ಬೆಳೆ ವಿಮೆ ಹಣ ಗ್ರಾಪಂ ಅಧಿಕಾರಿಗಳ ಅಕೌಂಟಿಗೆ

KannadaprabhaNewsNetwork | Published : Jul 31, 2024 1:07 AM

ಸಾರಾಂಶ

ರೈತರಿಗೆ ಬರಬೇಕಿರುವ ಲಕ್ಷಾಂತರ ರೂಪಾಯಿ ಬೆಳೆ ಪರಿಹಾರ ಹಣ ಅಧಿಕಾರಿಗಳ ಖಾತೆಗೆ

ಕನ್ನಡಪ್ರಭ ವಾರ್ತೆ ತುರುವೇಕೆರೆ

ತಾಲೂಕಿನ ಮಾಯಸಂದ್ರ ಹೋಬಳಿ ಸೊರವನಹಳ್ಳಿ ಕಂದಾಯ ವೃತ್ತದ ಹೊಣಕೆರೆ ಗ್ರಾಮವೊಂದರಲ್ಲೇ ರೈತರಿಗೆ ಬರಬೇಕಿರುವ ಲಕ್ಷಾಂತರ ರೂಪಾಯಿ ಬೆಳೆ ಪರಿಹಾರ ಹಣ ಅಲ್ಲಿಯ ಗ್ರಾಮ ಲೆಕ್ಕಾಧಿಕಾರಿ, ಗ್ರಾಮ ಸಹಾಯಕ ರವಿಕುಮಾರ್, ಅವರ ಪತ್ನಿ ಹಾಗೂ ಅವರ ಸಂಬಂಧಿಕರ ಹೆಸರಿಗೆ ವರ್ಗಾವಣೆ ಆಗಿದೆ ಎಂದು ತಾಲೂಕು ಡಿಎಸ್ಎಸ್ ಸಂಚಾಲಕ ದಂಡಿನಶಿವರ ಕುಮಾರ್ ಆರೋಪಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ೨೦೨೧- ೨೨ ನೇ ಸಾಲಿನಲ್ಲಿ ರೈತರಿಗಾಗಿ ಬೆಳೆ ಪರಿಹಾರ ನೀಡುವುದಾಗಿ ಸರ್ಕಾರ ಘೋಷಣೆ ಮಾಡಿತ್ತು. ತಾಲೂಕಿನ ಹೊಣಕೆರೆ ಗ್ರಾಮದ ರೈತರಿಗೆ ಬೆಳೆ ಪರಿಹಾರ ನಿಜವಾದ ರೈತರ ಪಾಲಿಗೆ ದೊರೆಯದೇ ಅಲ್ಲಿಯ ಗ್ರಾಮ ಲೆಕ್ಕಿಗರು, ಗ್ರಾಮ ಸಹಾಯಕ ರವಿಕುಮಾರ್, ಅವರ ಪತ್ನಿ ರಮ್ಯ ಸೇರಿದಂತೆ ಅವರ ಸಂಬಂಧಿಕರ ಬ್ಯಾಂಕ್ ಖಾತೆಗಳಿಗೆ ಜಮಾ ಆಗಿದೆ ಎಂದು ದಾಖಲಾತಿಗಳನ್ನು ಪ್ರದರ್ಶಿಸಿದರು.

ಇದು ಕೇವಲ ಹೊಣಕೆರೆ ಗ್ರಾಮದ ಸಮಸ್ಯೆಯಲ್ಲ. ಇಡೀ ತಾಲೂಕಿನಲ್ಲೇ ಇಂತಹ ವ್ಯವಸ್ಥಿತ ಜಾಲದ ಕೈವಾಡವಿದ್ದು ಕೋಟ್ಯಾಂತರ ರೂಪಾಯಿ ಹಲವರ ಖಾತೆಗೆ ಜಮಾ ಆಗಿದೆ. ಕೂಡಲೇ ಜಿಲ್ಲಾಧಿಕಾರಿಗಳು ತನಿಖೆ ನಡೆಸಿ ತಪ್ಪಿತತ್ಸರನ್ನು ಅಮಾನತುಪಡಿಸಿ ಬಂಧಿಸಬೇಕೆಂದು ಆಗ್ರಹಿಸಿದ್ದಾರೆ. ೨೦೨೧-೨೨ ರಿಂದಲೂ ಆಗಿರುವ ಅನ್ಯಾಯದ ಬಗ್ಗೆ ಜಿಲ್ಲಾಧಿಕಾರಿಗಳು ಸೇರಿದಂತೆ ಎಲ್ಲ ಅಧಿಕಾರಿಗಳಿಗೆ ದೂರು ಸಲ್ಲಿಸಲಾಗಿದೆ. ರೈತರಿಗೆ ವಂಚನೆ ಮಾಡಲಾಗಿದೆ. ರೈತರ ಹೆಸರಿನಲ್ಲಿರುವ ಜಮೀನಿನ ಪಹಣಿಯನ್ನು ಪಡೆಯುವ ವಂಚಕರು, ಅವರಿಗೆ ಬೇಕಾದವರ ಆಧಾರ್ ಕಾರ್ಡ್, ಬ್ಯಾಂಕ್ ಅಕೌಂಟ್ ನ ವಿವರಗಳನ್ನು ದಾಖಲೆಗೆ ಲಗತ್ತಿಸಿ ವಂಚಿಸಿದ್ದಾರೆ. ಈ ಸಂಬಂಧ ಎಲ್ಲಾ ದಾಖಲಾತಿಗಳನ್ನು ಮಾಹಿತಿ ಹಕ್ಕಿನಡಿ ಪಡೆಯಲಾಗಿದೆ. ಸೂಕ್ತ ದಾಖಲಾತಿಗಳೊಂದಿಗೆ ಜಿಲ್ಲಾಧಿಕಾರಿಗಳು, ಉಪ ವಿಭಾಗಾಧಿಕಾರಿಗಳು, ತಹಸೀಲ್ದಾರ್ ರವರಿಗೆ ದೂರು ಸಲ್ಲಿಸಿದ್ದರೂ ಸಹ ಪ್ರಯೋಜನವಾಗಿಲ್ಲ ಎಂದು ದೂರಿದ್ದಾರೆ. ಬೃಹತ್ ಜಾಲ: ತಾಲೂಕಿನಲ್ಲಿ ಸಾಕಷ್ಟು ಅವ್ಯವಹಾರಗಳು ನಡೆದಿವೆ. ನ್ಯಾಫೆಡ್ ನಲ್ಲಿ ರಾಗಿ ಖರೀದಿ ಸೇರಿದಂತೆ ಹಲವರು ಕ್ಷೇತ್ರಗಳಲ್ಲಿ ರೈತರಿಗೆ ವಂಚನೆ ಆಗುತ್ತಲೇ ಇದೆ. ಕೂಡಲೇ ಜಿಲ್ಲಾಧಿಕಾರಿಗಳು ವಿಶೇಷಗಮನ ಹರಿಸಿ ಈ ಕುರಿತು ತನಿಖೆಗೆ ಆದೇಶಿಸಬೇಕು. ತಪ್ಪಿದಲ್ಲಿ ತಾಲೂಕು ಕಚೇರಿ ಮುಂಭಾಗ ಹಲವು ಪ್ರಗತಿಪರ ಸಂಘಟನೆಗಳೊಂದಿಗೆ ಉಗ್ರ ಪ್ರತಿಭಟನೆ ಮಾಡುವುದು ಅನಿವಾರ್ಯವಾಗಲಿದೆ ಎಂದು ಎಚ್ಚರಿಕೆ ನೀಡಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ದಲಿತ ಮುಖಂಡರಾದ ಮಲ್ಲೂರು ತಿಮ್ಮೇಶ್, ಹೊಣಕೆರೆ ರಾಮು, ಟಿಬಿ ಕ್ರಾಸ್ ಗೋವಿಂದರಾಜು, ಗುರುದತ್, ಬಿ.ಪುರ ತಮ್ಮಯ್ಯ, ಹೆಗ್ಗರೆ ರಾಮಚಂದ್ರು, ಮುನಿಯೂರು ಮಂಜುನಾಥ್, ಹಳ್ಳದ ಹೊಸಳ್ಳಿ ಮಂಜು, ಶ್ರೀನಿವಾಸ್ ಸೇರಿದಂತೆ ಹಲವರು ಇದ್ದರು.

Share this article