ಕನ್ನಡಪ್ರಭ ವಾರ್ತೆ, ಕೊಪ್ಪ
೨೮ರಂದು ಅಮ್ಮ ಫೌಂಡೇಶನ್ ತುಮಖಾನೆ ಹಾಗೂ ಟಾಟಾ ಎಲೆಕ್ಟ್ರಾನಿಕ್ಸ್ ಸಹಯೋಗದಲ್ಲಿ ಮಹಿಳೆಯರಿಗೆ ವಿಶೇಷವಾಗಿ ಉದ್ಯೋಗ ಮೇಳವನ್ನು ಕೊಪ್ಪದಲ್ಲಿ ಆಯೋಜಿಸಿತ್ತು. ಇದರ ಫಲವಾಗಿ ಮೊದಲ ಬ್ಯಾಚ್‌ನ ಅಭ್ಯರ್ಥಿಗಳು ಈಗಾಗಲೇ ಬೆಂಗಳೂರಿನ ಟಾಟಾ ಕಂಪನಿಯಲ್ಲಿ ಉದ್ಯೋಗ ಪಡೆದು ಯಶಸ್ವಿಯಾಗಿ ಕೆಲಸ ನಿರ್ವಹಿಸುತ್ತಿದ್ದಾರೆ.ನ.೧೨ ರ ಬುಧವಾರ ಎರಡನೇ ಬ್ಯಾಚ್‌ಗೆ ಆಯ್ಕೆಯಾದ ಅಭ್ಯರ್ಥಿಗಳನ್ನು ಬೆಂಗಳೂರಿನ ಟಾಟಾ ಎಲೆಕ್ಟ್ರಾನಿಕ್‌ಗೆ ಕಳುಹಿಸುವ ಕಾರ್ಯ ಅಮ್ಮ ಫೌಂಡೇಶನ್ ಸಂಸ್ಥಾಪಕ ಅಧ್ಯಕ್ಷ ಸುಧಾಕರ್ ಶೆಟ್ಟಿ ನೇತೃತ್ವದಲ್ಲಿ ಯಶಸ್ವಿಯಾಗಿ ನೆರವೇರಿತು. ಅಭ್ಯರ್ಥಿಗಳ ಬೀಳ್ಕೊಡುಗೆ ಸಮಾರಂಭದಲ್ಲಿ ಸುಧಾಕರ್ ಶೆಟ್ಟಿ ಅಭ್ಯರ್ಥಿಗಳಿಗೆ ಅಭಿನಂದನಾ ಪತ್ರ ನೀಡಿ ಅವರ ಮುಂದಿನ ಭವಿಷ್ಯಕ್ಕಾಗಿ ಶುಭ ಹಾರೈಸಿದರು. ೫೦ ಜನ ವಿದ್ಯಾವಂತ ಮಹಿಳೆಯರನ್ನು ಅಮ್ಮ ಫೌಂಡೇಶನ್ ನಿಂದ ಸುಧಾಕರ್ ಶೆಟ್ಟಿ ಸ್ವಂತ ಖರ್ಚಿನಿಂದ ಬೆಂಗಳೂರಿಗೆ ಬಸ್ಸು ಹಾಗೂ ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟದ ವ್ಯವಸ್ಥೆಯೊಂದಿಗೆ ಅಭ್ಯರ್ಥಿಗಳನ್ನು ಸುರಕ್ಷಿತವಾಗಿ ಬೆಂಗಳೂರಿಗೆ ತಲುಪಿಸುವ ಕೆಲಸ ಮಾಡಿದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶೃಂಗೇರಿ ಕ್ಷೇತ್ರ ಅಧ್ಯಕ್ಷ ದಿವಾಕರ್ ಭಟ್ ಮಾತನಾಡುತ್ತ, ಸುಧಾಕರ್ ಶೆಟ್ಟಿ ಅವರ ಸಮಾಜ ಸೇವೆ ನಿಜವಾದ ಸೇವೆಯಾಗಿದೆ ಎಂದು ಹೇಳಿದರು. ಅಮ್ಮ ಫೌಂಡೇಶನ್ ರಾಜಕೀಯದಿಂದ ದೂರವಿದ್ದು, ಕರುಣಾಮಯ ಸೇವೆಯಲ್ಲಿ ತೊಡಗಿದೆ ಎಂದು ಪ್ರಶಂಶಿಸಿದರು. ವಿಶೇಷವಾಗಿ ಮಹಿಳೆಯರನ್ನು ಸ್ವಾವಲಂಬಿಗಳನ್ನಾಗಿ ಮಾಡುವಲ್ಲಿ ಅಮ್ಮ ಫೌಂಡೇಶನ್ ನೀಡುತ್ತಿರುವ ಕೊಡುಗೆ ಶ್ಲಾಘನೀಯ ಎಂದು ಹೇಳಿದರು.ಎನ್.ಆರ್. ಪುರ ರೋಟರಿ ಕ್ಲಬ್ ಅಧ್ಯಕ್ಷ ವಿನಯ್ ಕಣಿವೆಯವರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಶೃಂಗೇರಿ ಕ್ಷೇತ್ರದಲ್ಲಿ ಯುವಕರು, ವಿಶೇಷವಾಗಿ ಪದವೀಧರರು ನಿರುದ್ಯೋಗದಿಂದ ಬಳಲುತ್ತಿದ್ದಾರೆ ಎಂದು ವಿಷಾದ ವ್ಯಕ್ತಪಡಿಸಿದ ಅವರು ಕೆಲಸಕ್ಕೆ ಸೇರಿದಾಗ ಕಂಪನಿ ನೀಡಿದ ಅವಕಾಶಕ್ಕೆ ಕೃತಜ್ಞರಾಗಿರಿ ನಿಷ್ಠೆಯಿಂದ ಕೆಲಸ ಮಾಡಿದರೆ ಮಾತ್ರ ಯಶಸ್ಸು ಸಿಗುತ್ತದೆ. ಬೆಂಗಳೂರಿನ ಜೀವನಶೈಲಿಗೆ ತಕ್ಕಂತೆ ಸಮಯ ಪಾಲನೆ ಅತ್ಯಂತ ಮುಖ್ಯ ಮೊದಲ ಉದ್ಯೋಗವೆಂದರೆ ಅದು ಜೀವನದ ಮೊದಲ ಮೈಲಿಗಲ್ಲು ಅದನ್ನು ಗೌರವದಿಂದ ಸ್ವೀಕರಿಸಿ ಎಂದರು. ಪ್ರತಿ ವರ್ಷ ಶೃಂಗೇರಿ ಕ್ಷೇತ್ರದಲ್ಲಿ ಸುಮಾರು ೨೦೦೦ ಮಂದಿ ಪದವಿ ಅಥವಾ ಉನ್ನತ ಪದವಿ ಪಡೆದರು ಅವರಲ್ಲಿ ಕೇವಲ ೨೦೦ ಜನರಿಗೆ ಮಾತ್ರ ಉದ್ಯೋಗ ಸಿಗುತ್ತಿದೆ ಉಳಿದವರು ನಿರುದ್ಯೋಗಿಗಳಾಗುತ್ತಿದ್ದಾರೆ. ಸರ್ಕಾರ ಈ ಕುರಿತು ಚಿಂತಿಸಬೇಕು ಎಂದು ಹೇಳಿದರು.ವಾಸಪ್ಪ ಕುಂಚೂರು, ಶಿವದಾಸ್, ಸುಧಾ ಪೈ, ಗುರುಪ್ರಸಾದ್, ಪವಿತ್ರ ಕಾಡಪ್ಪ ಮತ್ತು ಪುಷ್ಪಲತಾ ಜನಾರ್ಧನ್, ಫಲಾನುಭವಿಗಳು ಮತ್ತು ಪೋಷಕರು ಇದ್ದರು.