ಗುತ್ತಿಗೆದಾರ, ಅಧಿಕಾರಿಗಳ ಮೇಲೆ ಕ್ರಿಮಿನಲ್ ಪ್ರಕರಣ: ಡಿಸಿ

KannadaprabhaNewsNetwork | Published : Oct 11, 2024 11:53 PM

ಸಾರಾಂಶ

ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಇಂದ್ರಾಳಿ ಮೇಲ್ಸೇತುವೆ ಕಾಮಗಾರಿ ಪ್ರಗತಿ ಪರಿಶೀಲನೆ ಸಭೆ ನಡೆಯಿತು. ಜಿಲ್ಲಾಧಿಕಾರಿ ಡಾ. ಕೆ.ವಿದ್ಯಾಕುಮಾರಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಕನ್ನಡಪ್ರಭ ವಾರ್ತೆ ಮಣಿಪಾಲ

ಇಲ್ಲಿನ ರಾಹೆ 169 ಎ ಇದರ ಇಂದ್ರಾಳಿ ಮೇಲ್ಸೇತುವೆ ನಿರ್ಮಾಣ ಕಾಮಗಾರಿಯ ವಿಳಂಬದಿಂದ ಅನೇಕ ಅಪಘಾತಗಳಾಗಿ ಸಾವು-ನೋವುಗಳು ಸಂಭವಿಸಿದೆ. ಈ ಕಾಮಗಾರಿಯ ವಿಳಂಬಕ್ಕೆ ಕಾರಣರಾದ ಗುತ್ತಿಗೆದಾರರು, ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಕ್ರಿಮಿನಲ್ ಪ್ರಕರಣ ದಾಖಲಿಸಲಾಗುವುದು ಎಂದು ಜಿಲ್ಲಾಧಿಕಾರಿ ಡಾ. ಕೆ.ವಿದ್ಯಾಕುಮಾರಿ ಹೇಳಿದ್ದಾರೆ.ಅವರು ಗುರುವಾರ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಇಂದ್ರಾಳಿ ಮೇಲ್ಸೇತುವೆ ಕಾಮಗಾರಿ ಪ್ರಗತಿ ಪರಿಶೀಲನೆ ಸಭೆಯ ನಡೆಸಿದರು.

2 ವರ್ಷಗಳಿಂದ ನನೆಗುದಿಗೆ ಬಿದ್ದಿರುವ ಈ ಮೇಲ್ಸೇತುವೆ ರಸ್ತೆ ಕಾಮಗಾರಿಯ ಕಾರಣಕ್ಕೆ ರಾ.ಹೆ. ಇಕ್ಕಟ್ಟಾಗಿದೆ. ಇದರಿಂದ 2023ರಲ್ಲಿ 8 ಪ್ರಕರಣಗಳಲ್ಲಿ ಒಬ್ಬರು ಮೃತಪಟ್ಟಿದ್ದರು. ಈ ವರ್ಷ ಈಗಾಗಲೇ 10 ಅಪಘಾತದಲ್ಲಿ ಇಬ್ಬರು ಮೃತಪಟ್ಟಿದ್ದಾರೆ. ಇದಕ್ಕೆಲ್ಲಾ ಗುತ್ತಿಗೆದಾರರು, ರೈಲ್ವೆ ಅಧಿಕಾರಿಗಳು ಹಾಗೂ ರಾ.ಹೆ. ವಿಭಾಗದ ಅಭಿಯಂತರರ ನಿರ್ಲಕ್ಷ್ಯವೇ ಕಾರಣ ಎಂದವರು ಅಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡರು ಮತ್ತು ಅವರ ಮೇಲೆ ಸೂಕ್ತ ಕ್ರಮಕ್ಕಾಗಿ ಕೇಂದ್ರ ಸಚಿವಾಲಯದ ಕಾರ್ಯಾಲಯಕ್ಕೆ ಪತ್ರ ಬರೆಯುವುದಾಗಿ ತಿಳಿಸಿದರು.ಈ ಮೇಲ್ಸೇತುವೆ ಕಾಮಗಾರಿಯ ಪ್ರಕ್ರಿಯೆಗಳನ್ನು 2018-19ರಲ್ಲಿಆರಂಭಿಸಲಾಗಿತ್ತು. ಅಧಿಕಾರಿಗಳ ನಡುವೆ ಸಮನ್ವಯದ ಕೊರತೆಯಿಂದಾಗಿ ಕಾಮಗಾರಿ ವಿಳಂಬವಾಗಿದೆ. ಅಧಿಕಾರಿಗಳು ಏನೂ ಕೆಲಸಗಳನ್ನು ಮಾಡುತ್ತಿದ್ದೀರಾ, ನಿಮಗೆ ಹೇಳು ಕೇಳುವವರು ಯಾರು ಇಲ್ಲವೇ ಎಂದು ಪ್ರಶ್ನಿಸಿದ ಡಿಸಿ, ನ.10ರೊಳಗಾಗಿ ಕಾಮಗಾರಿಯನ್ನು ಪೂರ್ಣಗೊಳಿಸಬೇಕು ಎಂದು ಖಡಕ್ ಸೂಚನೆ ನೀಡಿದರು.ಎಸ್ಪಿ ಡಾ. ಅರುಣ್ ಕೆ., ಈ ಪ್ರದೇಶದಲ್ಲಿ ಇತ್ತೀಚೆಗೆ ಸಂಭವಿಸಿದ ಅಪಘಾತದಲ್ಲಿ ಯುವಕನೊಬ್ಬ ಮೃತಪಟ್ಟಿದ್ದು, ಗುತ್ತಿಗೆದಾರರು, ರಾ.ಹೆ. ಅಭಿಯಂತರರು ಹಾಗೂ ರೈಲ್ವೆ ಇಲಾಖೆಯ ಅಧಿಕಾರಿಗಳ ಮೇಲೆ ಪ್ರಕರಣ ದಾಖಲಿಸಿ, ದಸ್ತಗಿರಿ ಮಾಡಿ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಮಮತಾದೇವಿ ಜಿ.ಎಸ್., ಕೊಂಕಣ ರೈಲ್ವೆ ಹಿರಿಯ ಎಂಜಿನಿಯರ್ ಗೋಕುಲ್‌ದಾಸ್, ಶೃಂಗೇರಿ-ಚಿಕ್ಕಮಗಳೂರು ರಾ.ಹೆ. ವಿಭಾಗದ ಸ.ಕಾ. ಅಭಿಯಂತರ ಮಂಜುನಾಥ್, ಜಿಲ್ಲಾ ವಾರ್ತಾಧಿಕಾರಿ ಮಂಜುನಾಥ್ ಬಿ. ಹಾಗೂ ಮತ್ತಿತರರು ಉಪಸ್ಥಿತರಿದ್ದರು.

Share this article