ಹಿರಿಯೂರು: ಬೆಳೆವಿಮೆ ಪರಿಹಾರ ತಾರತಮ್ಯ ಸರಿಪಡಿಸುವಂತೆ ಒತ್ತಾಯಿಸಿ ತಾಲೂಕಿನ ಖಂಡೇನಹಳ್ಳಿ ಗ್ರಾಮದ ರೈತರು ಪಂಚಾಯಿತಿ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿದರು.
2023-2024ನೇ ಸಾಲಿನ ಮುಂಗಾರು ಹಂಗಾಮಿನ ಮಳೆಯಾಶ್ರಿತ ಬೆಳೆಗಳಿಗೆ ರೈತರು ವಿಮೆ ಪಾವತಿಸಿದ್ದು, ಮಳೆ ಕೊರತೆಯಿಂದ ಬೆಳೆ ನಷ್ಟ, ಇಳುವರಿ ಕುಸಿತ, ಸೂಕ್ತ ಬೆಲೆ ಇಲ್ಲದೆ ರೈತರು ಸಂಕಷ್ಟಕ್ಕೆ ಸಿಲುಕಿದ್ದು, ಗಾಯದ ಮೇಲೆ ಬರೆ ಎಳೆದಂತೆ ಬೆಳೆವಿಮೆ ಪರಿಹಾರದಲ್ಲಿ ರೈತರಿಗೆ ಅನ್ಯಾಯವಾಗಿದೆ ಎಂದು ಗ್ರಾಮ ಪಂಚಾಯಿತಿ ವ್ಯಾಪ್ತಿ ರೈತರು ಆರೋಪಿಸಿದರು.ಕೋಟಿಗಟ್ಟಲೆ ಬೆಳೆವಿಮೆ ಪ್ರೀಮಿಯಂ ಪಾವತಿಯಾದರೂ ಸಹ ರೈತರಿಗೆ ದೊರೆಯಬೇಕಾದ ಬೆಳೆ ವಿಮೆ ಸಿಕ್ಕಿಲ್ಲ. ಇದೊಂದು ರೀತಿ ಲಾಟರಿ ದಂಧೆಯಂತಾಗಿದೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದರು.ಜಿಲ್ಲೆಯ ಅತಿ ಹಿಂದುಳಿದ ಬರಪೀಡಿತ, ಕಡಿಮೆ ಮಳೆ ಬೀಳುವ ಹೋಬಳಿ ಎಂಬ ಹಣೆಪಟ್ಟಿ ಪಡೆದಿರುವ ಧರ್ಮಪುರ ಹೋಬಳಿ ಖಂಡೇನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ರೈತರಿಗೆ ಶೇ.9.42ರಷ್ಟು ಹಾಗೇ ಎಕರೆಗೆ 2 ಸಾವಿರ ರು. ಪಾವತಿಯಾಗಿದೆ. ತಾಲೂಕಿನಲ್ಲಿನ 4ರಿಂದ 5 ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮದ ರೈತರಿಗೆ ಶೇ.10ಕ್ಕಿಂತ ಕಡಿಮೆ ಬೆಳೆವಿಮೆ ಪಾವತಿಯಾಗಿದೆ ಎನ್ನಲಾಗಿದೆ.
ಅಬ್ಬಿನಹೊಳೆಗೆ ಶೂನ್ಯ, ಖಂಡೇನಹಳ್ಳಿ ಗ್ರಾಮದ ಜಮೀನಿಗೆ ಹೊಂದಿಕೊಂಡಿರುವ ಪಿ.ಡಿ.ಕೋಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜಮೀನಿನ ರೈತರಿಗೆ ಎಕರೆಗೆ 13 ಸಾವಿರ ರು. ವಿಮೆ ಪರಿಹಾರ ಸಿಕ್ಕಿದೆ. ನಮಗೇಕೆ ಈ ಅನ್ಯಾಯ. ಅಧಿಕಾರಿಗಳ ಬೇಜವಾಬ್ದಾರಿ, ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದ ಪ್ರತಿ ವರ್ಷ ಬೆಳೆ ವಿಮೆ ಪರಿಹಾರದಲ್ಲಿ ಅನ್ಯಾಯವಾಗುತ್ತಿದ್ದು, ಸಂಬಂಧಿಸಿದ ಅಧಿಕಾರಿಗಳನ್ನು ಕೇಳಿದರೆ ಹಾರಿಕೆ ಉತ್ತರ ನೀಡುತ್ತಾರೆ. ಜಿಲ್ಲಾ ಸಚಿವರ ಗಮನಕ್ಕೆ ತಂದರೆ ಕೇಂದ್ರದ ಕಡೆ ಬೆರಳು ತೋರಿಸುತ್ತಾರೆ. ಯಾರ ಬಳಿ ನ್ಯಾಯ ಕೇಳಬೇಕು ಎಂಬುದು ಗೊತ್ತಾಗದಂತಾಗಿದೆ ಎಂದು ಕೆಲ ಗ್ರಾಮ ಪಂಚಾಯಿತಿಗಳಲ್ಲಿ ರೈತರಿಗೆ ಬೆಳೆ ವಿಮೆಯಾಗಿ ಬಂದಿರುವ ಮೊತ್ತ ಅವರು ತುಂಬಿದ ಪ್ರೀಮಿಯಂ ಕಂತಿಗೂ ಕಡಿಮೆ ಇರುವುದು ದುರಂತದ ಸಂಗತಿ. ಜನಪ್ರತಿನಿಧಿಗಳು, ಸಂಬಂಧಿಸಿದ ಅಧಿಕಾರಿಗಳು ಎಚ್ಚೆತ್ತುಕೊಂಡು ತಾರತಮ್ಯ ಸರಿಪಡಿಸಬೇಕು ಇಲ್ಲದಿದ್ದರೆ ಲೋಕಸಭಾ ಚುನಾವಣೆ ಬಹಿಷ್ಕಾರ ಮಾಡಲಾಗುವುದು ಎಂದು ರೈತರು ಎಚ್ಚರಿಸಿದರು. ಈ ಸಂದರ್ಭದಲ್ಲಿ ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಕೆ.ಎಸ್.ವೀರಣ್ಣ, ರೈತ ಮುಖಂಡರಾದ ರಘುವೀರ್, ನಿಜಲಿಂಗಪ್ಪ, ಶೇಖರ್, ನರಸಿಂಹಮೂರ್ತಿ, ವೆಂಕಟಪ್ಪ, ಆರ್.ಎಂ.ಗೌಡ, ಗೋವಿಂದರಾಜ್, ಡಿ.ಎಂ.ದಾಸರಿ, ಭೂತಣ್ಣ, ಕುಮಾರ್, ತಿಮ್ಮಣ್ಣ, ಚಿತ್ತಪ್ಪ, ಹೊಂಬಾಳಪ್ಪ, ಕೃಷ್ಣಮೂರ್ತಿ ಮುಂತಾದವರು ಹಾಜರಿದ್ದರು.