ಕನ್ನಡಪ್ರಭ ವಾರ್ತೆ ಗೋಕಾಕ
ಕಳೆದ ಮಂಗಳವಾರ (ಫೆ.18)ದಂದು ಕುಂಭಮೇಳಕ್ಕೆ ತೆರಳಿದ್ದ ನಗರದ ಲಕ್ಷ್ಮೀ ಬಡಾವಣೆ ನಿವಾಸಿ ಮೃತ ಬಾಲಚಂದ್ರ ಗೌಡರ(50) ಗುರುವಾರ ಪೇಟ ನಿವಾಸಿ ವಿರುಪಾಕ್ಷ ಗುಮತಿ(61), ಗೊಂಬಿಗುಡಿ ಹತ್ತಿರದ ನಿವಾಸಿ ಬಸವರಾಜ್ ಕುರಟ್ಟಿ(63), ಗುರುವಾರ ಪೇಟ ನಿವಾಸಿ ಬಸವರಾಜ್ ದೊಡಮನಿ(49), ಬಾಗಲಕೋಟ ಜಿಲ್ಲೆ ಗುಳೇದಗುಡ್ಡದ ನಿವಾಸಿ ಈರಣ್ಣ ಶೇಬಿನಕಟ್ಟಿ(27) ಅಂತ್ಯಕ್ರಿಯೆ ಗೋಕಾಕ ನಗರದ ಎನ್‌ಎಸ್‌ಎಫ್ ಹತ್ತಿರದ ರುದ್ರಭೂಮಿಯಲ್ಲಿ ನೆರವೇರಿಸಲಾಯಿತು.
ಹುಕ್ಕೇರಿ ತಾಲೂಕಿನ ಆನಂದಪುರ ಗ್ರಾಮದ ನಿವಾಸಿ ಸುನೀಲ್ ಶೇಡಶ್ಯಾಳೆ(45) ಮೃತ ದೇಹವನ್ನು ಆನಂದಪುರದ ಸ್ವಗ್ರಾಮಕ್ಕೆ ಆ್ಯಂಬುಲೆನ್ಸ್ ಮೂಲಕ ಗೋಕಾಕ ನಗರದಿಂದ ರವಾನಿಸಲಾಯಿತು. ಮೃತ ದೇಹಗಳನ್ನು ಮಧ್ಯಪ್ರದೇಶದಿಂದ ರವಾನಿಸಲಾದ ಆ್ಯಂಬುಲೆನ್ಸನಲ್ಲಿ ಇನ್ನೊರ್ವ ಗಾಯಾಳು ಸದಾಶಿವ ಉಪದಲಿ ಅವರನ್ನು ಸಹ ಕರೆತರಲಾಗಿತ್ತು. ಎದೆಯ ಭಾಗಕ್ಕೆ ಪೆಟ್ಟು ಬಿದ್ದಿರುವ ಹಿನ್ನೆಲೆಯಲ್ಲಿ ಹೆಚ್ಚಿನ ಚಿಕಿತ್ಸೆಗಾಗಿ ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.ಮೃತರ ಪಾರ್ಥಿವ ಶರೀರ ಮಧ್ಯಪ್ರದೇಶದಿಂದ ಸೋಲ್ಲಾಪೂರ ಮಾರ್ಗವಾಗಿ ಗೋಕಾಕ ನಗರಕ್ಕೆ ತರಲಾಗಿತ್ತು. ನಗರದ ತಂಬಾಕಿ ಗೋಡೌನ ಹತ್ತಿರದಲ್ಲಿ ಮೃತರ ಪಾರ್ಥಿವ ಶರೀರವನ್ನು ಪ್ರತ್ಯೇಕ ವಾಹನಗಳ ಮೂಲಕ ನಗರದ ಬಸವೇಶ್ವರ ವೃತ್ತ ಸೇರಿ ವಿವಿಧ ಬೀದಿಗಳಲ್ಲಿ ಮೆರವಣಿಗೆ ಮಾಡಿ ರಾಮಲಿಂಗೇಶ್ವರ ದೇವಸ್ಥಾನ(ಗೊಂಬಿ ಗುಡಿ) ಹತ್ತಿರ ತರಲಾಯಿತು. ಅಲ್ಲಿಂದ ಗೋಕಾಕ ನಗರದ ಎನ್‌ಎಸ್‌ಎಫ್ ಹತ್ತಿರದ ನೇಕಾರ ಸಮಾಜದ ರುದ್ರಭೂಮಿಯಲ್ಲಿ ವಿವಿಧ ಧಾರ್ಮಿಕ ಕಾರ್ಯಗಳನ್ನು ನೆರವೇರಿಸಿ ಅಂತ್ಯಕ್ರಿಯೆ ನಡೆಸಿದರು.
ಚಿಕಿತ್ಸೆ ಫಲಿಸದೆ ಡ್ರೈವರ್ ಸಾವು:
ಡ್ರೈವರ್ ಮುಷ್ತಾಕ ಕಿಲ್ಲೇದಾರ ಸಹ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಅಸುನಿಗಿದ್ದು ಅವರ ಪಾರ್ಥಿವ ಶರೀರ ಶಿಂಧಿಕುರಬೇಟ ಗ್ರಾಮಕ್ಕೆ ಕರೆ ತರುವ ಎಲ್ಲ ವ್ಯವಸ್ಥೆ ಮಾಡಲಾಗಿದೆ. ಈ ದುರ್ಘಟನೆಯಲ್ಲಿ ಮೃತ ಪಟ್ಟ ಕುಟುಂಬದ ಸದಸ್ಯರಿಗೆ ಸರಕಾರದಿಂದ ಪರಿಹಾರ ಕೊಡಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು.
ಕುಂಭಮೇಳಕ್ಕೆ ತೆರಳಿದ್ದ ನೇಕಾರ ಸಮಾಜದ 6 ಜನ ಸಾವನ್ನಪ್ಪಿದ್ದು, ಮೃತ ಕುಟುಂಬಸ್ಥರಿಗೆ ಮಧ್ಯಪ್ರದೇಶ ಬಿಜೆಪಿ ಸರಕಾರದಿಂದ ಎಲ್ಲ ರೀತಿಯ ಪರಿಹಾರ ಕಲ್ಪಿಸುವಲ್ಲಿ ಶಕ್ತಿ ಮೀರಿ ಶ್ರಮಿಸುತ್ತೇನೆ. ರಾಜ್ಯ ಸರಕಾರವು ಸಹ ಮೃತರ ಕುಟುಂಬಕ್ಕೆ ಆರ್ಥಿಕ ನೆರವು ನೀಡಿ ಆ ಕುಟುಂಬಗಳಿಗೆ ಆಸರೆಯಾಗಬೇಕು. - ಜಗದೀಶ ಶೆಟ್ಟರ, ಲೋಕಸಭಾ ಸದಸ್ಯರು