ಕದಂಬ ಕನ್ನಡ ಜಿಲ್ಲೆಗಾಗಿ ಮೊಳಗಿದ ಕೂಗು, ಶಿರಸಿಯಲ್ಲಿ ಬೃಹತ್‌ ಪ್ರತಿಭಟನಾ ಮೆರವಣಿಗೆ

KannadaprabhaNewsNetwork |  
Published : Nov 20, 2024, 12:35 AM IST
೧೯ಎಸ್.ಆರ್.ಎಸ್೨ಪೊಟೋ೧ (ಪ್ರತಿಭಟನಾ ಮೆರವಣಿಗೆ)೧೯ಎಸ್.ಆರ್.ಎಸ್೨ಪೊಟೋ೨ (ಸಹಾಯಕ ಆಯುಕ್ತರ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಯಿತು.)೧೯ಎಸ್.ಆರ್.ಎಸ್೨ಪೊಟೋ೩ (ನಗರದ ಬಸ್ ನಿಲ್ದಾಣ ವೃತ್ತದಲ್ಲಿ ಪ್ರತಿಭಟನೆ ನಡೆಸಲಾಯಿತು.) | Kannada Prabha

ಸಾರಾಂಶ

ಕದಂಬ ಕನ್ನಡ ಜಿಲ್ಲೆ ಆಗುವವರೆಗೆ ಹೋರಾಟ ನಡೆಯುತ್ತಲೇ ಇರುತ್ತದೆ ಅನಂತಮೂರ್ತಿ ಹೆಗಡೆ ತಿಳಿಸಿದರು.

ಶಿರಸಿ: ಕದಂಬ ಕನ್ನಡ ಜಿಲ್ಲೆ ರಚನೆಗೆ ಆಗ್ರಹಿಸಿ ಮಂಗಳವಾರ ನಗರದ ಮಾರಿಕಾಂಬಾ ದೇವಾಲಯದಿಂದ ಸಹಾಯಕ ಆಯುಕ್ತರ ಕಚೇರಿಯವರೆಗೆ ಬೃಹತ್ ಪ್ರತಿಭಟನಾ ಮೆರವಣಿಗೆಯಲ್ಲಿ ನೂರಾರು ಸಂಖ್ಯೆಯ ಸಾರ್ವಜನಿಕರು ಪಾಲ್ಗೊಂಡು ಶಿರಸಿ ಪ್ರತ್ಯೇಕ ಜಿಲ್ಲೆಗೆ ಒತ್ತಾಯಿಸಿದರು.ರಾಜ್ಯ ಪ್ರಸಿದ್ಧ ಶಿರಸಿಯ ಮಾರಿಕಾಂಬಾ ದೇವಾಲಯದಲ್ಲಿ ಚಂಡಿಕಾ ಯಾಗ ನೆರವೇರಿಸಿದ ನಂತರ ದೇವಾಲದಿಂದ ಪ್ರತಿಭಟನಾ ಜಾಥಾದಲ್ಲಿ ಪಾಲ್ಗೊಂಡ ಸಾರ್ವಜನಿಕರು, ರಸ್ತೆ ಮಧ್ಯೆ ಜೀವ ಬಿಡುವುದು ಸಾಕು, ಆಸ್ಪತ್ರೆ ಹೋರಾಟಕ್ಕೆ ನಿಮ್ಮೆಲ್ಲರ ಬೆಂಬಲ ಬೇಕು. ಕದಂಬ ಕನ್ನಡ ಜಿಲ್ಲೆ ಮಾಡಿ ಜಿಲ್ಲೆಗೆ ಮೆಡಿಕಲ್ ಕಾಲೇಜು ಹಾಗೂ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಿಸಿ, ಕದಂಬ ಕನ್ನಡ ಜಿಲ್ಲೆಗಾಗಿ ನಮ್ಮ ಹೋರಾಟ ಎಂದು ಘೋಷಣೆ ಕೂಗಿದರು.ಮೆರವಣಿಗೆಯ ನೇತೃತ್ವ ವಹಿಸಿದ್ದ ಕದಂಬ ಕನ್ನಡ ಜಿಲ್ಲಾ ರಚನೆ ಮತ್ತು ಹಿತರಕ್ಷಣಾ ಟ್ರಸ್ಟ್ ಅಧ್ಯಕ್ಷ ಅನಂತಮೂರ್ತಿ ಹೆಗಡೆ ಮಾತನಾಡಿ, ಪ್ರತ್ಯೇಕ ಜಿಲ್ಲೆ ಹೋರಾಟ ಇಲ್ಲಿಯವರೆಗೆ ಒಂದು ಲೆಕ್ಕ, ಇನ್ನು ಮುಂದಿನ ಹೋರಾಟ ಬೇರೆನೇ ಲೆಕ್ಕ. ಸಾಕ್ಷಾತ್ ಮಾರಿಕಾಂಬೆಯೇ ನಮಗೆ ಶುಭಾಶೀರ್ವಾದ ಮಾಡಿ ಹೋರಾಟಕ್ಕೆ ಆಶೀರ್ವದಿಸಿದ್ದಾಳೆ. ದೈವಬಲದೊಂದಿಗೆ ಜನಬಲ ಕೂಡಿದರೆ ಕದಂಬ ಕನ್ನಡ ಜಿಲ್ಲೆ ಹೋರಾಟ ಯಶಸ್ಸಾಗುವುದರಲ್ಲಿ ಸಂಶಯವಿಲ್ಲ ಎಂದರು.

ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗಾಗಿ ಘಟ್ಟದ ಮೇಲಿನ ಎಲ್ಲ ತಾಲೂಕುಗಳನ್ನು ಒಳಗೊಂಡು ಕದಂಬ ಕನ್ನಡ ಜಿಲ್ಲೆ ಆಗಲೇಬೇಕಿದೆ. ಕದಂಬರು ಆಳಿದ ನೆಲ ಇದು. ತಾಯಿ ಕನ್ನಡಾಂಬೆಯ ಪುಣ್ಯಭೂಮಿಯೂ ಹೌದು. ಹಾಗಾಗಿ ಈ ಪ್ರತ್ಯೇಕ ಜಿಲ್ಲೆಗೆ ಕದಂಬ ಕನ್ನಡ ಜಿಲ್ಲೆ ಎಂದು ಘೋಷಿಸಬೇಕು ಎಂಬುದು ಎಲ್ಲ ತಾಲೂಕಿನ ಜನರ ಆಗ್ರಹವಾಗಿದೆ. ಕದಂಬ ಕನ್ನಡ ಜಿಲ್ಲೆ ಆಗುವವರೆಗೆ ಹೋರಾಟ ನಡೆಯುತ್ತಲೇ ಇರುತ್ತದೆ ಎಂದರು.

ನಗರಸಭೆ ಮಾಜಿ ಅಧ್ಯಕ್ಷ ಗಣಪತಿ ನಾಯ್ಕ ಮಾತನಾಡಿ, ನಮ್ಮ ದೈನಂದಿನ ಕೆಲಸಕ್ಕೆ ಜಿಲ್ಲಾ ಕೇಂದ್ರ ಕಾರವಾರಕ್ಕೆ ತೆರಳುವುದು ಅನಿವಾರ್ಯ. ಎಲ್ಲರಿಗಿಂತ ಮೊದಲಾಗಿ ಬಡವರಿಗೆ ಪ್ರತ್ಯೇಕ ಜಿಲ್ಲೆಯಾಗುವುದು ಅನಿವಾರ್ಯತೆ ಹಾಗೂ ಅವಶ್ಯಕತೆ ಇದೆ. ಸಾಮಾನ್ಯ ಜನರು ನಮ್ಮ ಈ ಹೋರಾಟಕ್ಕೆ ಜತೆಯಾಗಬೇಕು ಎಂದರು.ವಕೀಲರ ಸಂಘದ ಅಧ್ಯಕ್ಷ ಸಿ.ಎಫ್. ಈರೇಶ ಮಾತನಾಡಿ, ಹೋರಾಟದ ಕಿಚ್ಚು ಈ ದೇಶದ ಮಣ್ಣಿನ ಗುಣವಾಗಿದೆ. ಸಂವಿಧಾನದಲ್ಲಿನ ಅಧಿಕಾರ ವಿಕೇಂದ್ರಿಕರಣವನ್ನು ಬಲವಾಗಿ ನಂಬಿದ್ದೇವೆ. ಪ್ರತಿ ನಾಗರಿಕರಿಗೆ ಸುಲಭಸಾಧ್ಯವಾಗಿ ಸರ್ಕಾರದ ಎಲ್ಲ ವ್ಯವಸ್ಥೆಗಳು ದೊರಕುವಂತಾಗಲು ಪ್ರತ್ಯೇಕ ಜಿಲ್ಲೆ ರಚನೆ ಅನಿವಾರ್ಯವಾಗಿದೆ ಎಂದರು.ಮಹಿಳಾ ಪ್ರಮುಖರಾದ ಜ್ಯೋತಿ ಭಟ್ಟ ಮಾತನಾಡಿ, ಎಲ್ಲರ ಸಹಕಾರ, ಪ್ರೋತ್ಸಾಹ ಇದ್ದರೆ ಮಾತ್ರ ಜಿಲ್ಲೆಯ ಹೋರಾಟಕ್ಕೆ ಇನ್ನಷ್ಟು ಶಕ್ತಿ ಬರುತ್ತದೆ. ಸಾಮಾನ್ಯ ವರ್ಗದ ಜನರು ಪ್ರತ್ಯೇಕ ಜಿಲ್ಲೆ ಹೋರಾಟಕ್ಕೆ ಕೈಜೋಡಿಸಬೇಕೆಂದು ಮನವಿ ಮಾಡಿದರು.ಜಿಪಂ ಮಾಜಿ ಸದಸ್ಯೆ ಶೋಭಾ ನಾಯ್ಕ, ನಗರಸಭೆ ಅಧ್ಯಕ್ಷೆ ಶರ್ಮಿಳಾ ಮಾದನಗೇರಿ ಮಾತನಾಡಿದರು. ಜಾಥಾದಲ್ಲಿ ಕದಂಬ ಕನ್ನಡ ಜಿಲ್ಲಾ ಸಮಿತಿ ಸಂಚಾಲಕ ಎಂ.ಎಂ. ಭಟ್ಟ, ಶೋಭಾ ನಾಯ್ಕ, ವಿ.ಎಂ. ಭಟ್ಟ, ಮಹಾದೇವ ಚಲುವಾದಿ, ಶಿವಾನಂದ ದೇಶಳ್ಳಿ, ಅನಿಲ ನಾಯಕ, ರಮೇಶ ದುಭಾಷಿ, ನಗರಸಭೆ ಉಪಾಧ್ಯಕ್ಷ ರಮಾಕಾಂತ ಭಟ್, ವಕೀಲ ಸದಾನಂದ ಭಟ್ಟ, ರಾಘವೇಂದ್ರ ನಾಯ್ಕ, ಶ್ಯಾಮಸುಂದರ ಭಟ್ಟ, ಅನಿಲ ಕರಿ, ಮಹಾಂತೇಶ ಹಾದಿಮನೆ, ನಾಗರಾಜ ನಾಯ್ಕ, ಚಿದಾನಂದ ಹರಿಜನ, ಉದಯಕುಮಾರ ಕಾನಳ್ಳಿ, ಲ. ಅಶ್ವತ್ಥ ಹೆಗಡೆ, ವಿನಾಯಕ ಭಾಗ್ವತ್, ಮಂಜುನಾಥ ಆಚಾರಿ ಮಂಜುಗುಣಿ, ಕುಮಾರ ಪಟಗಾರ್ ಸೇರಿದಂತೆ ನೂರಾರು ಹೋರಾಟಗಾರರು ಭಾಗಿಯಾಗಿದ್ದರು.ಮೆರವಣಿಗೆಗೂ ಮುನ್ನ ಚಂಡಿಕಾ ಯಾಗ

ಸೋಮವಾರ ಸಂಜೆಯಿಂದಲೇ ಮಾರಿಕಾಂಬಾ ಸನ್ನಿಧಿಯಲ್ಲಿ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದ ಸಮಿತಿ, ಮಂಗಳವಾರ ಬೆಳಗ್ಗೆ ಚಂಡಿಕಾ ಯಾಗದ ಪೂರ್ಣಾಹುತಿಯನ್ನು ನೆರವೇರಿಸಿ, ಮಾರಿಕಾಂಬಾ ದೇವಿಗೆ ಕದಂಬ ಕನ್ನಡ ಜಿಲ್ಲೆ ಮನವಿ ಪತ್ರವಿಟ್ಟು ಪೂಜೆ ಸಲ್ಲಿಸಲಾಯಿತು. ಬಳಿಕ ಡೋಲು ವಾದ್ಯದ ತಂಡದೊಂದಿಗೆ ಹೊರಟ ಜಾಥಾ ಮೆರವಣಿಗೆಯು ನಗರದ ಬಸ್‌ ನಿಲ್ದಾಣ ವೃತ್ತ, ಸಿ.ಪಿ. ಬಜಾರ್ ಮಾರ್ಗವಾಗಿ ಸಹಾಯಕ ಆಯುಕ್ತರ ಕಚೇರಿ ತಲುಪಿ, ಮುಖ್ಯಮಂತ್ರಿಗೆ ಸಹಾಯಕ ಆಯುಕ್ತರ ಮೂಲಕ ಮನವಿ ಪತ್ರ ಸಲ್ಲಿಸಲಾಯಿತು.

ಕಾರ್ಯಕರ್ತರಲ್ಲಿ ಸಂಚಲನ: ಮಾರಿಕಾಂಬಾ ದೇವಾಲಯದ ಸನ್ನಿಧಾನದಲ್ಲಿ ಚಂಡಿಕಾಯಾಗದ ಶುಭ ಸಂದರ್ಭದಲ್ಲಿ ಪುರೋಹಿತರು ಕದಂಬ ಕನ್ನಡ ಜಿಲ್ಲೆಯಾಗಬೇಕೆಂದು ಪ್ರಾರ್ಥನೆ ಸಲ್ಲಿಸುವ ಹೊತ್ತಿಗೆ ದೇವರ ಕಲಶದ ಮೇಲಿಟ್ಟ ಹೂವಿನ ಮಾಲೆಗಳು ಪ್ರಸಾದದ ರೂಪದಲ್ಲಿ ಕೆಳಬಿದ್ದಿದ್ದು, ನೆರೆದಿದ್ದ ಭಕ್ತರಲ್ಲಿ, ಕಾರ್ಯಕರ್ತರಲ್ಲಿ ಸಂಚಲನದ ಜತೆಗೆ ಆನಂದಬಾಷ್ಪಕ್ಕೆ ಕಾರಣವಾಯಿತು. ನೇತೃತ್ವ ವಹಿಸಿದ್ದ ಅನಂತಮೂರ್ತಿ ಹೆಗಡೆ ಚಂಡಿಕಾಯಾಗ ನೆರವೇರಿಸಿದ ಪವಿತ್ರ ಮಡಿಬಟ್ಟೆಯಲ್ಲಿಯೇ ಬರಿಗಾಲಿನಲ್ಲಿ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದು ಎಲ್ಲರ ಗಮನ ಸೆಳೆಯಿತು.

PREV

Recommended Stories

ದಸರಾ ಗಜಪಡೆಯಲ್ಲಿ ‘ಭೀಮ’ನೇ ಬಲಶಾಲಿ : ತೂಕ 5465 ಕೆ.ಜಿ.
ಕಮ್ಮಿ ಫಲಿತಾಂಶ ಬಂದರೆ ಶಿಕ್ಷಕರ ವೇತನ ಕಟ್ ಇಲ್ಲ