ಕನ್ನಡಪ್ರಭ ವಾರ್ತೆ, ತುಮಕೂರುನಗರದ ಸರ್ಕಾರಿ ಜೂನಿಯರ್ ಕಾಲೇಜು ಮೈದಾನದಲ್ಲಿ ಡಾ. ರಾಜ್ ಸಾಂಸ್ಕೃತಿಕ ಹಾಗೂ ಕ್ರೀಡಾ ಸಂಘ ಮತ್ತು ಚಕ್ರವರ್ತಿ ಸ್ಪೋರ್ಟ್ಸ್ ಅಸೋಸಿಯೇಷನ್ ವತಿಯಿಂದ ನಾಲ್ಕು ದಿನಗಳ ಕಾಲ ಖ್ಯಾತ ವೈದ್ಯ ದಿ. ಡಾ. ಸಿ. ಜಯರಾಮರಾವ್ ಸ್ಮರಣಾರ್ಥ ಹಮ್ಮಿಕೊಂಡಿದ್ದ ಡಾ.ಪುನೀತ್ ರಾಜ್ ಕಪ್ ರಾಜ್ಯಮಟ್ಚದ ಹೊನಲು ಬೆಳಕಿನ ಕ್ರಿಕೆಟ್ ಪಂದ್ಯಾವಳಿಯಲ್ಲಿ ಬೆಂಗಳೂರಿನ ಜಯಕರ್ನಾಟಕ ತಂಡ ಚಾಂಪಿಯನ್ ಆಗಿ ಹೊರ ಹೊಮ್ಮಿತು. ಕಳೆದ 4 ದಿನಗಳಿಂದ ನಡೆದ ಹೊನಲು ಬೆಳಕಿನ ರಾಜ್ಯಮಟ್ಟದ ಕ್ರಿಕೆಟ್ ಪಂದ್ಯಾವಳಿಯಲ್ಲಿ ರಾಜ್ಯದ ವಿವಿಧೆಡೆಗಳಿಂದ 16 ತಂಡಗಳು ಭಾಗವಹಿಸಿದ್ದವು. ಅಂತಿಮವಾಗಿ ಫೈನಲ್ ಪಂದ್ಯದಲ್ಲಿ ಬೆಂಗಳೂರು ಜಯಕರ್ನಾಟಕ ಮತ್ತು ಜಾನ್ಸನ್ ಜೇನುಗೂಡು ಕುಂದಾಪುರ ತಂಡಗಳ ನಡುವೆ ಹಣಾಹಣಿ ನಡೆದು ಕೊನೆಗೆ ಬೆಂಗಳೂರಿನ ಜಯಕರ್ನಾಟಕ ತಂಡ ಉತ್ತಮ ಪ್ರದರ್ಶನ ನೀಡಿ ಗೆಲುವು ಸಾಧಿಸಿತು. ಜಾನ್ಸನ್ ಜೇನುಗೂಡು ಕುಂದಾಪುರ ತಂಡ ರನ್ನರ್ ಅಪ್ ಸ್ಥಾನ ಪಡೆದುಕೊಂಡಿತು.4 ದಿನಗಳ ಕಾಲ ನಡೆದ ಕ್ರಿಕೆಟ್ ಪಂದ್ಯಾವಳಿಯಲ್ಲಿ ಗೆಲುವು ಸಾಧಿಸಿ ಪ್ರಥಮ ಸ್ಥಾನ ಪಡೆದ ಬೆಂಗಳೂರು ಜಯಕರ್ನಾಟಕ ತಂಡಕ್ಕೆ ಪಿ.ಎನ್.ಕೃಷ್ಣಮೂರ್ತಿ ರವರು ನೀಡಿದ 5 ಲಕ್ಷ ರು. ನಗದು ಬಹುಮಾನ ಹಾಗೂ ಟ್ರೋಫಿ ಹಾಗೂ ರನ್ನರ್ ಅಪ್ ಜಾನ್ಸನ್ ಜೇನುಗೂಡು ಕುಂದಾಪುರ ತಂಡಕ್ಕೆ 2.50 ಲಕ್ಷ ರು. ನಗದು ಬಹುಮಾನ ಹಾಗೂ ಟ್ರೋಫಿ ನೀಡಲಾಯಿತು. ಕ್ರಿಕೆಟ್ ಟೂರ್ನಿಯಲ್ಲಿ ಗೆಲುವು ಸಾಧಿಸಿದ ತಂಡಗಳಿಗೆ ಬಹುಮಾನ ವಿತರಿಸಿ ಮಾತನಾಡಿದ ಶಾಸಕ ಜ್ಯೋತಿಗಣೇಶ್, ಡಾ. ರಾಜ್ ಸಾಂಸ್ಕೃತಿಕ ಹಾಗೂ ಕ್ರೀಡಾ ಸಂಘ ಮತ್ತು ಚಕ್ರವರ್ತಿ ಸ್ಪೋರ್ಟ್ಸ್ಅ ಸೋಸಿಯೇಷನ್‌ನ ವತಿಯಿಂದ ಕಳೆದ ೪ ದಿನಗಳಿಂದ ನಡೆದ ರಾಜ್ಯಮಟ್ಟದ ಕ್ರಿಕೆಟ್ ಪಂದ್ಯಾವಳಿಗೆ ನಗರದ ನಾಗರಿಕರು ಉತ್ತಮ ಸಹಕಾರ ನೀಡಿದ್ದಾರೆ. ಇಂತಹ ಕ್ರೀಡೆಗಳಿಗೆ ಸರ್ಕಾರಿ ಜೂನಿಯರ್ ಕಾಲೇಜು ಮೈದಾನ ಹೆಚ್ಚು ಹೆಚ್ಚು ಬಳಕೆಯಾಗಬೇಕು ಎಂದರು.ಮುಖಂಡರಾದ ಪಿ.ಎನ್. ಕೃಷ್ಣಮೂರ್ತಿ ಮಾತನಾಡಿ, ಯಾರೇ ಶಾಸಕರಾದರೂ ಜಿಲ್ಲೆಯಲ್ಲಿ ಕ್ರೀಡೆಗೆ ಹೆಚ್ಚು ಪ್ರಾಶಸ್ತ್ಯ ನೀಡಬೇಕು. ಮೈದಾನಗಳನ್ನು ನವೀಕರಣ ಮಾಡಿಸುವ ಮೂಲಕ ಕ್ರೀಡಾಪಟುಗಳಿಗೆ ಉತ್ತೇಜನ ನೀಡಬೇಕು ಎಂದರು.ಡಾ. ರಾಜ್ ಸಾಂಸ್ಕೃತಿಕ ಹಾಗೂ ಕ್ರೀಡಾ ಸಂಘ ಮತ್ತು ಚಕ್ರವರ್ತಿ ಸ್ಪೋಟ್ಸ್ ಕ್ಲಬ್ ಗೌರವಾಧ್ಯಕ್ಷ ಎಚ್.ಎನ್ ದೀಪಕ್ ಮಾತನಾಡಿ, ಸಹಕಾರ ನೀಡಿದ ತುಮಕೂರು ಜನತೆ, ರಾಜಕಾರಣಿಗಳು, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳಿಗೆ ಧನ್ಯವಾದ ತಿಳಿಸುತ್ತೇನೆ ಎಂದರು. ಈ ಸಂದರ್ಭದಲ್ಲಿ ಮುಖಂಡರಾದ ಪಿ.ಎನ್. ಕೃಷ್ಣಮೂರ್ತಿ, ಕೆಸಿಎ ತುಮಕೂರು ವಲಯದ ಅಧ್ಯಕ್ಷ ಸಿ.ಆರ್. ಹರೀಶ್, ಡಾ. ರಾಜ್ ಸಾಂಸ್ಕೃತಿಕ ಹಾಗೂ ಕ್ರೀಡಾ ಸಂಘದ ಅಧ್ಯಕ್ಷ ಶಂಕರ್, ಚಕ್ರವರ್ತಿ ಸ್ಪೋರ್ಟ್ಸ್ ಸ ಕ್ಲಬ್ ಅಧ್ಯಕ್ಷ ಪ್ರಕಾಶ್, ಕಾರ್ಯದರ್ಶಿ ರಂಜನ್, ಕೆ. ಅರವಿಂದ್, ಹಿರಿಯ ಆಟಗಾರರಾದ ವೆಂಕಟೇಶ್, ಗೋಪಾಲ್ ಮತ್ತಿತರರು ಭಾಗವಹಿಸಿದ್ದರು.