ಕನ್ನಡಪ್ರಭ ವಾರ್ತೆ ಮೈಸೂರು
ನನ್ನನ್ನು ರಾಜ್ಯಾಧ್ಯಕ್ಷರಾಗಿ ನೇಮಕ ಮಾಡುವ ಬಗ್ಗೆ ಚರ್ಚೆ ನಡೆದಿಲ್ಲ ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ತಿಳಿಸಿದರು.ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜೆಡಿಎಸ್ ರಾಜ್ಯಾಧ್ಯಕ್ಷರಾಗಿ ಎಚ್.ಡಿ. ಕುಮಾರಸ್ವಾಮಿಯವರೇ ಮುಂದುವರೆಯಬೇಕು ಎನ್ನುವುದು ಎಲ್ಲರ ಅಭಿಪ್ರಾಯವಾಗಿದೆ ಎಂದರು.
ನಾನು ಪಕ್ಷದ ಒಬ್ಬ ಸಾಮಾನ್ಯ ಕಾರ್ಯಕರ್ತ. ತಳ ಮಟ್ಟದ ಕಾರ್ಯಕರ್ತನಿಗೆ ಸ್ಥಾನಮಾನ ಕೊಡದಿರುವ ಬಗ್ಗೆ ಅಸಮಾಧಾನ ಇದೆ. ಅವರಿಗೆ ಪಕ್ಷದಲ್ಲಿ ಸ್ಥಾನಮಾನ ನೀಡುವ ಕೆಲಸ ಮಾಡುತ್ತೇನೆ ಎಂದರು.ನನ್ನನ್ನು ಸೇರಿದಂತೆ ಅನೇಕ ಪಕ್ಷದ ಮುಖಂಡರ ಅಭಿಪ್ರಾಯವಿದೆ. ಕುಮಾರಸ್ವಾಮಿ ಅವರೇ ಪಕ್ಷದ ರಾಜ್ಯಾಧ್ಯಕ್ಷರಾಗಿ ಮುಂದುವರೆಯಲಿ ಎಂಬ ಒತ್ತಾಯವಿದೆ. ಜೆಡಿಎಸ್ ಪಕ್ಷ ಆಧಿಕಾರ ಅನುಭವಿಸಿದ್ದು ಕಡಿಮೆ. ನಮ್ಮ ಕಾರ್ಯಕರ್ತರಿಗೆ ನ್ಯಾಯ ಒದಗಿಸಬೇಕು. ಆ ನಿಟ್ಟಿನಲ್ಲಿ ನಾನು ಕೆಲಸ ಮಾಡುತ್ತಿದ್ದೇನೆ ಎಂದು ಅವರು ಹೇಳಿದರು.
ಜೆಡಿಎಸ್ ನಲ್ಲಿ ಕೆಲವು ಬದಲಾವಣೆ ಆಗಬೇಕು, ಆ ಬಗ್ಗೆ ಗಮನ ಹರಿಸಿದ್ದೇನೆ. ಯಾರು ಪಕ್ಷದ ಬೆಳೆವಣಿಗೆಗೆ ಹೋರಾಟ ಮಾಡ್ತಾರೋ ಅಂತಹ ಸಕ್ರಿಯ ಕಾರ್ಯಕರ್ತರನ್ನು ಈ ಬಾರಿ ಪಾದಧಿಕಾರಿಗಳಾಗಿ ಆಯ್ಕೆ ಮಾಡುತ್ತೇವೆ ಎಂದು ಅವರು ತಿಳಿಸಿದರು.ಸ್ಥಳೀಯ ಮೈತ್ರಿ ಕುರಿತು ಚರ್ಚೆ
ಮುಂಬರುವ ಜಿಲ್ಲಾ ಪಂಚಾಯತಿ, ತಾಲೂಕು ಪಂಚಾಯತಿ ಚುನಾವಣೆ ಸಂಬಂಧ ಸಭೆ ನಡೆಸಿದ್ದೇವೆ. ಹಾಲಿ ಮಾಜಿ ಶಾಸಕರು, ಮುಖಂಡರ ಜೊತೆ ಸಭೆ ನಡೆಸಿದ್ದೇವೆ. ಮುಖಂಡರ ಅಭಿಪ್ರಾಯ ಸಂಗ್ರಹಿಸುವ ಕೆಲಸ ಆಗಿದೆ. ಪಕ್ಷಕ್ಕೆ ಬಲ ತುಂಬುವ ನಿಟ್ಟಿನಲ್ಲಿ ಸಾಕಷ್ಟು ಚರ್ಚೆ ನಡೆಯುತ್ತಿದೆ. ಸದಸ್ಯರ ನೇಮಕ, ಚುನಾವಣೆ ಸಂಬಂಧ ಚರ್ಚೆ ಆಗಿದೆ. ಮಾರ್ಚ್ 14ರ ಒಳಗೆ ಡಿಜಿಟಲ್ ಮೂಲಕ ಪಕ್ಷದ ಸದಸ್ಯತ್ವ ಮಾಡುವುದಕ್ಕೆ ಚಾಲನೆ ನೀಡುತ್ತೇವೆ ಎಂದರು.ಸ್ಥಳೀಯ ಚುನಾವಣೆಗಳಲ್ಲಿ ಸಾಕಷ್ಟು ಜನ ಆಕಾಂಕ್ಷಿಗಳು ಇರುತ್ತಾರೆ. ಸೂಕ್ತ ವ್ಯಕ್ತಿಗಳ ಆಯ್ಕೆ ಮಾಡುವ ನಿಟ್ಟಿನಲ್ಲಿ ಸ್ಥಳೀಯ ನಾಯಕರ ಸಲಹೆ ಪಡೆಯುತ್ತೇವೆ. ಲೋಕಸಭಾ ಚುನಾವಣೆಯಲ್ಲಿ 28ರ ಪೈಕಿ 19 ಸಂಸದರ ಆಯ್ಕೆ ಆಗಿದೆ. ಎರಡು ಪಕ್ಷದ ಕಾರ್ಯಕರ್ತರ ಪರಸ್ಪರ ಹೊಂದಾಣಿಕೆಯಿಂದ ಮಾಡಲಾಗಿದೆ. ಮೈತ್ರಿ ಬಗ್ಗೆ ಎರಡು ಪಕ್ಷದ ನಾಯಕರು ಚರ್ಚೆ ಮಾಡ್ತಾರೆ ಎಂದು ಅವರು ಹೇಳಿದರು.
ಲೋಕಸಭೆ ಚುನಾವಣೆಯಲ್ಲಿ ಎರಡು ಪಕ್ಷಗಳ ಕಾರ್ಯಕರ್ತರು ಹೃದಯ ವೈಶಾಲತೆ ಮೆರೆದಿದ್ದಾರೆ. ಮೋದಿ, ಕುಮಾರಸ್ವಾಮಿ ಅವರಿಗೆ ಬಲ ತುಂಬಿದ್ದಾರೆ. ಯಾವುದೇ ಗೊಂದಲ ಉಂಟಾಗದ ರೀತಿಯಲ್ಲಿ ನಿರ್ಧಾರ ಕೈಗೊಳ್ಳುತ್ತೇವೆ ಎಂದು ಅವರು ತಿಳಿಸಿದರು.ಚುನಾವಣೆ ಬಂದಾಗ ಒಂದೊಂದು ಜಿಲ್ಲೆಯಲ್ಲಿ ರಾಜಕೀಯ ಬೇರೆ ಬೇರೆ ಇರುತ್ತದೆ. ಸ್ಥಳೀಯ ನಾಯಕರ ಅಭಿಪ್ರಾಯ ಪಡೆಯುತ್ತೇವೆ. ವರಿಷ್ಠರು ಎಲ್ಲವನ್ನೂ ತೀರ್ಮಾನ ಮಾಡ್ತಾರೆ. ರಾಜ್ಯದ ಏಳಿಗೆ, ದೇಶದ ಏಳಿಗೆಗೆ ಮೋದಿ ಅವರು ಕುಮಾರಸ್ವಾಮಿಗೆ ಜವಾಬ್ದಾರಿ ಕೊಟ್ಟಿದ್ದಾರೆ. ಅದಕ್ಕೆ ಪೂರಕವಾಗಿ ಕುಮಾರಸ್ವಾಮಿ ಕೆಲಸ ಮಾಡುತ್ತಾರೆ ಎಂದರು.
ಶಾಸಕರಾದ ಜಿ.ಡಿ. ಹರೀಶ್ ಗೌಡ, ಸಿ.ಎನ್. ಮಂಜೇಗೌಡ, ಮಾಜಿ ಶಾಸಕರಾದ ಕೆ. ಮಹದೇವ್, ಎಂ. ಅಶ್ವಿನ್ ಕುಮಾರ್ ಮೊದಲಾದವರು ಇದ್ದರು.----
ಕೋಟ್...ಜಿ.ಟಿ. ದೇವೇಗೌಡರು ಹಿರಿಯರು, ನಮ್ಮ ಪಕ್ಷದ ಚಿಹ್ನೆ ಅಡಿಯಲ್ಲಿ ಗೆದ್ದಿದ್ದಾರೆ. ಅವರು ಕೂಡ ಸ್ಪಷ್ಟವಾಗಿ ಹೇಳಿದ್ದಾರೆ. ಚಾಮುಂಡೇಶ್ವರಿ ಕ್ಷೇತ್ರಕ್ಕೆ ಹೆಚ್ಚಿನ ಒತ್ತನ್ನು ಕೊಡುತ್ತಿದ್ದೇನೆ ಎಂದಿದ್ದಾರೆ. 2025ರ ಮೊದಲ ಕರೆ ನನ್ನದು ಹೋಗಿದ್ದು ಜಿಟಿಡಿ ಅವರಿಗೆ. ಬೇಕಾದರೆ ಅವರನ್ನೇ ಕೇಳಿ. ನನ್ನ ಚುನಾವಣೆ ಅನಿರೀಕ್ಷಿತ, ಎಲ್ಲರೂ ಬಂದು ಚುನಾವಣೆಗೆ ಪ್ರಚಾರ ಕೈಗೊಂಡರು. ಜಿಟಿಡಿ ನನ್ನ ಕರೆದಿಲ್ಲ ಎಂದು ಎಲ್ಲಿ ಹೇಳಿದ್ದಾರೋ ನನಗೆ ಗೊತ್ತಿಲ್ಲ.
- ನಿಖಿಲ್ ಕುಮಾರಸ್ವಾಮಿ, ರಾಜ್ಯಾಧ್ಯಕ್ಷ, ಜೆಡಿಎಸ್ ಯುವ ಘಟಕ