ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ
ಪಟ್ಟಣದ ಪ್ರವಾಸಿ ಮಂದಿರದ ಮುಂಭಾಗದ ಹೆದ್ದಾರಿಯ ಬಳಿ ಜಮಾಯಿಸಿದ ಕಬ್ಬು ಬೆಳೆಗಾರರು ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗುತ್ತ ಹೆದ್ದಾರಿಯಲ್ಲಿ ಕೆಲ ಕಾಲ ರಸ್ತೆತಡೆ ನಡೆಸಿದರು. ರಾಜ್ಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಹಳ್ಳಿಕೆರೆಹುಂಡಿ ಭಾಗ್ಯರಾಜ್ ಮಾತನಾಡಿ, ಮೈಸೂರು,ಚಾಮರಾಜನಗರ ಜಿಲ್ಲಾ ವ್ಯಾಪ್ತಿಯಲ್ಲಿ ಮಳೆ, ಗಾಳಿಗೆ ೨ ಸಾವಿರ ಹೆಕ್ಟೇರ್ ಬಾಳೆ ನಾಶವಾಗಿದ್ದು, ರೈತರ ಸಮಸ್ಯೆ ಆಲಿಸಿಲ್ಲ ಎಂದು ಆರೋಪಿಸಿದರು.
ಲೋಕಸಭೆ ಚುನಾವಣೆ ನೀತಿ ಸಂಹಿತೆ ನೆಪಯೊಡ್ಡಿ ರೈತರ ಬೆಳೆ ನಷ್ಟ ಅಂದಾಜು ಮಾಡುವಲ್ಲಿ ಜಿಲ್ಲಾಡಳಿತ ವಿಫಲವಾಗಿದೆ. ಜನಪ್ರತಿನಿಧಿಗಳು ಕೂಡ ರೈತರ ಪರವಾಗಿ ಮಾತನಾಡುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.ಜಿಲ್ಲಾಡಳಿತ ವಿಫಲ: ಮಳೆ, ಬಿರುಗಾಳಿಗೆ ಹಾನಿಯಾದ ನೊಂದ ರೈತರಿಗೆ ಜಿಲ್ಲಾಡಳಿತ ವಿಶೇಷ ಪ್ಯಾಕೇಜ್ ಘೋಷಿಸಲು ಸರ್ಕಾರದ ಹಂತದಲ್ಲಿ ವಿಫಲವಾಗಿದೆ. ರೈತರು ಜಾಗೃತರಾಗಿ ಅಧಿಕಾರಿಗಳಿಗೆ ಮಾಹಿತಿ ನೀಡಬೇಕು. ಮುಂದಿನ ದಿನಗಳಲ್ಲಿ ಸರ್ಕಾರಕ್ಕೆ ಜಿಲ್ಲಾಡಳಿತ ವರದಿ ತಯಾರಿಸಿ ವಿಶೇಷ ಪ್ಯಾಕೇಜ್ ವರದಿ ಸಲ್ಲಿಬೇಕು. ಪ್ರತಿ ಎಕರೆಗೆ ಒಂದು ಲಕ್ಷ ಬೆಳೆ ನಷ್ಟ ತುಂಬಿಕೊಡಬೇಕು ಎಂದರು.