ಕುದುರೆಗುಂಡಿಯಲ್ಲಿ 2 ದಿನಗಳ ರಾಜ್ಯ ಮಟ್ಟದ ಹೆಬ್ಬಾರ್ ಕ್ರಿಕೆಟ್ ಲೀಗ್ ಶ್ರೀಪಾದ ಕಪ್ ಪಂದ್ಯಾವಳಿ ಉದ್ಘಾಟನೆ
ಕ್ರಿಕೆಟ್ ಇಂದು ಕೇವಲ ಆಟವಾಗಿ ಉಳಿಯದೆ ಯುವಕರಲ್ಲಿ ಪರಸ್ಪರ ಬಾಂಧವ್ಯ ಬೆಸೆಯುವ ಕ್ರೀಡೆಯಾಗಿದೆ ಎಂದು ಕೊಪ್ಪ ಯಡಗೆರೆ ಸೌಹಾರ್ದ ಕ್ರೆಡಿಟ್ ಕೋ ಆಪರೇಟೀವ್ ನ ಅಧ್ಯಕ್ಷ ಯಡಗೆರೆ ಸುಬ್ರಮಣ್ಯ ಅಭಿಮತ ವ್ಯಕ್ತಪಡಿಸಿದರು.
ಶನಿವಾರ ಕುದುರೆಗುಂಡಿ ಸರ್ಕಾರಿ ಪ್ರೌಢ ಶಾಲೆ ಆಟದ ಮೈದಾನದಲ್ಲಿ ಶೃಂಗೇರಿ ಶಿಷ್ಯ ಮಲೆನಾಡು ಹೆಬ್ಬಾರ ಬ್ರಾಹ್ಮಣ ಸಭಾದ ಎನ್.ಆರ್.ಪುರ ಘಟಕ ಹಾಗೂ ಯುವ ಹೆಬ್ಬಾರ ಬಳಗದ ಸಂಯುಕ್ತ ಆಶ್ರಯದಲ್ಲಿ ನಡೆದ 5 ನೇ ವರ್ಷದ ಎರಡು ದಿನಗಳ ಹೆಬ್ಬಾರ್ ಕ್ರಿಕೆಟ್ ಲೀಗ್ ಶ್ರೀಪಾದ ಕಪ್ ಪಂದ್ಯಾವಳಿ ಉದ್ಘಾಟಿಸಿ ಮಾತನಾಡಿದರು.ಹೆಬ್ಬಾರ ಬ್ರಾಹ್ಮಣ ಮಹಾ ಸಭಾದ ಎನ್.ಆರ್.ಪುರ ಘಟಕದವರು 5 ವರ್ಷದಿಂದಲೂ ನಿರಂತರವಾಗಿ ರಾಜ್ಯ ಮಟ್ಟದ ಕ್ರಿಕೆಟ್ ಪಂದ್ಯಾವಳಿ ನಡೆಸಿಕೊಂಡು ಬರುತ್ತಿದ್ದಾರೆ.ಮುಂದಿನ ವರ್ಷಗಳಲ್ಲೂ ಯುವಕರು ಇದೇ ರೀತಿ ಒಗ್ಗಟ್ಟು ಪ್ರದರ್ಶನ ಮಾಡಬೇಕು ಎಂದು ಕರೆ ನೀಡಿದರು.
ಮುಖ್ಯ ಅತಿಥಿಯಾಗಿದ್ದ ಶಿವಮೊಗ್ಗ ಶಾರದಾ ವಿವಿಧೋದ್ದೇಶ ಸೌಹಾರ್ದ ಸಹಕಾರ ಸಂಘದ ವೃತ್ತಿ ಪರ ನಿರ್ದೇಶಕ ಕೆ.ಆರ್.ಶಿವಕುಮಾರ್ ಮಾತನಾಡಿ, ಯುವಕರು ಕ್ರೀಡಾ ಕೂಟದ ಜೊತೆಗೆ ಹೆಬ್ಬಾರ ಸಮಾಜದ ಮುಖ್ಯ ಕಾರ್ಯಕ್ರಮ ವಾದ ಗುರುದರ್ಶನ, ವಿವಿಧ ಧಾರ್ಮಿಕ ಕಾರ್ಯಕ್ರಮಗಳಲ್ಲೂ ಭಾಗವಹಿಸಬೇಕು. ಶೃಂಗೇರಿ ಶಿಷ್ಯ ಹೆಬ್ಬಾರ ಮಲೆನಾಡು ಹೆಬ್ಬಾರ ಬ್ರಾಹ್ಮಣ ಸಭಾದ ಶಾರದಾ ಸೊಸೈಟಿ ಕೇಂದ್ರ ಕಚೇರಿ ಶಿವಮೊಗದಲ್ಲಿದೆ. ಹೊಸನಗರ, ರಿಪ್ಪನ್ ಪೇಟೆ, ಶೃಂಗೇರಿ, ಕಳಸದಲ್ಲಿ ಶಾಖಾ ಕಚೇರಿಗಳಿದ್ದು ನಮ್ಮ ಸಂಘದಲ್ಲೂ ಕನಿಷ್ಠ ವ್ಯವಹಾರ ಮಾಡಬೇಕು ಎಂದು ಕರೆ ನೀಡಿದರು.
ಸಭೆಯ ಅಧ್ಯಕ್ಷತೆ ಶೃಂಗೇರಿ ಶಿಷ್ಯ ಮಲೆನಾಡು ಹೆಬ್ಬಾರ ಬ್ರಾಹ್ಮಣ ಸಭಾದ ಎನ್.ಆರ್.ಪುರ ಘಟಕದ ಅಧ್ಯಕ್ಷ ಎ.ವಿ.ಪ್ರಶಾಂತ್ ವಹಿಸಿದ್ದರು.ಮುಖ್ಯ ಅತಿಥಿಗಳಾಗಿ ಹೆಬ್ಬಾರ ಬ್ರಾಹ್ಮಣ ಮಹಾ ಸಭಾದ ಕೇಂದ್ರೀಯ ಆಡಳಿತ ಮಂಡಳಿ ಪ್ರಧಾನ ಕಾರ್ಯದರ್ಶಿ ಚರಣ ಹೆಬ್ಬಾರ, ಎನ್.ಆರ್.ಪುರ ಘಟಕದ ಗೌರವಾಧ್ಯಕ್ಷ ಎ.ಎಸ್.ವೆಂಕಟರಮಣ, ಕಾರ್ಯದರ್ಶಿ ಕೆ.ವಿ.ಪ್ರಭಾಕರ, ಎನ್.ಆರ್.ಪುರ ಯುವ ಬಳಗದ ಅಧ್ಯಕ್ಷ ವೈ.ಎಂ.ಮಧು, ಯುವ ಬಳಗದ ಕಾರ್ಯದರ್ಶಿ ಕೆ.ಎಂ.ವಿಕಾಸ್, ಎ.ಎಸ್.ವೆಂಕಟರಮಣ, ಚರಣ ಹೆಬ್ಬಾರ ಇದ್ದರು.