-ವೈದ್ಯರು, ದಾದಿಯರು, ಗ್ರೂಪ್ ಡಿ. ನೌಕರರ ವಸತಿ ಗೃಹಗಳ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ
----ಕನ್ನಡಪ್ರಭ ವಾರ್ತೆ ಹೊಳಲ್ಕೆರೆ
ಜಿಲ್ಲಾಸ್ಪತ್ರೆಯಲ್ಲಿ ರೋಗಿಗಳಿಗೆ ಸಿಗುವಂತ ಎಲ್ಲಾ ರೀತಿಯ ಸೌಲಭ್ಯಗಳು ಗ್ರಾಮೀಣ ಆಸ್ಪತ್ರೆಗಳಲ್ಲಿಯೂ ಲಭ್ಯವಾಗುವಂತೆ ಮಾಡಿದ್ದೇನೆ ಎಂದು ಶಾಸಕ ಡಾ.ಎಂ.ಚಂದ್ರಪ್ಪ ತಿಳಿಸಿದರು.ತಾಲೂಕಿನ ರಾಮಗಿರಿಯಲ್ಲಿ ಎರಡು ಕೋಟಿ ರು. ವೆಚ್ಚದಲ್ಲಿ ವೈದ್ಯರ, ದಾದಿಯರ ಮತ್ತು ಗ್ರೂಪ್ ಡಿ. ನೌಕರರ ವಸತಿ ಗೃಹಗಳ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.
ತಾಳಿಕಟ್ಟೆಯಲ್ಲಿ ಹೆಂಚಿನ ಮನೆಯಲ್ಲಿದ್ದ ಆಸ್ಪತ್ರೆಯನ್ನು ಕೆಡವಿ ದೊಡ್ಡ ಆಸ್ಪತ್ರೆ ನಿರ್ಮಿಸಿದ್ದೇನೆ. ಆಪರೇಷನ್ ಥೇಟರ್, ಡಯಾಲಿಸಿಸ್ ಸೆಂಟರ್, ಮಕ್ಕಳ ವಿಭಾಗ ಎಲ್ಲವೂ ಇದೆ. ಬಡ ಜನರು ದೊಡ್ಡ ನಗರಗಳಿಗೆ ಹೋಗಿ ಚಿಕಿತ್ಸೆ ಪಡೆಯಲು ಆಗುವುದಿಲ್ಲವೆಂದು ಮನಗಂಡು ಪಟ್ಟಣದಲ್ಲಿ ಹೈಟೆಕ್ ಆಸ್ಪತ್ರೆ ಕಟ್ಟಿಸಿದ್ದೇನೆ. ರೈತರಿಗೆ ವಿದ್ಯುತ್ ನೀರಿನ ಸಮಸ್ಯೆ ನಿವಾರಣೆಯಾಗಿದೆ. ರೈತರು ಅಡಿಕೆ ತೋಟಗಳನ್ನು ಒಣಗಿಸಿಕೊಂಡು ಎಷ್ಟು ನೋವು ಅನುಭವಿಸುತ್ತಿದ್ದಾರೆನ್ನುವುದು ನನಗೆ ಗೊತ್ತಿದೆ. ಇದರಿಂದ ಕೋಟೆಹಾಳ್ ಹತ್ತಿರ ಹದಿಮೂರುವರೆ ಎಕರೆ ಜಾಗದಲ್ಲಿ ಐದು ನೂರು ಕೋಟಿ ರು. ವೆಚ್ಚದಲ್ಲಿ 440 ಮೆ.ವ್ಯಾ.ವಿದ್ಯುತ್ ಪವರ್ ಸ್ಟೇಷನ್ ನಿರ್ಮಾಣವಾಗುತ್ತಿದೆ. ಇಲ್ಲಿಗೆ ಜೋಗ್‍ಫಾಲ್ಸ್‌ನಿಂದ ನೇರವಾಗಿ ವಿದ್ಯುತ್ ಸರಬರಾಜಾಗಲಿದೆ. ಇದರಿಂದ ಇಡಿ ತಾಲೂಕಿಗೆ ವಿದ್ಯುತ್ ಸಮಸ್ಯೆಯಿರುವುದಿಲ್ಲ ಎಂದು ಹೇಳಿದರು.ಕೆರೆಕಟ್ಟೆ, ಗೋಕಟ್ಟೆ, ಚೆಕ್‍ಡ್ಯಾಂಗಳನ್ನು ಕಟ್ಟಿರುವುದರಿಂದ ಎಲ್ಲಾ ಕಡೆ ನೀರು ತುಂಬಿ ತುಳು ಕಾಡುತ್ತಿದೆ. ಗಣೇಶ ದೇವಸ್ಥಾನದ ಸಮೀಪ ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಅನುಕೂಲವಾಗಲಿ ಎನ್ನುವ ಉದ್ದೇಶದಿಂದ ಐದು ಅಂತಸ್ತಿನ ಹಾಸ್ಟೆಲ್ ನಿರ್ಮಾಣವಾಗಿದೆ. ವಾಲ್ಮೀಕಿ ಭವನ ಕಟ್ಟಿಸಿದ್ದೇನೆ. ಕ್ಷೇತ್ರದಲ್ಲಿ ಎಲ್ಲಿ ಯಾರು ಏನೂ ಕೇಳಲಿ ಬಿಡಲಿ ಎಲ್ಲೆಲ್ಲಿ ಏನೇನು ಸಮಸ್ಯೆಗಳಿದೆ ಎನ್ನುವುದನ್ನು ಅರ್ಥಮಾಡಿಕೊಂಡು ಅಭಿವೃದ್ಧಿ ಕೆಲಸಗಳನ್ನು ಮಾಡಿಸಿದ್ದೇನೆ ಎಂದು ತಿಳಿಸಿದರು.
ಗ್ರಾ.ಪಂ ಅಧ್ಯಕ್ಷೆ ಶಾರದಮ್ಮ, ಉಪಾಧ್ಯಕ್ಷೆ ಯಶೋಧಮ್ಮ, ಷಣ್ಮುಖಪ್ಪ, ಗ್ರಾ.ಪಂ.ಸದಸ್ಯರಾದ ಅನುಸೂಯಮ್ಮ, ರಾಜಣ್ಣ, ಕುಮಾರಣ್ಣ, ಚನ್ನಕೇಶವ, ರವಿಕುಮಾರ್, ಶಿವಶಂಕರ್, ಸರಸ್ವತಿ, ಸಿದ್ದೇಶ್ ಹಾಗೂ ವೈದ್ಯಾಧಿಕಾರಿಗಳು ಈ ಸಂದರ್ಭದಲ್ಲಿ ಹಾಜರಿದ್ದರು.-----
ಫೋಟೋ: ರಾಮಗಿರಿಯಲ್ಲಿ ವೈದ್ಯರು, ದಾದಿಯರು ಹಾಗೂ ಗ್ರೂಪ್ ಡಿ. ನೌಕರರ ವಸತಿ ಗೃಹಗಳ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ಸಲ್ಲಿಸಿದ ಶಾಸಕ ಡಾ.ಎಂ.ಚಂದ್ರಪ್ಪ.