ಕನ್ನಡಪ್ರಭ ವಾರ್ತೆ ಸಂಡೂರು
ಪರಿಶಿಷ್ಟ ಪಂಗಡಗಳ ಕಲ್ಯಾಣ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವ ಬಿ. ನಾಗೇಂದ್ರ ಅವರು ಶಾಸಕ ಈ. ತುಕಾರಾಂ ಅವರೊಂದಿಗೆ ಶನಿವಾರ ತಾಲೂಕಿನ ಸೋಮಲಾಪುರ ಹಾಗೂ ಸೋವೇನಹಳ್ಳಿಯಲ್ಲಿ ಬರಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ, ಬೆಳೆಹಾನಿ ಪರಿಶೀಲಿಸಿದರು.ಸೋಮಲಾಪುರದ ರೈತ ಬಾರಿಕರ ಯರಿಸ್ವಾಮಿ ಅವರು ತಮ್ಮ ನಾಲ್ಕು ಎಕರೆ ಪ್ರದೇಶದಲ್ಲಿ ಮೆಕ್ಕೆಜೋಳ ಬೆಳೆಯಲು ಸುಮಾರು ಒಂದು ಲಕ್ಷ ರು. ಖರ್ಚು ಮಾಡಿದ್ದೇನೆ. ಮಳೆ ಕೊರತೆಯಿಂದ ಬೆಳೆ ಕೈಕೊಟ್ಟಿದೆ. ತೆನೆಯಲ್ಲಿ ಕಾಳು ಕಟ್ಟಿಲ್ಲ. ಎಲ್ಲ ಜೊಳ್ಳಾಗಿವೆ. ಮೇವಿನಲ್ಲೂ ಶಕ್ತಿ ಇಲ್ಲದ ಕಾರಣ, ದನಗಳಿಗೆ ಮೇವು ಆಗುವುದಿಲ್ಲ ಎಂದು ಅಳಲನ್ನು ತೋಡಿಕೊಂಡರು.
ಸೋವೇನಹಳ್ಳಿಯ ಕೊಮಾರಪ್ಪ ಮಾತನಾಡಿ, ಮೂರುವರೆ ಎಕರೆಯಲ್ಲಿ ಮೆಕ್ಕೆಜೋಳ ಬೆಳೆದಿದ್ದೆ. ಮಳೆ ಕೊರತೆಯಿಂದ ಬೆಳೆ ಸಂಪೂರ್ಣ ನಷ್ಟವಾಗಿದೆ ಎಂದರು.ಯಶವಂತನಗರದ ರೈತ ಸಂಘದ ಮುಖಂಡ ಬಷೀರ್ ಅವರು ಸಚಿವರಿಗೆ ಮನವಿ ಪತ್ರ ಸಲ್ಲಿಸಿ, ಬರಪರಿಸ್ಥಿತಿಯಿಂದಾಗಿ ಬೆಳೆನಷ್ಟವಾಗಿದೆ. ರೈತರಿಗೆ ಸರ್ಕಾರ ಅನುಕೂಲ ಕಲ್ಪಿಸಬೇಕು. ಬಗರ್‌ಹುಕುಂ ರೈತರಿಗೆ ಪಟ್ಟಾ ನೀಡಬೇಕು. ನೀರಾವರಿ ಇರುವ ರೈತರಿಗೆ ಸಮರ್ಪಕವಾಗಿ ವಿದ್ಯುತ್ ಪೂರೈಸಲು ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು.
ಸಚಿವರು ಕೃಷಿ ಅಧಿಕಾರಿಗಳಿಂದ ತಾಲೂಕಿನಲ್ಲಿ ಬೆಳೆಯುವ ಪ್ರಮುಖ ಬೆಳೆಗಳು, ಮಳೆಯಾಶ್ರಿತ ಪ್ರದೇಶದಲ್ಲಿ ಅಂತರ್ಜಲದ ಲಭ್ಯತೆ ಮುಂತಾದ ಅಂಶಗಳ ಕುರಿತು ಮಾಹಿತಿ ಪಡೆದುಕೊಂಡರು.ಶಾಸಕ ಈ. ತುಕಾರಾಂ ಮಾತನಾಡಿ, ತಾಲೂಕಿನಲ್ಲಿರುವ ಸುಮಾರು ೩೧ ಸಾವಿರ ಹೆಕ್ಟೇರ್ ಕೃಷಿ ಪ್ರದೇಶದಲ್ಲಿ ಶೇ. ೫೦ರಷ್ಟು ಪ್ರದೇಶದಲ್ಲಿ ಮೆಕ್ಕೆಜೋಳ ಬೆಳೆಯುತ್ತಾರೆ. ಇತ್ತೀಚೆಗಿನ ವರ್ಷಗಳಲ್ಲಿ ಮಿಶ್ರ ಬೆಳೆ, ಅಕ್ಕಡಿ ಕಾಳು ಬೆಳೆಯುವುದು ಕಡಿಮೆಯಾಗಿದೆ. ಹೀಗಾಗಿ ರಾಘಾಪುರ ತೋಟಗಾರಿಕಾ ಫಾರಂನಲ್ಲಿ ರೈತರಿಗೆ ತರಬೇತಿ ಕೇಂದ್ರವನ್ನು ಆರಂಭಿಸಲು ಯೋಜನೆ ರೂಪಿಸಲಾಗಿದೆ. ಇಂಗುಗುಂಡಿಗಳನ್ನು ನಿರ್ಮಿಸಲು ಒತ್ತು ನೀಡಬೇಕಿದೆ ಎಂದರು.
ಕೇಂದ್ರದಿಂದ ಮಲತಾಯಿ ಧೋರಣೆ:ಬೆಳೆಹಾನಿ ವೀಕ್ಷಿಸಿ ಪತ್ರಕರ್ತರೊಂದಿಗೆ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವರು, ತಾಲೂಕಿನಲ್ಲಿ ಮಳೆಯಾಶ್ರಿತ ಪ್ರದೇಶದಲ್ಲಿ ಬೆಳೆದ ಬೆಳೆ ಶೇ. ೧೦೦ರಷ್ಟು ನಷ್ಟವಾಗಿದೆ. ಶಾಸಕರು ಮತ್ತು ನಾವು ಮುಖ್ಯಮಂತ್ರಿಗಳಿಗೆ ವರದಿ ನೀಡಲಿದ್ದೇವೆ. ಈಗಾಗಲೆ ಎರಡು ಬಾರಿ ಬೆಳೆ ನಷ್ಟದ ಸರ್ವೆ ನಡೆಸಲಾಗಿದೆ. ಆದರೆ, ಬಿಜೆಪಿಯವರಿಗೆ ಜಿಲ್ಲಾಡಳಿತ ಮತ್ತು ನಮ್ಮ ಮೇಲೆ ವಿಶ್ವಾಸವಿಲ್ಲ. ಈಗಾಗಲೆ ಸಲ್ಲಿಸಲಾದ ವರದಿಗಳು ಅವೈಜ್ಞಾನಿಕ ಎಂದ ಕಾರಣಕ್ಕೆ ಪರಿಶೀಲನೆಗೆ ಬಂದಿದ್ದೇವೆ. ವರದಿಯನ್ನು ಕೇಂದ್ರಕ್ಕೆ ಕಳುಹಿಸಿ ಅವರಿಗೆ ಮನವರಿಕೆ ಮಾಡಿಕೊಡಲಾಗುವುದು. ಕೇಂದ್ರ ಮಲತಾಯಿ ಧೋರಣೆ ಅನುಸರಿಸುತ್ತಿದೆ. ಮಂತ್ರಿಗಳು ಕೇಂದ್ರದ ಮಂತ್ರಿಗಳಿಗೆ ಮನವರಿಕೆ ಮಾಡಲು ದೆಹಲಿಗೆ ತೆರಳಿದರೂ, ಅವರನ್ನು ಭೇಟಿ ಮಾಡಲು ಅವಕಾಶ ಕೊಡುತ್ತಿಲ್ಲ ಎಂದು ಅಸಮಾಧಾನವನ್ನು ಹೊರಹಾಕಿದರು.
ಜಿಲ್ಲಾಧಿಕಾರಿ ಪ್ರಶಾಂತ್‌ಕುಮಾರ್ ಮಿಶ್ರಾ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಣಾಧಿಕಾರಿ ರಾಹುಲ್ ಶರಣಪ್ಪ ಸಂಕನೂರ್, ಜಂಟಿ ಕೃಷಿ ನಿರ್ದೇಶಕ ಡಾ. ಮಲ್ಲಿಕಾರ್ಜುನ, ಕೃಷಿ ಇಲಾಖೆಯ ಉಪನಿರ್ದೇಶಕ ಕೇಂಗೇಗೌಡ, ಸಹಾಯಕ ಕೃಷಿ ನಿರ್ದೇಶಕ ಮಂಜುನಾಥರೆಡ್ಡಿ, ತೋಟಗಾರಿಕೆ ಉಪನಿರ್ದೇಶಕ ಸಂತೋಷ್, ಸಹಾಯಕ ತೋಟಗಾರಿಕೆ ನಿರ್ದೇಶಕ ಹನುಮಪ್ಪ ನಾಯಕ, ತಹಸೀಲ್ದಾರ್ ಜಿ. ಅನಿಲ್‌ಕುಮಾರ್, ತಾಲೂಕು ಪಂಚಾಯಿತಿ ಇಒ ಎಚ್. ಷಡಾಕ್ಷರಯ್ಯ, ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.