ಕನ್ನಡಪ್ರಭ ವಾರ್ತೆ ಕಲಬುರಗಿ
ಕಲ್ಯಾಣ ಕರ್ನಾಟಕ ಉತ್ಸವದಲ್ಲಿ ಭಾಗಿಯಾಗಲು ಕಲಬುರಗಿಗೆ ಆಗಮಿಸಿರುವ ಮುಖ್ಯಮಂತ್ರಿಗಳು ಬುಧವಾರ ಕಲಬುರಗಿ ತಾಲೂಕಿನ ಫರಹತಾಬಾದ ಗ್ರಾಮದ ರೈತರ ಹೊಲಗದ್ದೆಗಳಿಗೆ ಖುದ್ದು ಭೇಟಿ ನೀಡಿ ಬೆಳೆ ಹಾನಿ ಪ್ರದೇಶ ವೀಕ್ಷಿಸಿದರು.
ರೈತ ಚೆನ್ನಬಸಪ್ಪ ಮತ್ತು ಸೂರ್ಯಕಾಂತ ಅವರ ಜಂಟಿ ಹೆಸರಿನಲ್ಲಿರುವ ಸರ್ವೆ ನಂ.50ರ 27 ಎಕರೆ 23 ಗುಂಟೆಯಲ್ಲಿ ಬೆಳೆಯಲಾದ ತೊಗರಿ ಬೆಳೆ ಕೊಚ್ಚಿ ಹೋಗಿದ್ದನ್ನು ವೀಕ್ಷಿಸಿದರು.ಬೆಳೆ ಚೆನ್ನಾಗಿದ್ದರೆ ಎಕರೆಗೆ 5-6 ಚೀಲ ತೊಗರಿ ಬೆಳೀತಿತ್ತು ಎಂದು ರೈತರು ಸಿದ್ದರಾಮಯ್ಯನವರ ಮುಂದೆ ಗೋಳಾಡಿದರು. ಡಿಸಿ ಫೌಜಿಯಾ ತರನ್ನುಮ್, ಜಂಟಿ ಕೃಷಿ ನಿರ್ದೇಶಕ ಸಮದ್ ಪಟೇಲ್ ಅವರು ಬೆಳೆ ಹಾನಿ ಕುರಿತು ಮಾಹಿತಿ ನೀಡಿದರು.
ಕಲ್ಯಾಣ ಕರ್ನಾಟಕ ಭಾಗದ ಕಲಬುರಗಿ, ಬೀದರ, ಜಿಲ್ಲೆಯಲ್ಲಿ ಶೇ.50 ರಷ್ಟು ಹೆಚ್ಚುವರಿ ಮಳೆಯಿಂದ ಬೆಳೆ ಹಾನಿಯಾಗಿದ್ದು, ಈಗಾಗಲೆ ಜಂಟಿ ಸಮೀಕ್ಷೆಗೆ ಸೂಚಿಸಲಾಗಿದೆ. ವರದಿ ಬಂದ ನಂತರ ಬೆಳೆ ಪರಿಹಾರ ಬಿಡುಗಡೆಗೆ ಕ್ರಮವಹಿಸಲಾಗುವುದು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸುತ್ತ ಹೇಳಿದರು.
ಕಳೆದ 2024-25ನೇ ಸಾಲಿನಲ್ಲಿ ಬೆಳೆ ವಿಮೆ ಯೋಜನೆಯಡಿ ದಾಖಲೆ ಪ್ರಮಾಣದಲ್ಲಿ ಜಿಲ್ಲೆಗೆ 650 ಕೋಟಿ ಪರಿಹಾರ ಒದಗಿಸಿದೆ. ಜಂಟಿ ಸಮೀಕ್ಷೆ ಒಂದು ವಾರದಲ್ಲಿ ಪೂರ್ಣಗೊಳ್ಳಲಿದೆ. ವರದಿ ಸರ್ಕಾರಕ್ಕೆ ಬಂದ ಬಳಿಕ ಬೆಳೆ ಪರಿಹಾರದ ಕುರಿತು ಸೂಕ್ತ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದರು.
ಕಳೆದ ವರ್ಷ ಅತಿವೃಷ್ಟಿ ಹಾನಿಗೆ ಎನ್.ಡಿ.ಆರ್.ಎಫ್ ಮಾರ್ಗಸೂಚಿಯಂತೆ ಪರಿಹಾರ ನೀಡಲು ಕೇಂದ್ರಕ್ಕೆ ಪತ್ರ ಬರೆದು ಸ್ವತ ಖುದ್ದಾಗಿ ಕೇಂದ್ರದ ಗೃಹ ಸಚಿವ ಅಮಿತ್ ಶಾ, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮ ಅವರಿಗೆ ಮನವಿ ಸಲ್ಲಿಸಿದರೂ ಆದರೆ, ಪರಿಹಾರ ದೊರಕಲಿಲ್ಲ. ಕೊನೆಗೆ ಸುಪ್ರೀಂಕೋರ್ಟ್ ಮೆಟ್ಟಿಲೇರಿ ಪರಿಹಾರ ಪಡೆಯಬೇಕಾಯಿತು ಎಂದು ಕೇಂದ್ರ ಸರ್ಕಾರದ ಅಸಹಕಾರದ ಕುರಿತು ಬೇಸರ ವ್ಯಕ್ತಪಡಿಸಿದರು.