ಪಾಕ್‌ ಸೈನಿಕರ ಶವ ಸಂಸ್ಕಾರ ನಾವೇ ಮಾಡಿದ್ದು: ಮಾಜಿ ಸೈನಿಕ ಪ್ರಸನ್ನಗೌಡ

KannadaprabhaNewsNetwork | Updated : Jul 27 2024, 12:48 AM IST

ಪ್ರತಿ ಭಾರತೀಯ ಸೈನಿಕರ ಪಾರ್ಥಿವ ಶರೀರವನ್ನು ಅವರ ಕುಟುಂಬಕ್ಕೆ ತಲುಪಿಸಿ ಅವರ ನೋವಿನಲ್ಲಿ ಕೋಟ್ಯಂತರ ಜನ ಭಾಗಿಯಾಗಿದ್ದೆವು.

ಹೂವಿನಹಡಗಲಿ: ಭಾರತ ಮತ್ತು ಪಾಕ್‌ ನಡುವೆ ನಡೆದ ಕಾರ್ಗಿಲ್‌ ಯುದ್ಧವು ವಿಶ್ವ ಯುನಿಕ್‌ ವಾರ್‌ ಆಗಿತ್ತು. ಭಾರತೀಯ ಸೈನಿಕ ದಾಳಿಗೆ ಸತ್ತು ಬಿದ್ದ ಪಾಕ್‌ ಸೈನಿಕರ ಶವಗಳ ಸಂಸ್ಕಾರ ಕೂಡ ಮಾಡಲಿಲ್ಲ. ನಾವೇ ಶವಸಂಸ್ಕಾರ ಮಾಡಿ ಮಾನವೀಯತೆ ಮೆರೆದಿದ್ದೇವೆ ಎಂದು ಮಾಜಿ ಸೈನಿಕ ಪ್ರಸನ್ನಗೌಡ ಕಾರ್ಗಿಲ್‌ ಕಥಾನಕ ಬಿಚ್ಚಿಟ್ಟರು.

ಪಟ್ಟಣದ ಶಿವ ಶಾಂತವೀರ ಸಮುದಾಯ ಭವನದಲ್ಲಿ ಬಿಜೆಪಿ ಯುವ ಮೋರ್ಚಾ ಹಮ್ಮಿಕೊಂಡಿದ್ದ ಕಾರ್ಗಿಲ್‌ ವಿಜಯ ದಿವಸ್‌ ಕಾರ್ಯಕ್ರಮದಲ್ಲಿ ನೆನಪುಗಳನ್ನು ಬಿಚ್ಚಿಟ್ಟ ಅವರು, ಕಾರ್ಗಿಲ್‌ ಯುದ್ಧದಲ್ಲಿ 527 ಭಾರತೀಯ ಸೈನಿಕರು ಹುತ್ಮಾತರಾಗಿದ್ದರು. ಆದರೆ ಪಾಕ್‌ ಸೈನಿಕರ ಸಾವಿನ ಸಂಖ್ಯೆ ಸಾವಿರ ಗಡಿ ದಾಟಿತ್ತು. ಪ್ರತಿ ಭಾರತೀಯ ಸೈನಿಕರ ಪಾರ್ಥಿವ ಶರೀರವನ್ನು ಅವರ ಕುಟುಂಬಕ್ಕೆ ತಲುಪಿಸಿ ಅವರ ನೋವಿನಲ್ಲಿ ಕೋಟ್ಯಂತರ ಜನ ಭಾಗಿಯಾಗಿದ್ದೆವು. ಆದರೆ ಗಡಿಯಲ್ಲಿ ಚೆಲ್ಲಾಪಿಲ್ಲಿಯಾಗಿದ್ದ ಪಾಕ್‌ ಸೈನಿಕರ ಶವಗಳನ್ನು ಅವರ ಕುಟುಂಬಸ್ಥರಿಗೆ ತಲುಪಿಸಲಿಲ್ಲ. ನಾವೇ ಅವುಗಳ ಅಂತ್ಯಸಂಸ್ಕಾರ ಮಾಡಿದ್ದೆವು ಎಂದರು.

ಪಾಕ್‌ ಸೈನ್ಯದ ಮುಖ್ಯಸ್ಥ ಪರ್ವೇಜ್‌ ಮುಷರಫ್ ಭಾರತದ ಮೇಲಿನ ಸೇಡು ತೀರಿಸಿಕೊಳ್ಳಲು 5 ಸಾವಿರ ಸೈನಿಕರಿಗೆ ಭಯೋತ್ಪಾದಕರ ವೇಷ ಧರಿಸಿ ಭಾರತದ ಗಡಿಯೊಳಗೆ ನುಗ್ಗಿಸಿದ್ದ. ಪಾಕಿಸ್ತಾನದ ಈ ಮೋಸದ ಯುದ್ಧಕ್ಕೆ ಜಗ್ಗದ ಭಾರತೀಯ ಸೈನಿಕರು ಪಾಕ್‌ನ್ನು ಬಗ್ಗು ಬಡಿದು ವಿಜಯ ಸಾಧಿಸಿದೆವು ಎಂದು ಹೇಳಿದರು.

ಕಾರಟಗಿ ಶರಣಗೌಡ ಪಾಟೀಲ್‌ ಮಾತನಾಡಿ, ಪಾಕಿಸ್ತಾನದ ಸೈನಿಕರನ್ನು ಸದೆ ಬಡಿಯಲು ಭಾರತೀಯ ಸೈನಿಕರು ಕತ್ತಲಲ್ಲಿ ಕಾರ್ಯಾಚರಣೆ ಮಾಡಿದ್ದರು. ಭಾರತೀಯ ಸೈನಿಕನೊಬ್ಬ ಟೈಗರ್‌ ಹಿಲ್‌ನಲ್ಲಿ 64 ಪಾಕ್‌ ಸೈನಿಕರನ್ನು ಹೊಡೆದುರುಳಿಸಿದ್ದಾರೆ. ಇದು ಭಾರತ ಸೈನಿಕರ ದೇಶಭಕ್ತಿಯ ಜ್ವಾಲೆಯಾಗಿತ್ತು. ಎಲ್ಲರಿಗೂ ಸ್ಫೂರ್ತಿಯಾಗಿತ್ತು ಎಂದರು.

ಜಿಲ್ಲಾ ಬಿಜೆಪಿ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ರಾಘವೇಂದ್ರ ಮಾತನಾಡಿ, ದೇಶದ ಗಡಿಯಲ್ಲಿ 2 ತಿಂಗಳ ಕಾಲ ನಡೆದ ಕಾರ್ಗಿಲ್‌ ಕದನದ ಸಂದರ್ಭದಲ್ಲಿ ಪ್ರಧಾನಿಯಾಗಿದ್ದ ಅಟಲ್‌ ಬಿಹಾರಿ ವಾಜಪೇಯಿ, ಕೇಂದ್ರ ಗೃಹಮಂತ್ರಿಯಾಗಿದ್ದ ಎಲ್‌.ಕೆ. ಅಡ್ವಾನಿ, ಪಾಕ್‌ ಕುತಂತ್ರಕ್ಕೆ ಬಗ್ಗದೇ ಸೈನಿಕರಿಗೆ ಸ್ಫೂರ್ತಿ ನೀಡಿದ ಫಲವಾಗಿ ಕಾರ್ಗಿಲ್‌ ಯುದ್ಧದಲ್ಲಿ ಜಯ ಗಳಿಸಿದ್ದೇವೆ. ನಂತರದಲ್ಲಿ ಸಾಕಷ್ಟು ಸರ್ಜಿಕಲ್‌ ಯುದ್ಧಗಳನ್ನು ಮಾಡಿ ಶತ್ರುಗಳನ್ನು ಸದೆ ಬಡಿಯಲಾಗಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಯುವ ಮೋರ್ಚಾ ಜಿಲ್ಲಾಧ್ಯಕ್ಷ ಕಿಚಿಡಿ ಕೊಟ್ರೇಶ ಮಾತನಾಡಿದರು.

ಮಾಜಿ ಶಾಸಕ ನಂದಿಹಳ್ಳಿ ಹಾಲಪ್ಪ, ಬಿಜೆಪಿ ಮಂಡಲದ ಅಧ್ಯಕ್ಷ ಹಣ್ಣಿ ಶಶಿಧರ, ಎಚ್‌.ಪೂಜೆಪ್ಪ, ಓದೋ ಗಂಗಪ್ಪ, ಈಟಿ ಲಿಂಗರಾಜ, ಸಿರಾಜ್‌ ಬಾವಿಹಳ್ಳಿ, ಪರಶುರಾಮ, ಬೀರಬ್ಬಿ ಬಸವರಾಜ, ಲಕ್ಷ್ಣಣ ನಾಯ್ಕ, ಪುನೀತ್‌ ದೊಡ್ಮನಿ, ವಿನೋದ ಜಾಡರ್‌, ದಿವಾಕರ, ಭಾಗ್ಯಮ್ಮ, ಲಕ್ಷ್ಮೀಬಾಯಿ, ಮೀರಾಬಾಯಿ, ಎ.ಜೆ. ವೀರೇಶ, ಶಿವಪುರ ಸುರೇಶ, ಮಾಜಿ ಸೈನಿಕರ ಸಂಘದ ಅಧ್ಯಕ್ಷ ಅಶೋಕ, ಅಜಯ್‌, ಉಮಾಕಾಂತ, ಶೇಖರಗೌಡ ಪಾಟೀಲ್‌, ಜಗನ್ನಾಥ, ಕೊಟ್ರೇಶ, ಮಲ್ಲಪ್ಪ, ಮಹಾಬಲೇಶ ಕರಿಶೆಟ್ಟಿ ಇದ್ದರು.

ಇದೇ ಸಂದರ್ಭದಲ್ಲಿ ತಾಲೂಕಿನ ಎಲ್ಲ ಮಾಜಿ ಸೈನಿಕರನ್ನು ಸನ್ಮಾನಿಸಿ ಗೌರವಿಸಲಾಯಿತು.