ಸಂಸ್ಕಾರವಿದ್ದರೆ ಇಡೀ ಜಗತ್ತೇ ಗೌರವಿಸುತ್ತೆ: ಪ್ರೊ.ಸ್ವಾಮಿ

KannadaprabhaNewsNetwork |  
Published : Feb 26, 2025, 01:06 AM IST
25ಸಿಎಚ್‌ಎನ್‌52ಚಾಮರಾಜನಗರದ ಜೆ.ಎಸ್.ಎಸ್. ಮಹಿಳಾ ಕಾಲೇಜು ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಡಾ. ಬಿ.ಆರ್. ಅಂಬೇಡ್ಕರ್ ಓದು ಕಾರ್ಯಕ್ರಮವನ್ನು ಚಂದಕವಾಡಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಎಚ್.ಎನ್. ಸ್ವಾಮಿ ಉದ್ಘಾಟಿಸಿದರು. | Kannada Prabha

ಸಾರಾಂಶ

ಚಾಮರಾಜನಗರದ ಜೆಎಸ್ಎಸ್ ಮಹಿಳಾ ಕಾಲೇಜು ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಡಾ.ಅಂಬೇಡ್ಕರ್ ಓದು ಕಾರ್ಯಕ್ರಮವನ್ನು ಚಂದಕವಾಡಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಎಚ್.ಎನ್.ಸ್ವಾಮಿ ಉದ್ಘಾಟಿಸಿದರು.

ಕನ್ನಡಪ್ರಭ ವಾರ್ತೆ ಚಾಮರಾಜನಗರ

ಬಹು ವೈವಿಧ್ಯಮಯ ಸಂಸ್ಕೃತಿ ಹೊಂದಿರುವ ಭಾರತದಲ್ಲಿ ಸಂವಿಧಾನದಡಿ ಎಲ್ಲ ನಾಗರಿಕರಿಗೆ ಏಕತೆಯಿಂದ ಬದುಕಲು ಭದ್ರನೆಲೆ ಒದಗಿಸಿಕೊಟ್ಟ ಡಾ.ಅಂಬೇಡ್ಕರ್ ಅವರ ಜೀವನ-ಸಾಧನೆಗಳನ್ನು ಇಂದಿನ ವಿದ್ಯಾರ್ಥಿಗಳು ಓದುವ ಮೂಲಕ ಅರಿಯಬೇಕಿದೆ ಎಂದು ಚಂದಕವಾಡಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಎಚ್.ಎನ್.ಸ್ವಾಮಿ ತಿಳಿಸಿದರು.ನಗರದ ಜೆಎಸ್ಎಸ್ ಮಹಿಳಾ ಕಾಲೇಜು ಸಭಾಂಗಣದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಜೆಎಸ್ಎಸ್ ಮಹಿಳಾ ಕಾಲೇಜು ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದ್ದ ಡಾ.ಅಂಬೇಡ್ಕರ್ ಓದು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಸಂಸ್ಕಾರವಿದ್ದರೆ ಇಡೀ ಜಗತ್ತೇ ಗೌರವ ನೀಡಲಿದೆ. ವಿದ್ಯಾರ್ಥಿಗಳು ಶಿಕ್ಷಣದ ಜೊತೆಗೆ ಸಂಸ್ಕಾರ ಬೆಳೆಸಿಕೊಳ್ಳಬೇಕು. ಇಡೀ ಜಗತ್ತು ಗುರುತಿಸಿರುವ ಶ್ರೇಷ್ಠ ವ್ಯಕ್ತಿತ್ವ ಡಾ.ಅಂಬೇಡ್ಕರ್ ಅವರದ್ದು. ಅವರು ಬದುಕಿದ್ದ 65 ವರ್ಷಗಳಲ್ಲಿ 33 ವರ್ಷ ಅಧ್ಯಯನದಲ್ಲಿಯೇ ತೊಡಗಿದ್ದರು.

ಜ್ಞಾನದ ಹಸಿವಿದ್ದ ಅಂಬೇಡ್ಕರ್ ಅವರು ತಮಗೆ ದೊರಕುತ್ತಿದ್ದ 2 ರು.ಗಳಲ್ಲಿ 1 ರು. ಊಟಕ್ಕೆ ವ್ಯಯಿಸಿದರೆ ಮತ್ತೊಂದು ರು.ನಲ್ಲಿ ಪುಸ್ತಕ ಕೊಳ್ಳುತ್ತಿದ್ದರು. ತಮ್ಮ ಮನೆಯಲ್ಲಿ 51 ಸಾವಿರ ಪುಸ್ತಕಗಳ ಬೃಹತ್ ಗ್ರಂಥಾಲಯವನ್ನು ಹೊಂದಿದ್ದರು. ಜೊತೆಗೆ ಸಮಯದ ಮೌಲ್ಯ ಅರಿತಿದ್ದ ಅಂಬೇಡ್ಕರ್ ಒಂದು ಕ್ಷಣ ವ್ಯರ್ಥ ಮಾಡದ ಮಾದರಿಯನ್ನು ಇಂದಿನ ವಿದ್ಯಾರ್ಥಿಗಳು ಅಳವಡಿಸಿಕೊಳ್ಳಬೇಕಾಗಿದೆ. ಎಲ್ಲ ವರ್ಗದ ಜನರಿಗೆ ಸಾಮಾಜಿಕ ನ್ಯಾಯ ದೊರಕಿಸಿ, ಆ ಮೂಲಕ ದೇಶದ ಎಲ್ಲ ರಂಗಗಳ ಅಭಿವೃದ್ಧಿಗೆ ಕೊಡುಗೆ ನೀಡಿದ ಅಂಬೇಡ್ಕರರ ಜೀವನ, ಸಾಧನೆಗಳನ್ನು ಓದುವ ಮೂಲಕ ಪ್ರತಿಯೊಬ್ಬರು ಅರಿತು ಕೊಳ್ಳಬೇಕಾಗಿದೆ ಎಂದರು.

ಜೆಎಸ್ಎಸ್ ಮಹಿಳಾ ಕಾಲೇಜು ಪ್ರಾಂಶುಪಾಲ ಡಾ.ಎನ್.ಮಹದೇವಸ್ವಾಮಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಜಾತೀಯ ಅಸಮಾನತೆ ಕಿತ್ತೊಗೆದು ಸಾಮಾಜಿಕ ನ್ಯಾಯ ಹಾಗೂ ಸಮಾನತೆ ಮೂಲಕ ಜಗತ್ತಿಗೆ ಚಲನಶೀಲ ಸಮಾಜದ ಪರಿಕಲ್ಪನೆ ನೀಡಿದ ಡಾ.ಅಂಬೇಡ್ಕರ್ ಓದು ಕಾರ್ಯಕ್ರಮ ಅರ್ಥ ಪೂರ್ಣವಾಗಿದೆ. ದೇಶದ ಅಸಮಾನತೆ ಸಮಸ್ಯೆಗೆ ಪರಿಹಾರ ಕಂಡುಹಿಡಿದ ಅಂಬೇಡ್ಕರ್ ಅವರ ಬದುಕು, ಸಾಧನೆ ವಿಶ್ವಕ್ಕೆ ಮಾದರಿ ಎಂದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಉದಯ್‌ಕುಮಾರ್ ಪ್ರಾಸ್ತಾವಿಕ ಮಾತನಾಡಿ, ಅಂಬೇಡ್ಕರ್ ಕುರಿತು ವಿದ್ಯಾರ್ಥಿಗಳಿಗೆ ಪೂರ್ಣ ಮಾಹಿತಿಯ ಅರಿವು ಮೂಡಿಸಲು ಅಂಬೇಡ್ಕರ್ ಓದು ಕಾರ್ಯಕ್ರಮವನ್ನು ಪ್ರತಿವರ್ಷ ಏರ್ಪಡಿಸಲಾಗುತ್ತಿದೆ. ಕಾರ್ಯಕ್ರಮದ ಸದ್ಬಳಕೆ ಇಲಾಖೆಯ ಸದುದ್ದೇಶವಾಗಿದೆ ಎಂದರು.

ಇದೇ ವೇಳೆ ಡಾ.ಅಂಬೇಡ್ಕರ್ ಕುರಿತು ಅಂತರ್‌ ಕಾಲೇಜು ಮಟ್ಟದಲ್ಲಿ ಏರ್ಪಡಿಸಲಾಗಿದ್ದ ಪ್ರಬಂಧ ಸ್ಪರ್ಧೆ, ರಸಪ್ರಶ್ನೆ, ಆಶುಭಾಷಣ, ಕವನ ವಾಚನ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರ ಹಾಗೂ ಬಹುಮಾನ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಎ.ರಮೇಶ, ಜೆಎಸ್ಎಸ್ ಮಹಿಳಾ ಕಾಲೇಜಿನ ರಾಜ್ಯಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಡಾ. ಎ.ಆರ್.ಸುಷ್ಮಾ ಉಪಸ್ಥಿತರಿದ್ದರು.

PREV

Recommended Stories

ಡೆಂಘೀ ವಿರುದ್ಧ ಹೋರಾಟಕ್ಕೆ ಯುರೋಪ್ - ಭಾರತ ವಿಜ್ಞಾನಿಗಳ ಮೈತ್ರಿ
2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ