ಬೆಳೆವಿಮೆ ಅಕ್ರಮ: ತನಿಖೆ ನಡೆಸಿ 2 ತಿಂಗಳಲ್ಲಿ ವರದಿ ನೀಡಿ: ಸಚಿವ ಶಿವಾನಂದ ಪಾಟೀಲ

KannadaprabhaNewsNetwork |  
Published : Sep 10, 2025, 01:03 AM IST
ಹಾವೇರಿಯ ಜಿಪಂ ಸಭಾಂಗಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ಅವರು ತ್ರೈಮಾಸಿಕ ಕೆಡಿಪಿ ಪ್ರಗತಿ ಪರಿಶೀಲನಾ ಸಭೆ ನಡೆಸಿದರು. | Kannada Prabha

ಸಾರಾಂಶ

ಶಿಗ್ಗಾಂವಿ ತಾಲೂಕಿನಲ್ಲೇ ನಕಲಿ ಆರ್‌ಟಿಸಿ ಬಳಸಿ ನೂರಾರು ಎಕರೆಯಲ್ಲಿ ಬೆಳೆವಿಮೆ ಪಡೆದುಕೊಳ್ಳುತ್ತಿದ್ದಾರೆ ಎಂದ ದೂರುಗಳಿವೆ. ಈ ಜಾಲ ಹೇಗೆ ನಡೆಯುತ್ತೆ. ಇದರಲ್ಲಿ ಅಧಿಕಾರಿಗಳು ಹಾಗೂ ವಿಮಾ ಕಂಪನಿಯವರು ಸಹ ಶಾಮೀಲಾಗಿರಬಹುದು. ಹೀಗಾಗಿ ಈ ಬಗ್ಗೆ ತನಿಖೆ ನಡೆಸಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ಸೂಚಿಸಿದರು.

ಹಾವೇರಿ: ನಕಲಿ ಆರ್‌ಟಿಸಿ ಉತಾರ ಬಳಸಿ ಕೆಲವರು ಬೆಳೆವಿಮೆ ಪಡೆದುಕೊಳ್ಳುತ್ತಿದ್ದು, ಕೆಲವರಿಗೆ ಮಾತ್ರವೇ ಪ್ರತಿವರ್ಷ ಬೆಳೆ ವಿಮೆ ಬರುತ್ತದೆ ಎಂಬ ದೂರುಗಳಿವೆ. ಈ ಬಗ್ಗೆ ಉನ್ನತ ಅಧಿಕಾರಿಗಳ ತಂಡ ರಚಿಸಿ ಎರಡು ತಿಂಗಳೊಳಗೆ ಸಮಗ್ರವಾಗಿ ತನಿಖೆ ನಡೆಸಿ ವರದಿ ನೀಡುವಂತೆ ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ನಿರ್ದೇಶನ ನೀಡಿದರು.ಇಲ್ಲಿನ ಜಿಪಂ ಸಭಾಂಗಣದಲ್ಲಿ ಮಂಗಳವಾರ ನಡೆದ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಶಿಗ್ಗಾಂವಿ ತಾಲೂಕಿನಲ್ಲೇ ನಕಲಿ ಆರ್‌ಟಿಸಿ ಬಳಸಿ ನೂರಾರು ಎಕರೆಯಲ್ಲಿ ಬೆಳೆವಿಮೆ ಪಡೆದುಕೊಳ್ಳುತ್ತಿದ್ದಾರೆ ಎಂದ ದೂರುಗಳಿವೆ. ಈ ಜಾಲ ಹೇಗೆ ನಡೆಯುತ್ತೆ. ಇದರಲ್ಲಿ ಅಧಿಕಾರಿಗಳು ಹಾಗೂ ವಿಮಾ ಕಂಪನಿಯವರು ಸಹ ಶಾಮೀಲಾಗಿರಬಹುದು. ಹೀಗಾಗಿ ಈ ಬಗ್ಗೆ ತನಿಖೆ ನಡೆಸಿ ಎಂದು ಸೂಚಿಸಿದರು.ಶಾಸಕರಾದ ಶ್ರೀನಿವಾಸ ಮಾನೆ, ಯಾಸೀರ್‌ ಅಹ್ಮದ್ ಖಾನ್‌ ಪಠಾಣ ಮಾತನಾಡಿ, ಕೆಲ ರೈತರಿಗೆ ಪ್ರತಿವರ್ಷ ಬೆಳೆವಿಮೆ ಬರುತ್ತೆ. ಅವರಿಗೆ ಇದೇ ಬೆಳೆಗೆ ವಿಮೆ ಬರುತ್ತೆ ಎಂಬ ಮಾಹಿತಿ ಮೊದಲೇ ಬರುತ್ತೆ. ಶಿಗ್ಗಾಂವಿ ಭಾಗದಲ್ಲಿ ಕೆಲವೊಬ್ಬರು ನಕಲಿ ಆರ್‌ಟಿಸಿ ಬಳಸಿ 500ಕ್ಕೂ ಹೆಚ್ಚು ಎಕರೆ ಪ್ರದೇಶದ ಬೆಳೆವಿಮೆ ಪಡೆದುಕೊಳ್ಳುತ್ತಿದ್ದಾರೆ. ಇದರಲ್ಲಿ ಕೃಷಿ ಇಲಾಖೆಯವರು, ವಿಮಾ ಕಂಪನಿಯವರು ಶಾಮೀಲರಾಗಿದ್ದಾರೆ. ಹೀಗಾಗಿ ಇವರನ್ನು ಹೊರಗಿಟ್ಟು ಬೇರೆ ಅಧಿಕಾರಿಗಳಿಂದ ತನಿಖೆ ಮಾಡಿಸಬೇಕು ಎಂದು ಒತ್ತಾಯಿಸಿದರು.ಶಾಸಕರಾದ ಯು.ಬಿ. ಬಣಕಾರ, ಪ್ರಕಾಶ ಕೋಳಿವಾಡ ಮಾತನಾಡಿ, ಯಾವ ಹೋಬಳಿ, ಗ್ರಾಪಂ ವ್ಯಾಪ್ತಿಯಲ್ಲಿ ಯಾವ ಸರ್ವೆ ನಂಬರ್‌ನಲ್ಲಿ ಬೆಳೆ ಕಟಾವು ಪರೀಕ್ಷೆ ನಡೆಸಿ ಬೆಳೆವಿಮೆ ಲೆಕ್ಕಾಚಾರ ಹಾಕಲಾಗುತ್ತೆ ಎಂಬ ಮಾಹಿತಿಯನ್ನು ರೈತರಿಗೆ ಮಾಹಿತಿ ನೀಡಬೇಕು ಎಂದು ಆಗ್ರಹಿಸಿದರು.ಆಗ ಪ್ರತಿಕ್ರಿಯಿಸಿದ ಡಿಸಿ ಡಾ. ವಿಜಯಮಹಾಂತೇಶ ದಾನಮ್ಮನವರ, ಬೆಳೆ ಕಟಾವು ಪರೀಕ್ಷೆಯ ಕುರಿತು ಮೊದಲೇ ಮಾಹಿತಿ ನೀಡಿದರೆ ರೈತರು ಸೇರಿ ಗಲಾಟೆ ಆಗುವ ಸಾಧ್ಯತೆ ಇರುತ್ತದೆ. ಹೀಗಾಗಿ ಪರೀಕ್ಷೆಯ ಮಾಹಿತಿ ನೀಡಬಾರದು ಎಂಬ ನಿಯಮ ಇದೆ. ಆದರೆ, ಯಾವ ಸರ್ವೆ ನಂಬರ್‌ನಲ್ಲಿ ಪರೀಕ್ಷೆ ಮಾಡಲಾಗಿದೆ ಎಂಬುದರ ಮಾಹಿತಿಯನ್ನು ಗ್ರಾಪಂನಲ್ಲಿ ಹಾಕಲು ಕ್ರಮ ಕೈಗೊಳ್ಳಲಾಗುವುದು ಎಂದರು.ಶಿಕ್ಷೆ ಆಗುವಂತೆ ನೋಡಿಕೊಳ್ಳಿ: ರಾಣಿಬೆನ್ನೂರಿನಲ್ಲಿ ಕಳಪೆ ಬೀಜ ಮಾರಾಟ ಮಾಡಿದವರ ವಿರುದ್ಧ ಇನ್ನೂ ಏಕೆ ಚಾರ್ಜ್‌ಶೀಟ್‌ ಹಾಕಿಲ್ಲ ಎಂದು ಎಸ್ಪಿ ಹಾಗೂ ಕೃಷಿ ಜೆಡಿ ಅವರನ್ನು ಸಚಿವರು ಪ್ರಶ್ನಿಸಿದರು. ಆಗ ಇಬ್ಬರೂ ಇನ್ನೂ ದಾಖಲಾತಿ ಪರಿಶೀಲನೆ ಹಂತದಲ್ಲಿದೆ ಎಂದಾಗ ಗರಂ ಆದ ಸಚಿವರು, 90 ದಿನದೊಳಗೆ ಚಾರ್ಜ್‌ಶೀಟ್ ಹಾಕಬೇಕು ಎಂಬ ನಿಯಮ ಇದ್ದರೂ ಇನ್ನೂ ಹಾಕಿಲ್ಲ. ನಿಮ್ಮ ಮೇಲೆ ಏಕೆ ಕ್ರಮ ಕೈಗೊಳ್ಳಬಾರದು ಎಂದು ಕಿಡಿಕಾರಿದರು.ಬಳಿಕ ಕೆಲಕಾಲ ಸಮಯ ಪಡೆದು ಪ್ರತಿಕ್ರಿಯಿಸಿದ ಎಸ್ಪಿ ಯಶೋದಾ, ರಾಣಿಬೆನ್ನೂರಿನಲ್ಲಿ ಮಾರಾಟ ಮಾಡಿದ ನಿಸರ್ಗ ಕಂಪನಿಯ ಬೀಜಗಳನ್ನು ಧಾರವಾಡ ಲ್ಯಾಬ್‌ಗೆ ಕಳುಹಿಸಲಾಗಿತ್ತು. ಅಲ್ಲಿಂದ ಬಿತ್ತನೆ ಬೀಜ ಕಳಪೆ ಎಂಬ ದೃಢಪಟ್ಟಿದೆ. ಅವರ ವಿರುದ್ಧ ಚಾರ್ಜ್‌ಶೀಟ್ ಆಗಿದೆ ಎಂದರು.ಆಗ ಪ್ರತಿಕ್ರಿಯಿಸಿದ ಶಾಸಕ ಪ್ರಕಾಶ ಕೋಳಿವಾಡ, ನಕಲಿ ಬೀಜ ಮಾರಾಟ ಮಾಡಿದ್ದಾರೆ ಎಂದು ದೃಢಪಟ್ಟ ಬಳಿಕವೂ ಏಕೆ ಆ ಅಂಗಡಿಗಳ ಬಾಗಿಲು ತೆರೆಯಲು ಅವಕಾಶ ಕೊಟ್ಟಿದ್ದೀರಿ. ಶಾಸಕರು ಡೀಲ್ ಮಾಡಿಕೊಂಡು ಅಂಗಡಿಗಳ ಬಾಗಿಲು ತೆಗೆಸಿದ್ದಾರೆಂದು ರಾಣಿಬೆನ್ನೂರಿನಲ್ಲಿ ಸುದ್ದಿ ಹರದಾಡುತ್ತಿದೆ ಎಂದು ಗರಂ ಆದರು. ಆಗ ಕೃಷಿ ಜೆಡಿ ಅವರು ಬಾಗಿಲು ತೆರೆಯಲು ಡಿಸಿ ಅವರು ಆದೇಶ ಮಾಡಿದ್ದಾರೆ ಎಂದರು. ಆಗ ಡಿಸಿಯವರು ನಾನು ಬಾಗಿಲು ತೆರೆಯಿರಿ ಎಂದು ಆದೇಶಿಸಿಲ್ಲ ಎಂದರು. ಆಗ ಪ್ರತಿಕ್ರಿಯಿಸಿದ ಸಚಿವರು, ಕಳಪೆ ಬೀಜ ಮಾರಾಟ ಮಾಡಿದ್ದಾರೆ ಎಂದು ದೃಢಪಟ್ಟಿರುವ ಅಂಗಡಿಗಳನ್ನು ಇವತ್ತೇ ಬಂದ್ ಮಾಡಿಸಿ, ರಾಜ್ಯಮಟ್ಟದ ಜಾಗೃತ ದಳದ ಅಧಿಕಾರಿಗಳನ್ನು ಕರೆಸಿ ಚರ್ಚಿಸಿ, ಕಳಪೆ ಬೀಜ ಮಾರಾಟ ಮಾಡಿದವರಿಗೆ ಶಿಕ್ಷೆ ಆಗುವಂತೆ ನೋಡಿಕೊಳ್ಳಿ ಎಂದು ತಾಕೀತು ಮಾಡಿದರು.ಕಿವಿ ಹಿಂಡಿ ಗುಂಡಿ ಮುಚ್ಚಿಸ್ತಿನಿ: ಮಳೆ ಬಂದು ಬಹಳಷ್ಟು ರಸ್ತೆಗಳಲ್ಲಿ ಗುಂಡಿ ಬಿದ್ದಿವೆ. ನವೆಂಬರ್‌ನಿಂದ ಜನವರಿ ಒಳಗೆ ಎಲ್ಲ ಗುಂಡಿಗಳನ್ನು ಮುಚ್ಚಿಸಬೇಕು ಎಂದು ತಾಕೀತು ಮಾಡಿದ ಸಚಿವರು, ಯಾವ ಯೋಜನೆಯಡಿ ಎಷ್ಟೆಷ್ಟು ಅನುದಾನ ಬಂದಿದೆ. ಯಾವ್ಯಾವ ಕೆಲಸಗಳು ಶುರುವಾಗಿವೆ ಎಂದು ಪ್ರಶ್ನಿಸಿದಾಗ, ಉತ್ತರ ನೀಡಲು ತಡಬಡಾಯಿಸಿದ ಪಿಡಬ್ಲ್ಯುಡಿ ಇಇ ವಿರುದ್ಧ ಗರಂ ಆದ ಸಚಿವರು, ಸರಿಯಾಗಿ ಗುಂಡಿಗಳನ್ನು ಮುಚ್ಚಿಸದಿದ್ದರೆ ಕಿವಿ ಹಿಂಡಿ ಗುಂಡಿ ಮುಚ್ಚಿಸ್ತಿನಿ ಎಂದು ಹರಿಹಾಯ್ದರು.

ಸಭೆಯಲ್ಲಿ ವಿಧಾನಸಭೆ ಉಪಾಧ್ಯಕ್ಷ, ಶಾಸಕ ರುದ್ರಪ್ಪ ಲಮಾಣಿ, ಗ್ಯಾರಂಟಿ ಪ್ರಾಧಿಕಾರದ ರಾಜ್ಯ ಉಪಾಧ್ಯಕ್ಷ ಎಸ್.ಆರ್. ಪಾಟೀಲ, ಜಿಲ್ಲಾಧ್ಯಕ್ಷ ಎಂ.ಎಂ. ಹಿರೇಮಠ, ಜಿಪಂ ಸಿಇಒ ರುಚಿ ಬಿಂದಲ್ ಇತರರಿದ್ದರು.

PREV

Recommended Stories

ನವೆಂಬರ್‌ ಕ್ರಾಂತಿ ಬಗ್ಗೆ ಚರ್ಚಿಸಿ ದಣಿವು ಮಾಡ್ಕೊಬೇಡಿ - ಶಿವಕುಮಾರ್‌ ಸಲಹೆ
ಹಣೆಯಲ್ಲಿ ಬರೆದಿದ್ದರೆ ಡಿಕೆಶಿ ಸಿಎಂ ಆಗ್ತಾರೆ ಇಲ್ದಿದ್ರೆ ಇಲ್ಲ : ಡಿಕೆಸು