ಕಲಭಾವಿ- ಚಿಕ್ಕವಂಕಲಕುಂಟಾ ಕೆರೆಯಲ್ಲಿ ಮೊಸಳೆ ಪ್ರತ್ಯಕ್ಷ

KannadaprabhaNewsNetwork |  
Published : Aug 09, 2026, 02:15 AM IST
ಯಲಬುರ್ಗಾ ತಾಲೂಕಿನ ಕಲಭಾವಿ-ಚಿಕ್ಕವಂಕಲಕುಂಟಾ ಕೆರೆಯಲ್ಲಿ ಮೊಸಳೆ ಪ್ರತ್ಯಕ್ಷವಾಗಿರುವುದು. | Kannada Prabha

ಸಾರಾಂಶ

ಕೃಷ್ಣಾ ಬಿಸ್ಕೀಂ ನೀರಾವರಿ ಯೋಜನೆ ಭಾಗವಾಗಿರುವ ಕೆರೆ ತುಂಬಿಸುವ ಯೋಜನೆಯಡಿ ತಾಲೂಕಿನ ಕೆರೆಗಳಿಗೆ ನೀರು ಬಿಡುವ ವೇಳೆ ನದಿಯಿಂದ ಪೈಪ್‌ಲೈನ್ ಮೂಲಕ ಮೊಸಳೆ ಬಂದಿರುವ ಶಂಕೆ

ಪಾಲಾಕ್ಷ ಬಿ.ತಿಪ್ಪಳ್ಳಿ ಯಲಬುರ್ಗಾ

ತಾಲೂಕಿನ ಕಲಭಾವಿ-ಚಿಕ್ಕವಂಕಲಕುಂಟಾ ಕೆರೆಯಲ್ಲಿ ಮೊಸಳೆಗಳು ಕಾಣಿಸಿಕೊಂಡಿದ್ದು, ಸಾರ್ವಜನಿಕರು, ರೈತರಲ್ಲಿ ಆತಂಕ ಹೆಚ್ಚಿಸಿದೆ.

ಕಲಭಾವಿ ಹಾಗೂ ಚಿಕ್ಕವಂಕಲಕುಂಟಾ ಗ್ರಾಮಕ್ಕೆ ಕೂಗಳತೆಯಲ್ಲಿರುವ ಕೆರೆಯಲ್ಲಿ ಕಳೆದ ವಾರದಿಂದ ಮೊಸಳೆ ತಿರುಗಾಡುವ ದೃಶ್ಯ ಮೀನುಗಾರರು ಮತ್ತು ಗ್ರಾಮಸ್ಥರ ಕಣ್ಣಿಗೆ ಬಿದ್ದಿದೆ. ಐದಾರು ದಿನಗಳಿಂದ ಪ್ರತ್ಯಕ್ಷವಾಗಿ ಗಮನಿಸಿದ ನಂತರ ಮೊಸಳೆ ಇರುವುದು ದೃಢಪಟ್ಟಿದೆ. ಕೆರೆಯಲ್ಲಿ ಯುವಕರು ಈಜಲು, ಮಹಿಳೆಯರು ಬಟ್ಟೆ ತೊಳೆಯಲು ಹೋಗುವ ಮತ್ತು ಜಾನುವಾರುಗಳು, ಕುರಿ ಮೇಯಿಸುವ ರೈತರಲ್ಲಿ ಭೀತಿ ಹುಟ್ಟಿಸಿದೆ‌‌. ಕೂಡಲೇ ಸಂಬಂಧಿಸಿದ ಅಧಿಕಾರಿಗಳು ಇತ್ತ ಗಮನಹರಿಸಿ ಮೊಸಳೆಯನ್ನು ಬೇರೆಡೆ ಸ್ಥಳಾಂತರಿಸಬೇಕು ಎಂದು ಒತ್ತಾಯಿಸಿದ್ದಾರೆ.

ಪೈಪ್‌ಲೈನ್ ಮೂಲಕ ಬಂದಿರುವ ಶಂಕೆ: ಕೃಷ್ಣಾ ಬಿಸ್ಕೀಂ ನೀರಾವರಿ ಯೋಜನೆ ಭಾಗವಾಗಿರುವ ಕೆರೆ ತುಂಬಿಸುವ ಯೋಜನೆಯಡಿ ತಾಲೂಕಿನ ಕೆರೆಗಳಿಗೆ ನೀರು ಬಿಡುವ ವೇಳೆ ನದಿಯಿಂದ ಪೈಪ್‌ಲೈನ್ ಮೂಲಕ ಮೊಸಳೆ ಬಂದಿರುವ ಶಂಕೆ ವ್ಯಕ್ತವಾಗಿದೆ.

ಕೆರೆಯಲ್ಲಿ ನಿತ್ಯ ನೂರಾರು ಜಾನುವಾರುಗಳು, ಕುರಿಗಳಿಗೆ ನೀರು ಕುಡಿಸಲು ಹೋಗುವ ರೈತರು ಮತ್ತು ಸಾರ್ವಜನಿಕರಲ್ಲಿ ಆತಂಕ ಸೃಷ್ಟಿಸಿದೆ. ಅರಣ್ಯ ಇಲಾಖೆ ಅಧಿಕಾರಿಗಳು ತಕ್ಷಣ ಎಚ್ಚೆತ್ತುಕೊಂಡು ಮೊಸಳೆಯನ್ನು ಸುರಕ್ಷಿತವಾಗಿ ಸೆರೆ ಹಿಡಿದು ಬೇರೆಡೆ ಸ್ಥಳಾಂತರಿಸಬೇಕು ಎಂದು ಸ್ಥಳೀಯರಾದ ಹನುಮೇಶ ಬ್ಯಾಳಿ, ರಮೇಶ ಚಿಣಗಿ, ರಾಘು ಆಳೂರ, ಮಂಜುನಾಥ ಬೇವೂರು, ತಿರುಪತಿ ನಾಯಕ, ಹನುಮಂತ ಸಿದ್ದಾಪುರ, ನಿಂಗಪ್ಪ ಹರಿಜನ ಸೇರಿದಂತೆ ರೈತರು, ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಕಲಭಾವಿ-ಚಿಕ್ಕವಂಕಲಕುಂಟಾ ಕೆರೆಯಲ್ಲಿ ಮೊಸಳೆ ಪ್ರತ್ಯಕ್ಷವಾಗಿರುವುದು ಗಮನಕ್ಕಿದೆ. ಕೆರೆ ಪೈಪ್‌ಲೈನ್ ಮೂಲಕ ಮೊಸಳೆ ಮರಿಗಳು ಬಂದಿರುವ ಶಂಕೆ ವ್ಯಕ್ತವಾಗಿದೆ. ಈ ಕುರಿತು ಅರಣ್ಯ ಇಲಾಖೆಗೆ ಪತ್ರ ಬರೆದು, ಸುರಕ್ಷಿತವಾಗಿ ಬೇರೆಡೆ ಸ್ಥಳಾಂತರಿಸಲು ಮನವಿ ಮಾಡಲಾಗುವುದು. ಕೆರೆ ಹತ್ತಿರ ಯಾರೂ ಹೋಗದಂತೆ ಸಾರ್ವಜನಿಕರಿಗೆ ಜಾಗೃತಿ ಮೂಡಿಸಲಾಗುತ್ತಿದೆ ಎಂದು ಹಿರೇವಂಕಲಕುಂಟಾ ಗ್ರಾಪಂ ಪಿಡಿಒ ಹನುಮಂತ ರೇಣಿ ತಿಳಿಸಿದ್ದಾರೆ.

ಕೆರೆಯಲ್ಲಿ ಮೊಸಳೆಗಳು ಇರುವುದು ಪ್ರತ್ಯಕ್ಷವಾಗಿ ನೋಡಿದ್ದೇವೆ.ಮೀನು ಹಿಡಿಯಲು ಬಲೆ ಹಾಕಿದಾಗ ಅದನ್ನು ಕಡಿದು ಹಾಕುತ್ತವೆ. ಹಕ್ಕಿ ಪಕ್ಷಿಗಳು, ಮೀನುಗಳನ್ನು ತಿನ್ನುತ್ತವೆ‌. ಇದರಿಂದ ಆತಂಕ ಹೆಚ್ಚಿಸಿದೆ ಎಂದು ತಾವರಗೇರಾ ಮೀನುಗಾರ ಸಂಘದ ಸದಸ್ಯ ಮರ್ದಾನಸಾಬ್ ತಿಳಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಜಾನಪದ ವಸ್ತು ಸಂಗ್ರಹಾಲಯ ಈ ನೆಲದ ಜೀವನ ಮೀಮಾಂಸೆ ಹೇಳುವ ಪಠ್ಯ
ಹಡಪದ ಅಪ್ಪಣ್ಣನವರು ಬಸವಣ್ಣನವರ ಬಲಗೈ ಬಂಟರಾಗಿದ್ದರು-ಸ್ವಾಮೀಜಿ