- ಮೆಗಾ ಶಾಪಿಂಗ್ ಎಕ್ಸ್‌ಪೋದಲ್ಲಿ ಆರೋಗ್ಯ, ದಂತ ತಪಾಸಣೆ - - -

ಕನ್ನಡಪ್ರಭ ವಾರ್ತೆ ದಾವಣಗೆರೆ

ಭಾವಸಾರ ವಿಜ್ಹನ್ ಇಂಡಿಯಾ ದಾವಣಗೆರೆ ವತಿಯಿಂದ ಭಾವಸಾರ ಕ್ಷತ್ರಿಯ ಬಿಸಿನೆಸ್ ಎಕ್ಸ್‌ಪೋ ಮಾ.21ರಿಂದ ಎರಡು ದಿನಗಳ ಕಾಲ ನಗರದ ಶಾಬನೂರು ರಸ್ತೆಯ ಬಾಪೂಜಿ ಬ್ಯಾಂಕ್ ಸಮುದಾಯ ಭವನದಲ್ಲಿ ನಡೆಯಲಿದೆ ಎಂದು ಸಂಸ್ಥೆ ಅಧ್ಯಕ್ಷ, ಹಿರಿಯ ಲೆಕ್ಕ ಪರಿಶೋಧಕ ಮಹೇಶ ಜಿ. ಶೇಂಡಗೆ ಹೇಳಿದರು.

ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾ.21 ಮತ್ತು 22ರಂದು ಬೆಳಗ್ಗೆ 10ರಿಂದ ರಾತ್ರಿ 9 ಗಂಟೆವರೆಗೆ ಮೆಗಾ ಶಾಪಿಂಗ್ ಎಕ್ಸ್‌ ಪೋ ನಡೆಯಲಿದೆ. ಫ್ಯಾಷನ್‌, ಲೈಫ್ ಸ್ಟೈಲ್‌, ಆಧುನಿಕ ವಾಹನಗಳು, ಫುಡ್-ಫನ್‌ ಮತ್ತು ಎಂಟರ್ಟೈನ್‌ಮೆಂಟ್ ಇರುತ್ತದೆ ಎಂದರು.

ಬಿಸಿನೆಸ್ ಎಕ್ಸ್‌ಪೋವನ್ನು ಭಾವಸಾರ ವಿಜ್ಹನ್‌ ಇಂಡಿಯಾದ ಸಂಸ್ಥಾಪಕ ನಾರಾಯಣ ರಾವ್ ನೆರವೇರಿಸಲಿದ್ದಾರೆ. ಸಂಸ್ಥೆಯ ರಾಷ್ಟ್ರೀಯ ಅಧ್ಯಕ್ಷ ಮನೀಶ್ ಉತ್ರಾವೆ ಸೇರಿದಂತೆ ಸಮಾಜದ ಸಾಧಕರು, ಉದ್ಯಮಿಗಳು, ವಿವಿಧ ಕ್ಷೇತ್ರದಳಲ್ಲಿ ಗಣನೀಯ ಸೇವೆ ಸಲ್ಲಿಸಿದವರು ಪಾಲ್ಗೊಳ್ಳುವರು ಎಂದು ಹೇಳಿದರು.


ಇಡೀ ದೇಶದಲ್ಲಿ ಕೇವಲ 1 ಕೋಟಿ ಜನಸಂಖ್ಯೆ ಹೊಂದಿರುವ ಭಾವಸಾರ ಕ್ಷತ್ರಿಯ ಬಾಂಧವರು ಕೇವಲ ಟೈಲರಿಂಗ್ ವೃತ್ತಿಗೆ ಮಾತ್ರವೇ ಸೀಮಿತವಾಗಿಲ್ಲ. ವೈದ್ಯಕೀಯ, ಶಿಕ್ಷಣ, ಎಂಜಿನಿಯರಿಂಗ್, ವಿಜ್ಞಾನ ತಂತ್ರಜ್ಞಾನ, ಕೇಂದ್ರ- ರಾಜ್ಯ ಸರ್ಕಾರಿ ಸೇವೆ, ಕೈಗಾರಿಕೆ ಹೀಗೆ ನಾನಾ ಕ್ಷೇತ್ರಗಳಲ್ಲಿ ಸಾಧನೆ ಮಾಡುತ್ತಿದ್ದಾರೆ. ಎಲ್ಲರನ್ನೂ ಸಂಘಟಿಸುವ ಸದುದ್ದೇಶದಿಂದ ಈ ಮೆಗಾ ಶಾಪಿಂಗ್ ಎಕ್ಸ್‌ಪೋ ಆಯೋಜಿಸಲಾಗುತ್ತಿದೆ ಎಂದು ತಿಳಿಸಿದರು.

ಎಕ್ಸ್‌ಪೋದಲ್ಲಿ ಭಾವಸಾರ ಕ್ಷೇತ್ರ ಬಾಂಧವರು ತಮ್ಮ ವೃತ್ತಿ ಪ್ರಸ್ತುತಪಡಿಸಬೇಕು. ಭಾವಸಾರ ವಿಜ್ಹನ್ ಇಂಡಿಯಾ 25 ವರ್ಷದತ್ತ ಸಾಗುತ್ತಿದೆ. ಅಲ್ಲದೇ, ಸಂಸ್ಥೆ ನೇತೃತ್ವದಲ್ಲಿ ಉಚಿತ ಕಣ್ಣಿನ ತಪಾಸಣೆ, ಆರೋಗ್ಯ ಶಿಬಿರ, ಶಾಲಾ ಮಕ್ಕಳಿಗೆ ಊಟ, ಸಮವಸ್ತ್ರ, ಪುಸ್ತರ ಸೇರಿದಂತೆ ಅನೇಕ ಸಮಾಜಮುಖಿ, ಮಾನವೀಯ ಕಾರ್ಯಗಳನ್ನೂ ಮಾಡಿಕೊಂಡು ಬರುತ್ತಿದೆ. ಅಂದು ಸಹ ಎಕ್ಸ್‌ಪೋದಲ್ಲಿ ಉಚಿತ ಆರೋಗ್ಯ ತಪಾಸಣೆ ಶಿಬಿರವಿದೆ. ಉಚಿತವಾಗಿ ಟಿಸಿಸಿ, ಎನ್‌ಸಿಡಿ, ರಕ್ತ, ದಂತ ತಪಾಸಣೆ ಮಾಡಿ, ಚಿಕಿತ್ಸೆ ನೆರವೇರಿಸಲಾಗುವುದು ಎಂದು ಮಾಹಿತಿ ನೀಡಿದರು.

ಮೇಳದಲ್ಲಿ ಒಟ್ಟು 60 ಮಳಿಗೆಗಳನ್ನು ಸ್ಥಾಪಿಸಲಾಗಿದೆ. ಮಾ.21ರಂದು ಸಂಜೆ 6ರಿಂದ 9 ಗಂಟೆವರೆಗೆ ಸಂಗೀತ ಸಂಜೆ ಕಾರ್ಯಕ್ರಮವಿದೆ. ಅನೇಕ ಸಂಘ-ಸಂಸ್ಥೆಗಳು, ಉದ್ದಿಮೆಗಳು, ಮಹಿಳಾ ಉದ್ಯಮಿಗಳು ಭಾಗವಹಿಸುವರು. ಆಸಕ್ತರು ಹೆಚ್ಚಿನ ಮಾಹಿತಿಗೆ ಮೊ. 94483-39383, 94481-12523, 94489-23946 ಇಲ್ಲಿಗೆ ಸಂಪರ್ಕಿಸುವಂತೆ ಮಹೇಶ ಶೇಂಡಗೆ ಮನವಿ ಮಾಡಿದರು.

ಪ್ರಾಜೆಕ್ಟ್ ಚೇರ್ಮನ್‌ ವಾಗೀಶ ಗುಜ್ಜಾರ್, ಕಾರ್ಯದರ್ಶಿ ರಮೇಶ ಬಾಬು ಗುಜ್ಜಾರ್‌, ಅರುಣ್ ಗುಜ್ಜಾರ್, ದಯಾನಂದ ಮಹೇಂದ್ರಕರ್, ಭರತ್ ವಾದೋನೆ ಇತರರು ಇದ್ದರು.

- - -

-13ಕೆಡಿವಿಜಿ4:

ದಾವಣಗೆರೆಯಲ್ಲಿ ಶುಕ್ರವಾರ ಭಾವಸಾರ ವಿಜ್ಹನ್‌ ಇಂಡಿಯಾದ ಮುಖಂಡ, ಹಿರಿಯ ಲೆಕ್ಕ ಪರಿಶೋಧಕ ಮಹೇಶ ಜಿ.ಶೇಂಡಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.