2 ಸಾವಿರಕ್ಕೂ ಅಧಿಕ ಕಾಫಿ ಗಿಡ ಕಡಿದ ದುಷ್ಕರ್ಮಿಗಳು

KannadaprabhaNewsNetwork |  
Published : May 08, 2026, 02:30 AM IST
ಕಾಫಿ ಗಿಡಗಳನ್ನು ಕಡಿದಿರುವುದು. | Kannada Prabha

ಸಾರಾಂಶ

ಪೊನ್ನಂಪೇಟೆ ತಾಲೂಕು ಬಿರುನಾಣಿ ಗ್ರಾಮದಲ್ಲಿ ಫಸಲು ಬರುವ ಸುಮಾರು 2 ಸಾವಿರಕ್ಕೂ ಅಧಿಕ ಕಾಫಿ ಗಿಡ ಮತ್ತು ಸುಮಾರು 250ಕ್ಕೂ ಅಧಿಕ ಅಸಲು ಬರುವ ಕಾಳು ಮೆಣಸು ಬಳ್ಳಿಗಳನ್ನು ದುಷ್ಕರ್ಮಿಗಳು ಕಡಿದು ಹಾಕಿರುವ ಅಮಾನುಷ ಘಟನೆ ಬಿರುನಾಣಿ ಸಮೀಪ ಕಳಕೂರು ಗ್ರಾಮದಲ್ಲಿ ನಡೆದಿದೆ.

ಕನ್ನಡಪ್ರಭ ವಾರ್ತೆ ಪೊನ್ನಂಪೇಟೆ

ಪೊನ್ನಂಪೇಟೆ ತಾಲೂಕು ಬಿರುನಾಣಿ ಗ್ರಾಮದಲ್ಲಿ ಫಸಲು ಬರುವ ಸುಮಾರು 2 ಸಾವಿರಕ್ಕೂ ಅಧಿಕ ಕಾಫಿ ಗಿಡ ಮತ್ತು ಸುಮಾರು 250ಕ್ಕೂ ಅಧಿಕ ಅಸಲು ಬರುವ ಕಾಳು ಮೆಣಸು ಬಳ್ಳಿಗಳನ್ನು ದುಷ್ಕರ್ಮಿಗಳು ಕಡಿದು ಹಾಕಿರುವ ಅಮಾನುಷ ಘಟನೆ ಬಿರುನಾಣಿ ಸಮೀಪ ಕಳಕೂರು ಗ್ರಾಮದಲ್ಲಿ ನಡೆದಿದೆ.

ಗ್ರಾಮದ ಕುಪ್ಪಣಮಾಡ ಗೌತಮ್ ಅವರಿಗೆ ಸೇರಿದ ಸುಮಾರು ಮೂರುವರೆ ಎಕ್ರೆ ಜಾಗದಲ್ಲಿ ಹೊಸದಾಗಿ ಮಾಡಿದ್ದ ಏಳೆಂಟು ವರ್ಷದ ಕಾಫಿ ಗಿಡ ಹಾಗೂ ಕಾಳುಮೆಣಸು ಬಳ್ಳಿಗಳನ್ನು ದುಷ್ಕರ್ಮಿಗಳು ಕತ್ತಿಯಿಂದ ಕಡಿದಿದ್ದು ಇದರ ಬಗ್ಗೆ ಶ್ರೀಮಂಗಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಈ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆಯಿಂದ ದುಷ್ಕರ್ಮಿಗಳನ್ನು ಪತ್ತೆಹಚ್ಚಲು ಮಡಿಕೇರಿಯಿಂದ ಶ್ವಾನ ದಳವನ್ನು ಸ್ಥಳಕ್ಕೆ ಕರೆತರಲಾಗಿದೆ. ಪೊಲೀಸರು ದುಷ್ಕರ್ಮಿಗಳನ್ನು ಪತ್ತೆಹಚ್ಚಲು ತನಿಖೆ ಮುಂದುವರಿಸಿದ್ದಾರೆ. ತೋಟದಲ್ಲಿ ಅಳವಡಿಸಿದ್ದ ಎರಡು ಸಿಸಿ ಕ್ಯಾಮೆರಾಗಳನ್ನು ದುಷ್ಕರ್ಮಿಗಳು ಕಿತ್ತೊಯ್ದಿದ್ದು ಬೆಳೆಗಾರ ಗೌತಮ್ ಅವರು ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಮೈಸೂರಿನಲ್ಲಿ ಮದುವೆಗೆ ಹೋದ ಸಮಯವನ್ನು ಅರಿತು ದುಷ್ಕರ್ಮಿಗಳು ಕಾಫಿ ಗಿಡಗಳನ್ನು ಕಡಿದಿತ್ತಿರುವುದು ಕಂಡುಬಂದಿದೆ. ಸ್ಥಳಕ್ಕೆ ಶ್ರೀಮಂಗಲ ಪೊಲೀಸ್ ಠಾಣಾಧಿಕಾರಿ ರವೀಂದ್ರ ಹಾಗೂ ಸಿಬ್ಬಂದಿ ಆಗಮಿಸಿ, ದುಷ್ಕರ್ಮಿಗಳ ಸುಳಿವು ಪತ್ತೆಹಚ್ಚಲು ತನಿಖೆ ಕೊಂಡಿದ್ದಾರೆ. ಸ್ಥಳಕ್ಕೆ ಗ್ರಾಮಸ್ಥರು ಆಗಮಿಸಿ ಇಂತಹ ಅಮಾನುಷ ಘಟನೆಯನ್ನು ಖಂಡಿಸಿದ್ದಾರೆ. ಈ ಅಮಾನುಷ ಘಟನೆಯಿಂದ ಬೆಳೆಗಾರ ಗೌತಮ್ ಅವರಿಗೆ ಲಕ್ಷಾಂತರ ರೂಪಾಯಿ ನಷ್ಟವಾಗಿದ್ದು ಬಹಳಷ್ಟು ಕಾಫಿ ಗಿಡಗಳನ್ನು ಮತ್ತು ಕಾಳುಮೆಣಸು ಬಳ್ಳಿಗಳನ್ನು ನೆಲಸಮವಾಗಿ ಕತ್ತರಿಸಲಾಗಿದ್ದು, ಮತ್ತೆ ಅದು ಚಿಗುರುವ ಸಾಧ್ಯತೆ ಇಲ್ಲದೆ ಇರುವುದರಿಂದ ಹೊಸದಾಗಿ ತೋಟ ಮಾಡಬೇಕಾದ ಅನಿವಾರ್ಯತೆ ಇದೆ ಎಂದು ಗ್ರಾಮಸ್ಥರು ಬೆಳೆಗಾರರ ಪರವಾಗಿ ತೀವ್ರ ನೋವು ವ್ಯಕ್ತಪಡಿಸಿದರು.

ಈ ದುಷ್ಕೃತ್ಯವನ್ನು ಒಂದಿಬ್ಬರು ಮಾಡಲು ಸಾಧ್ಯವಿಲ್ಲ. ಕನಿಷ್ಠ ಎಂಟರಿಂದ ಹತ್ತು ಜನರು ಮಾಡಿರುವ ಸಾಧ್ಯತೆ ಇದೆ. ಸುಮಾರು 2, ಸಾವಿರಕ್ಕೂ ಹೆಚ್ಚು ಕಾಫಿ ಗಿಡಗಳನ್ನು ಕಡಿಯುವುದು ಸಾಮಾನ್ಯ ವ್ಯಕ್ತಿಗಳಿಗೆ ಸಾಧ್ಯವಾಗುವುದಿಲ್ಲ. ಆದ್ದರಿಂದ ಇಂತಹ ಕೃತ್ಯಗಳು ಮುಂದೆ ಎಲ್ಲಿಯೂ ನಡೆಯಬಾರದು. ಆದ್ದರಿಂದ ಅಂತಹ ಕೃತ್ಯದಲ್ಲಿ ಪಾಲ್ಗೊಂಡವರು ಹಾಗೂ ಕುಮ್ಮಕ್ಕು ನೀಡಿದವರ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ. ಪೊಲೀಸ್ ಇಲಾಖೆ ಇಂತಹ ದುಷ್ಕರ್ಮಿಯನ್ನು ಪತ್ತೆ ಹಚ್ಚಿ ಕಠಿಣ ಶಿಕ್ಷೆಗೆ ಒಳಪಡಿಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಈ ಸಂದರ್ಭ ಹುದಿಕೇರಿ ಕಂದಾಯ ಪರಿವೀಕ್ಷರ ಸಂತೋಷ್ ಭೇಟಿ ನೀಡಿ ಪರಿಶೀಲಿಸಿದರು. ಪೊನ್ನಂಪೇಟೆ ಬಗರ್ ಹುಕುಂ ಸಕ್ರಮೀಕರಣ ಸಮಿತಿ ಅಧ್ಯಕ್ಷ ಅಣ್ಣಳಮಾಡ ಲಾಲಾ ಅಪ್ಪಣ್ಣ, ಕರ್ತಮಾಡ ನಂದಾ, ಕುಪ್ಪಣಮಾಡ ಪ್ರೀತಮ್, ಕಾಳಿಮಾಡ ರಶಿಕ,ಕಳಕಂಡ ಜೀತು ಕುಶಾಲಪ್ಪ, ಕುಪ್ಪಣಮಾಡ ಜೀವನ್, ಕಾಳಿಮಾಡ ಸಂಪಾ, ಅಣ್ಣಳಮಾಡ ಗಿರೀಶ್, ಸೇರಿದಂತೆ ನೂರಾರು ಗ್ರಾಮಸ್ಥರು ಆಗಮಿಸಿ ದುಷ್ಕೃತ್ಯವನ್ನು ಖಂಡಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಉಡುಪಿ ಶೋಕಮಾತಾ ಚರ್ಚಿನ ಧರ್ಮಗುರುಗಳಾಗಿ ವಂ| ಡೆನಿಸ್ ಡೆಸಾ ಅಧಿಕಾರ ಸ್ವೀಕಾರ
ತೊಟ್ಟಂ ಸಂತ ಅನ್ನಮ್ಮ ಚರ್ಚಿನ ನೂತನ ಧರ್ಮಗುರುಗಳಾಗಿ ವಂ| ಹೆನ್ರಿ ಮಸ್ಕರೇನ್ಹಸ್ ಅಧಿಕಾರ ಸ್ವೀಕಾರ