ಟೀಕೆ ಬಿಜೆಪಿಯ ಹತಾಶೆಯನ್ನು ತೋರಿಸುತ್ತಿದೆ: ಬ್ಲಾಕ್ ಕಾಂಗ್ರೆಸ್ ಸಮಿತಿ

KannadaprabhaNewsNetwork |  
Published : Nov 18, 2025, 02:00 AM IST
ಸಮಿತಿ | Kannada Prabha

ಸಾರಾಂಶ

ಫ್ಲೆಕ್ಸ್‌ಗಳ ವಿಷಯ ಇಟ್ಟುಕೊಂಡು ಶಾಸಕ ಡಾ. ಮಂತರ್‌ಗೌಡ ಅವರನ್ನು ಟೀಕೆ ಮಾಡುತ್ತಿರುವುದು ಬಿಜೆಪಿ ಹತಾಶೆಯನ್ನು ತೋರಿಸುತ್ತಿದೆ ಎಂದು ಬ್ಲಾಕ್‌ ಕಾಂಗ್ರೆಸ್‌ ಸಮಿತಿ ತಿಳಿಸಿದೆ.

ಸೋಮವಾರಪೇಟೆ: ಪಟ್ಟಣದಲ್ಲಿ ಅಳವಡಿಸಿರುವ ಫ್ಲೆಕ್ಸ್‌ಗಳ ವಿಷಯ ಇಟ್ಟುಕೊಂಡು ಶಾಸಕ ಡಾ.ಮಂತರ್‌ಗೌಡ ಅವರನ್ನು ಟೀಕೆ ಮಾಡುತ್ತಿರುವುದು ಬಿಜೆಪಿಯ ಹತಾಶೆಯನ್ನು ತೋರಿಸುತ್ತಿದೆ ಎಂದು ಬ್ಲಾಕ್ ಕಾಂಗ್ರೆಸ್ ಸಮಿತಿ ತಿಳಿಸಿದೆ. ಶಾಸಕರ ಗಮನಕ್ಕೆ ಬರದೆ ಅಭಿಮಾನಿಗಳು ಫ್ಲೆಕ್ಸ್ಗಳನ್ನು ಅಳವಡಿಸಿರಬಹುದು. ಇದರ ಜೊತೆಗೆ ಕ್ರೀಡಾಕೂಟಗಳನ್ನು ನಡೆಸುವವರು ಅಳವಡಿಸುತ್ತಾರೆ. ಅನುಮತಿಯಿಲ್ಲದೆ ಅಳವಡಿಸಿರುವ ಫ್ಲೆಕ್ಸ್ಗಳನ್ನು ತೆಗೆಸುವುದಕ್ಕೆ ಸ್ಥಳೀಯ ಪಂಚಾಯಿತಿಗೆ ಅಧಿಕಾರವಿದೆ. ಸೋಮವಾರಪೇಟೆ ಪಟ್ಟಣ ಪಂಚಾಯಿತಿ ಮೊನ್ನೆ ತನಕ ಬಿಜೆಪಿ ಆಡಳಿದಲ್ಲಿತ್ತು. ಚೌಡ್ಲು, ಬೇಳೂರು ಗ್ರಾಮ ಪಂಚಾಯಿತಿಗಳು ಬಿಜೆಪಿ ಆಡಳಿತದಲ್ಲಿದೆ. ಅವರೇಕೆ ಫ್ಲೆಕ್ಸ್‌ಗಳನ್ನು ತೆಗೆಯುತ್ತಿಲ್ಲ. ಬಿಜೆಪಿಯವರು ಅಲ್ಲಿ ಹೋಗಿ ಪ್ರಶ್ನೆ ಮಾಡಲಿ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಬಿ.ಸತೀಶ್ ಸುದ್ದಿಗೋಷ್ಠಿಯಲ್ಲಿ ಹೇಳಿದರು.ಕಳೆದ 25 ವರ್ಷಗಳಲ್ಲಿ ಹಿಂದಿನ ಶಾಸಕರು ಸಿ ಆ್ಯಂಡ್ ಡಿ ಜಾಗದ ಸಮಸ್ಯೆ ಬಗೆಹರಿಸುವ ಪ್ರಯತ್ನ ಮಾಡಲಿಲ್ಲ. ಡಾ. ಮಂತರ್‌ಗೌಡ ಶಾಸಕರಾಗಿ ಎರಡೂವರೆ ವರ್ಷದಲ್ಲಿ ಸಿ ಆ್ಯಂಡ್ ಡಿ ಸಮಸ್ಯೆ ಬಗೆಹರಿಸಲು ಎಲ್ಲಾ ರೀತಿಯಲ್ಲೂ ಶ್ರಮಿಸುತ್ತಿದ್ದಾರೆ. ಮುಖ್ಯಮಂತ್ರಿಗಳು, ಅರಣ್ಯ ಮತ್ತು ಕಂದಾಯ ಸಚಿವರಿಗೆ ಸಿ ಆ್ಯಂಡ್ ಡಿ ಸಮಸ್ಯೆಯನ್ನು ಮನವರಿಕೆ ಮಾಡಿಕೊಟ್ಟಿದ್ದಾರೆ. ಮುಂದಿನ ಒಂದು ತಿಂಗಳೊಳಗೆ ಸಿ ಆ್ಯಂಡ್ ಡಿ ಸಮಸ್ಯೆ ಬಗೆಹರಿಸಲು ರಾಜ್ಯ ಸರ್ಕಾರ ವಿಶೇಷ ಸಮಿತಿಯನ್ನು ರಚಿಸಲಿದೆ. ಸಮಿತಿ ಕೊಡಗಿಗೆ ಭೇಟಿ ನೀಡಿದ ಸಂದರ್ಭ ರಾಜಕೀಯ ರಹಿತವಾಗಿ ಎಲ್ಲರೂ ರೈತರ ಪರವಾಗಿ ನಿಲ್ಲಬೇಕಿದೆ. ರೈತ ಪರವಾಗಿರುವ ಕಾಂಗ್ರೆಸ್ ಸರ್ಕಾರದಿಂದ ಮಾತ್ರ ರೈತರ ಸಮಸ್ಯೆ ಬಗೆಹರಿಯಲು ಸಾಧ್ಯ ಎಂದು ಹೇಳಿದರು.ಕಳೆದ 25 ವರ್ಷಗಳಿಂದ ತಾಲೂಕು ಕಚೇರಿ ಅನೇಕ ಸಮಸ್ಯೆಗಳಿದ್ದವು. ಕಳೆದ ಎರಡೂವರೆ ವರ್ಷಗಳಿಂದ ತಾಲೂಕು ಕಚೇರಿಯಲ್ಲಿ ಅನೇಕ ಬದಲಾವಣೆಗಳಾಗಿವೆ. ಕಳೆದ 12 ತಿಂಗಳಿನಿಂದ 2.17ಕೋಟಿ ಪುಟಗಳನ್ನು ಸ್ಕಾನಿಂಗ್ ಮಾಡಲಾಗಿದೆ. ಕಂದಾಯ ಸಚಿವ ಕೃಷ್ಣಬೈರೇಗೌಡ ಅವರು ಅನೇಕ ರೈತಸ್ನೇಹಿ ಯೋಜನೆಗಳನ್ನು ತಂದಿದ್ದಾರೆ. ಸಿ ಆ್ಯಂಡ್ ಡಿ ಸಮಸ್ಯೆ ಬಗೆಹರಿಸುವ ಭರವಸೆ ನೀಡಿದ್ದಾರೆ. ಮುಂದಿನ ಡಿಸೆಂಬರ್ ಒಳಗೆ ಹೆಚ್ಚಿನ ರೈತರ ಜಾಗದ ಪೋಡಿ, ದುರಸ್ತಿಗಳು ನಡೆಯಲಿವೆ. ತಾಲೂಕು ಕಚೇರಿಯಲ್ಲಿ ದಲ್ಲಾಳಿಗಳಿಗೆ ಪ್ರವೇಶವಿಲ್ಲ ಎಂಬ ಬೋರ್ಡ್ ಹಾಕಲು ಶಾಸಕರು ತಹಸೀಲ್ದಾರ್ ಅವರಿಗೆ ಸೂಚಿಸಿದ್ದಾರೆ ಎಂದು ಹೇಳಿದರು. ಸೋಮವಾರಪೇಟೆ ಸರ್ಕಾರಿ ಆಸ್ಪತ್ರೆಯಲ್ಲಿ ಉತ್ತಮ ಸೇವೆ ಸಿಗುತ್ತಿದೆ. ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗೆ ತೆರಳದ ಬಿಜೆಪಿ ನಾಯಕರು ಅಪಪ್ರಚಾರ ಮಾಡುತ್ತಿದ್ದಾರೆ. 2022ರಲ್ಲಿ 6 ವೈದ್ಯರು, 23 ರಲ್ಲಿ 7 ಮಂದಿ, 24ಯಲ್ಲಿ 5 ವೈದ್ಯರು ಕೆಲಸ ನಿರ್ವಹಿಸುತ್ತಿದ್ದರು. ಈಗ 6 ತಜ್ಞ ವೈದ್ಯರು ಮತ್ತು 4 ವೈದ್ಯರು ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದಾರೆ. ಹೈಟೆಕ್ ರಕ್ತಪರೀಕ್ಷಾ ಕೇಂದ್ರವಿದೆ. ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸುವ ಯೋಜನೆ ಶಾಸಕರಿಗಿದೆ ಎಂದು ಹೇಳಿದರು.ಸ್ಥಳೀಯ ಸಂಸ್ಥೆಗಳ ವಿಷಯ ನ್ಯಾಯಾಲಯದಲ್ಲಿರುವುದರಿಂದ ವಿಳಂಬವಾಗುತ್ತಿದೆ. ಬಿಜೆಪಿ ಸರ್ಕಾರವಿದ್ದಾಗಲೂ 2 ವರ್ಷ ಚುನಾವಣೆ ನಡೆದಿಲ್ಲ. ಮೀಸಲಾತಿ, ವಾರ್ಡ್ ವಿಂಗಡಣೆ ಪ್ರಕ್ರಿಯೆಯಿಂದ ಒಂದಷ್ಟು ವಿಳಂಬವಾಗಿದೆ. ವಿಳಂಬಕ್ಕೂ ಬಿಜೆಪಿಯ ಕೊಡುಗೆಯೂ ಇದೆ ಎಂದು ಹೇಳಿದರು.ಗೋಷ್ಠಿಯಲ್ಲಿ ಬ್ಲಾಕ್ ಕಾರ್ಯದರ್ಶಿ ಸುನಿಲ್, ಖಚಾಂಚಿ ಚೇತನ್, ಪ್ರಮುಖರಾದ ಎಂ.ಎಸ್.ನಂದಕುಮಾರ್, ಎಸ್.ಐ.ಚೇತನ್, ಸಿ.ಈ.ಚೇತನ್ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪ್ರತಿಯೊಬ್ಬರೂ ಗ್ರಾಹಕರ ಹಕ್ಕುಗಳ ಮಹತ್ವ ತಿಳಿದುಕೊಳ್ಳಲಿ: ಅಪರ ಜಿಲ್ಲಾಧಿಕಾರಿ
ಸ್ಮಶಾನದ ಅಭಿವೃದ್ಧಿ ಕಾಮಗಾರಿ ತ್ವರಿತಗೊಳಿಸಲು ಆಗ್ರಹ