ಬೆಳೆಹಾನಿ: 12, 313 ರೈತರಿಗೆ ಇನ್ನೂ ಕೈ ಸೇರಿಲ್ಲ ಪರಿಹಾರ

KannadaprabhaNewsNetwork |  
Published : Jan 14, 2026, 02:30 AM IST
ಫೋಟೋ- ಕ್ರಾಪ್‌ಭಾರಿ ಮಳೆಗೆ ಕಲಬುರಗಿಯಲ್ಲಿ 2 ಬಾರಿ ರೈತರ ಬೆಳೆದು ನಿಂತಿದ್ದ ಬೆಳೆಹಾನಿಯಾದ ನೋಟ. ಸಂಗ್ರಹ ಚಿತ್ರ | Kannada Prabha

ಸಾರಾಂಶ

Crop damage: 12,313 farmers have not yet received compensation

-ತಾಂತ್ರಿಕ ಕಾರಣ: ಅಧಿಕಾರಿಗಳ ಅಲಕ್ಷತನ- ಕೃಷಿ- ಕಂದಾಯ ಸಮನ್ವಯ ಕೊರತೆ, ಪರಿಹಾರ ರೈತರಿಗೆ ಮರೀಚಿಕೆ । ರೈತ ಸಂಪರ್ಕ ಕೇಂದ್ರ ಅಲೆದು ಸುಸ್ತು

--

ಶೇಷಮೂರ್ತಿ ಅವಧಾನಿ

ಕನ್ನಡಪ್ರಭ ವಾರ್ತೆ ಕಲಬುರಗಿ

ಜಿಲ್ಲೆಯಲ್ಲಿ 2025-26ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಭಾರಿ ಮಳೆ ಹಾಗೂ ಪ್ರವಾಹದಿಂದ ಬೆಳೆ ಹಾನಿಯಾದ 12, 313 ರೈತರಿಗೆ ಕೇಂದ್ರ ಹಾಗೂ ರಾಜ್ಯದಿಂದ ಬಿಡುಗಡೆಯಾಗಿರುವ ಪರಿಹಾರ ಹಣ ಇನ್ನೂ ಕೈ ಸೇರಿಲ್ಲ.

ಮೂರು ಬಾರಿ ಬಿತ್ತಿ ಕೈ ಸುಟ್ಟುಕೊಂಡರೂ ಕಾರಣಂತರದಿಂದ ಪರಿಹಾರ ಹಣ ಬೇಗ ಕೈ ಸೇರುತ್ತಿಲ್ಲವಲ್ಲ ಎಂದು ರೈತರು ಆತಂಕದಲ್ಲಿದ್ದಾರೆ. ಪರಿಹಾರದ ಹಣ ಅದ್ಯಾಕೆ ಜಮಾ ಆಗುತ್ತಿಲ್ಲವೆಂದು ಬ್ಯಾಂಕ್‌, ರೈತ ಸಂಪರ್ಕ ಕೇಂದ್ರ, ನಾಡ ಕಚೇರಿ, ತಲಾಟಿ ಆಫೀಸ್‌, ತಹಸೀಲದಾರ್‌ ಕಚೇರಿಗೆ ಸುತ್ತುತ್ತಿದ್ದಾರೆ.

ನವಂಬರ್‌ 3, 4ನೇ ವಾರದಲ್ಲೇ ಪರಿಹಾರ ಹಣ ಇತರ ರೈತರೆಲ್ಲರಿಗೂ ಬಿಡುಗಡೆಯಾಗಿದೆ. ಬ್ಯಾಂಕ್‌ ಖಾತೆಗೆ ಆಧಾರ, ಪಹಣಿ ಸಂಪರ್ಕವಿರಲಿಲ್ಲವೆಂದು ಹೇಳಿ ಪರಿಹಾರ ಬಂದಿಲ್ಲವೆಂದು ಹೇಳುತ್ತಿದ್ದಾರೆ. ನಾವು ಇದನ್ನೆಲ್ಲ ಮಾಡಿಸಿ ತಿಂಗಳಾಯ್ತು. ಆದ್ರೂ ನಿಲ್ಲಿಸಿರೋ ಪರಿಹಾರ ಹಣ ಜಮಾ ಆಗ್ತಿಲ್ಲವೆಂದು ಅಫಜಲಪುರ, ಕಲಬುರಗಿ ತಾಲೂಕಿನ ಅನೇಕ ರೈತರು ಕನ್ನಡಪ್ರಭ ಜೊತೆ ಮಾತನಾಡುತ್ತ ತಮ್ಮ ಗೋಳು ತೋಡಿಕೊಂಡಿದ್ದಾರೆ.

ಅಫಜಲಪುರ ತಾಲೂಕಿನ ಕರಜಗಿ ಹೋಬಳಿಯಲ್ಲಿ ಪರಿಹಾರ ಹಣ ಜಮೆ ಆಗದೆ ರೈತರು ಹಲವರು ಪರದಾಡುವಂತಾಗಿದೆ. ಅಧಿಕಾರಿಗಳ ಬಳಿ ಹೋದರೆ ದಿನಕ್ಕೊಂದು ಕಾರಣ ಹೇಳುತ್ತಿದ್ದಾರೆ. ಎಫ್‌ಐಡಿ , ಪಹಣಿ ಲಿಂಕ್‌ ಆಗಿಲ್ಲ ಅಂತಾರೆ, ಇದಾದ ಮೇಲೆ ಪಹಣಿ, ಬ್ಯಾಂಕ್‌ ಖಾತೆ ಲಿಂಕ್‌ ಆಗಿಲ್ಲ. ಆಧಾರ್ ಸಿಡಿಂಗ್‌ ಆಗಿಲ್ಲ, ಕೆವೈಸಿ ಆಗಿಲ್ಲ ಎಂದೆಲ್ಲಾ ಹೇಳುತ್ತ ಸಾಗಹಾಕುತ್ತಿದ್ದಾರೆ.

ಈಗ ಮತ್ತೊಮ್ಮೆ ಪಹಣಿ, ಆಧಾರ್‌, ಬ್ಯಾಂಕ್‌ ಖಾತೆ ಬುಕ್‌ ಎಲ್ಲವನ್ನ ಸಲ್ಲಿಸಿ ಅಂತ ಡಂಗೂರ ಹಾಕಿದ್ದಾರೆ. ಎರಡೆರಡು ಬಾರಿ ದಾಖಲೆ ಪತ್ರ ನೀಡಿದರೂ ಮತ್ತೆ ಮತ್ತೆ ಕೇಳುತ್ತಿದ್ದಾರೆಂದು ಅಫಜಲಪುರ ತಾಲೂಕಿನ ಮಣ್ಣೂರಿನ ಹಲವಾರು ರೈತರು ಗೋಳಾಡುತ್ತಿದ್ದಾರೆ.

ಮೊದಲೇ ಪರಿಹಾರದ ಲೆಕ್ಕ ಅದ್ಹೇಗ ಮಾಡಿದ್ದಾರೋ ಎಂದು ರೈತರು ಗೋಳಾಡುತ್ತಿರುವಾಗಲೇ ಇದೀಗ ಪರಿಹಾರವೇ ಬಂದಿಲ್ಲವೆಂದು ರೈತರು ತಾಂತ್ರಿಕ ಕಾರಣ ಹಾಗೂ ಸಮನ್ವಯ ಕೊರತಯಿಂದಾಗಿ ಗೋಳಾಡುವಂತಾಗಿದೆ.

ಪರಿಹಾರ ವಿತರಣೆ: ಜಿಲ್ಲೆಯಲ್ಲಿ ಕೃಷಿ ಮತ್ತು ತೋಟಗಾರಿಕೆ ಇಲಾಖೆಯ ಜಂಟಿ ಸಮೀಕ್ಷೇಯ ವರದಿಯಂತೆ ಒಟ್ಟು 3.24 ಲಕ್ಷ ಹೇಕ್ಟರ್ ಪ್ರದೇಶ ಹಾನಿಯಾಗಿದ್ದು, ಎನ್.ಡಿ.ಆರ್.ಎಫ್ ಮಾರ್ಗಸೂಚಿಯಂತೆ ಈಗಾಗಲೆ ಜಿಲ್ಲೆಯ 3,23,318 ರೈತರಿಗೆ 250.97 ಕೋಟಿ ರೂ. ಪಾವತಿಯಾಗಿದೆ. ಜೊತೆಗೆ ರಾಜ್ಯ ಸರ್ಕಾರದಿಂದ ಘೋಷಿಸಿದ ಇನ್ಪುಟ್ ಸಬ್ಸಿಡಿ ಹೆಕ್ಟೇರ್ ಗೆ 8,500 ರು. ಗಳಂತೆ 247.75 ಕೋಟಿ ಪರಿಹಾರ ನೀಡಿದ್ದು, ಒಟ್ಟಾರೆ ಜಿಲ್ಲೆಗೆ 498.73 ಕೋಟಿ ಅತಿವೃಷ್ಠಿ ಪರಿಹಾರ ರೈತರಿಗೆ ವಿತರಣೆಯಾಗಿದೆ.

.....ಬಾಕ್ಸ್‌......

ಪರಿಹಾರ ಕೈಸೇರದ್ದಕ್ಕೆ ನಾನಾ ಕಾರಣಗಳು, ಪರಿಹಾರ ಹೇಗೆ?

ಲಕ್ಷಾಂತರ ರೈತರಿಗೆ ಅದಾಗಲೇ ಪರಿಹಾರ ಕೈ ಸೇರಿ ಒಂದೂವರೆ 2 ತಿಂಗಳಾಗುತ್ತ ಬಂತಾದರೂ ಉಳಿದಂತೆ 12 ಸಾವಿರ ರೈತರಿಗೆ ಪರಿಹಾರವೇ ಸಿಕ್ಕಿಲ್ಲ.

ಇದರಲ್ಲಿ 12,313 ರೈತರಿಗೆ ಬೇರೆ ಬೇರೆ ಕಾರಣಗಳಿಂದಾಗಿ ಪರಿಹಾರ ಪಾವತಿಗೆ ಬಾಕಿ ಇದೆ. ಈ ಪೈಕಿ 10,548 ಜನ ಪರಿಹಾರಕ್ಕೆ ಅರ್ಹರಿದ್ದು, ತಾಂತ್ರಿಕ ಸಮಸ್ಯೆಯಿಂದಾಗಿ ಇವರಿಗೆ ಪರಿಹಾರ ಕನ್ನಡಿ ಗಂಟಾಗಿದೆ. ಪರಿಹಾರ ಬಂದಿದೆ ಎಂದು ಗೊತ್ತಾದರೂ ಅವರ ಖಾತೆಗೆ ಜಮಾ ಆಗುತ್ತಿಲ್ಲ!

ಆಧಾರ್‌, ಬ್ಯಾಂಕ್‌ ಖಾತೆ, ಪಹಣಿ, ಎಫ್‌ಐಡಿ ಪರಸ್ಪರ ಜೋಣೆಯಾಗಿಲ್ಲವೆಂಬುದು ಪ್ರಮುಖ ಕಾರಣವಾಗಿದೆ. ಇದಲ್ಲದೆ ಸ್ಥಳೀಯವಾಗಿ ತಲಾಟಿಗಳು, ನಾಡ್‌ ಕಚೇರಿ, ರೈತ ಸಂಪರ್ಕ ಕೇಂದ್ರದಲ್ಲಿಯೂ ರೈತರು ಹೋದಾಗ ಜೋಡಣೆಯ ಸೇವೆ ನೀಡುನಲ್ಲಿಯೂ ತುಂಬ ಸತಾಯಿಸುತ್ತಿರೋದು ಸಹ ತಾಂತ್ರಿಕ ಸಮಸ್ಯೆ ನಿವಾರಣೆಯಾಗಿ ಬೆಳೆಹಾನಿ ಪರಿಹಾರ ರೈತರ ಖಾತೆಗೆ ಜಮೆ ಆಗಲು ವಿಳಂಬವಾಗುತ್ತಿದೆ.

------------

......ಬಾಕ್ಸ್‌......

ಜಿಲ್ಲಾ ಉಸ್ತುವಾರಿ ಸಚಿವರು ಹೇಳೋದೇನು?

ಜಿಲ್ಲೆಯಲ್ಲಿ 3,23,318 ರೈತರಿಗೆ 250.97 ಕೋಟಿ ರು. ಬೆಳೆಹಾನಿ ಪರಿಹಾರ ಪಾವತಿಯಾಗಿದೆ. 10 ಸಾವಿರಕ್ಕೂ ಹೆಚ್ಚಿನ ರೈತರಿಗೆ ಹಲವು ಸಮಸ್ಯೆಗಳಿಂದ ಪರಿಹಾರ ಪಾವತಿಯಾಗಿಲ್ಲ. ತಾಂತ್ರಿಕ ಸಮಸ್ಯೆ ಬಗೆಹರಿಸಿ ಇವರಿಗೆ ಪರಿಹಾರ ಹಣ ಬಿಡುಗಡೆ ಮಾಡಲಾಗುವುದು. 1,771 ರೈತರ ಪರಿಹಾರ ಹಣ ಪಾವತಿಸಲು ಕೆವೈಸಿ ಪೆಂಡಿಂಗ್, ನಿಷ್ಟ್ರೀಯ ಖಾತೆ, ಖಾತೆ ರದ್ದು, ನಿಖರವಲ್ಲದ ಖಾತೆ, ನಿಷ್ಕ್ರಿಯ ಆಧಾರ್ ಜೋಡಣೆಯಿಂದ ಹೀಗೆ ಅನೇಕ ತಾಂತ್ರಿಕ ಕಾರಣಗಳಿಂದ ವೈಫಲ್ಯವಾದ ರೈತರು ಕೊಡಲೇ ತಮ್ಮ ಸಮಸ್ಯೆಗಳನ್ನು ಸರಿಪಡಿಸಿಕೊಳ್ಳಲು ಗ್ರಾಮಗಳಲ್ಲೆಲ್ಲಾ ಡಂಗೂರ ಸಾರಲಾಗುತ್ತಿದೆ. ರೈತರು ತಮ್ಮ ಖಾತೆ, ಪಹಣಿಗಳ ಸಮಸ್ಯೆ ಪರಿಹರಿಸಿಕೊಳ್ಳಬೇಕು.

- ಪ್ರಿಯಾಂಕ್‌ ಖರ್ಗೆ, ಜಿಲ್ಲಾ ಉಸ್ತುವಾರಿ ಸಚಿವರು, ಕಲಬುರಗಿ ಜಿಲ್ಲೆ

-----------------

........ಬಾಕ್ಸ್‌......

ಚಿತ್ತಾಪುರದಲ್ಲೇ 1, 178 ರೈತರ ಹಾನಿ ಮಾಹಿತಿ ಕೈಬಿಡಲಾಗಿತ್ತು!

ಚಿತ್ತಾಪುರದಲ್ಲೇ ಬೆಳೆಹಾನಿಗೊಳಗಾದ ರೈತರ ಪರಿಹಾರ ಸಮೀಕ್ಷೆಯಲ್ಲಿ ದೋಷವಾಗಿರೋದನ್ನ ಖುದ್ದು ಉಸ್ತುವಾರಿ ಸಚಿವರೇ ಒಪ್ಪಿಕೊಂಡಿದ್ದು ಶೀಘ್ರ ಈ ದೋಷ ಸರಿಪಡಿಸಿಕೊಂಡು ರೈತರಿಗೆ ಪರಿಹಾರ ಪಾವತಿಗೆ ಕ್ರಮ ಜರುಗಿಸಲಾಗುತ್ತದೆ ಎಂದು ಹೇಳಿದ್ದಾರೆ. ಚಿತ್ತಾಪುರದಲ್ಲಿ ಬೆಳೆ ಹಾನಿ ಅನುಭವಿಸಿದ 1178 ರೈತರ ಮಾಹಿತಿಯನ್ನು ಕೈಬಿಡಲಾಗಿತ್ತು. ಇದಕ್ಕೆ ಸಂಬಂಧಿಸಿದ ಅಧಿಕಾರಿಗಳ ವಿರುದ್ಧ ಕ್ರಮಕೈಗೊಂಡಿದ್ದು, ಜೊತೆಗೆ 1178 ಕೈಬಿಟ್ಟ ರೈತರ ಮಾಹಿತಿಯನ್ಮು ಸರ್ಕಾರದ ಅನುಮತಿ ಪಡೆದು ದಿನಾಂಕ 02/01/2026 ರಿಂದ 05/01/2026 ರವರೆಗೆ ಪರಿಹಾರ ತಂತ್ರಾಂಶದಲ್ಲಿ ನಮೂದು ಮಾಡಲಾಗಿದೆ ಎಂದು ಸಚಿವ ಪ್ರಿಯಾಂಕ್‌ ಖರ್ಗೆ ಮಾಹಿತಿ ನೀಡಿದ್ದಾರೆ.

---------------

.....ಬಾಕ್ಸ್‌......

ರೈತರಲ್ಲಿ ಜಾಗೃತಿ ಮೂಡಿಸುವಲ್ಲಿ ವಿಳಂಬವಾಯ್ತೆ?

ಬಹುಕೋಟಿ ಪರಿಹಾರ ರೈತರ ಖಾತೆಗೆ ನೇರವಾಗಿ ವರ್ಗಾವಣೆ ಮಾಡುವ ಪ್ರಕಿಯೆಗೂ ಮುನ್ನವೇ ಆದಾರ್‌, ಪಹಣಿ, ಎಫ್‌ಐಡಿ ಜೋಡಣೆ, ಸೀಡಿಂಗ್‌ನಂತಹ ಪ್ರಕ್ರಿಯೆಗಳ ಬಗ್ಗೆ ರೈತರಲ್ಲಿ ಮುಂಚೆಯೇ ಜಾಗೃತಿ ಮೂಡಿಸುವಲ್ಲಿ ಅಲಕ್ಷತನ ತೋರಿದ್ದೇ ಈ ಎಡವಟ್ಟಿಗೆ ಹಾಗೂ ಪರಿಹಾರ ವಿಳಂಬವಾಗಲು ಕಾರಣವೆಂದು ರೈತರೇ ಗೋಳಾಡುತ್ತಿದ್ದಾರೆ. ರೈತರಿಗೆ ಇವೆಲ್ಲದರ ಬಗ್ಗೆ ತಿಳುವಳಿಕೆ ಇದೆಯಾದರೂ ಒಂದು ಬಾರಿ ಮುನ್ನೆಚ್ಚರಿಕೆ ನೀಡಿ ಪರಿಹಾರ ವಿತರಿಸಿದ್ದರೆ ಸಮಸ್ಯೆ ಕಡಿಮೆ ಇರುತ್ತಿತ್ತು ಎಂದು ರೈತರು ಹೇಳಿದ್ದಾರೆ. ಕೃಷಿ, ಕಂದಾಯ, ತೋಟಗಾರಿಕೆ ಅಧಿಕಾರಿಗಳು ಪರಿಹಾರ ಲೆಕ್ಕ ಹಾಕಿದ್ದು ಸಾವಿರಾರು ರೈತರಿಗೆ ಇಂದಿಗೂ ತಿಳಿಯುತ್ತಿಲ್ಲ. ಪರಿಹಾರ ಅದೆಷ್ಟಾದರೂ ಬಂತಲ್ಲ ಎಂದು ಸಮಾಧಾನದಲ್ಲಿದ್ದಾರೆ. ಆದರೆ, ನಾನಾ ಕಾರಣಗಳಿಂದಾಗಿ ಪರಿಹಾರವೇ ಜಮೆ ಆಗದೆ ಸಾವಿರಾರು ರೈತರು ಕಂಗಾಲಾಗಿ ಕಂದಾಯ, ಕೃಷಿ ಇಲಾಖೆ ಕಚೇರಿ ಅಲೆಯುವಂತಾಗಿದೆ.

ಫೋಟೋ- ಪ್ರಿಯಾಂಕ್‌ ಖರ್ಗೆ, ಜಿಲ್ಲಾ ಉಸ್ತುವಾರಿ ಸಚಿವರು, ಕಲಬುರಗಿ

ಫೋಟೋ- ಕ್ರಾಪ್‌

ಭಾರಿ ಮಳೆಗೆ ಕಲಬುರಗಿಯಲ್ಲಿ 2 ಬಾರಿ ರೈತರ ಬೆಳೆದು ನಿಂತಿದ್ದ ಬೆಳೆಹಾನಿಯಾದ ನೋಟ. ಸಂಗ್ರಹ ಚಿತ್ರರೈತರು ಕೆಲಸ ಬಿಟ್ಟು ಬ್ಯಾಂಕ್‌, ತಲಾಟಿ, ನಾಡ ಕಚೇರಿ, ತಾಲೂಕು ಕಚೇರಿ,

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕ್ಷೇತ್ರದ ಕೆಲಸವನ್ನು ತಲೆಮೇಲೆ ಹೊತ್ತು ಮಾಡುವೆ
ಜಾತಿ ವೈಷಮ್ಯಕ್ಕೆ ಅವಕಾಶವಿಲ್ಲ:ಡಾ. ತೌಫೀಕ್‌ ಪಾರ್ಥನಳ್ಳಿ