೆ ಬಳಿ ಒಂದು ಗಂಡು ಹುಲಿ ಮರಿ ಸೆರೆ
ಪ್ರಕೃತಿ ವಿಕೋಪಗಳ ಎದುರಿಸುವ ಧೈರ್ಯ ಎಲ್ಲರಲ್ಲಿರಲಿ: ಜಿಪಂ ಸಿಇಒ ಗಿತ್ತೆ ಮಾಧವ ರಾವ್‌