ಬ್ಯಾಡಗಿ: ಕೇವಲ ನಾಲ್ಕು ದಿನಗಳಲ್ಲಿ ರೈತರಿಗೆ ಬೆಳೆಹಾನಿ ಪರಿಹಾರ ನೀಡುವುದಾಗಿ ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ಭರವಸೆ ನೀಡಿದರು.
ಪಟ್ಟಣದಲ್ಲಿ ರೈತ ಸಂಘದ ಮುಖಂಡರೊಂದಿಗೆ ಮಾತನಾಡಿದ ಅವರು, ಜಿಲ್ಲೆಯಲ್ಲಿ ಈಗಾಗಲೇ ಸುಮಾರು 40 ಸಾವಿರಕ್ಕೂ ಹೆಚ್ಚು ರೈತರಿಂದ ಅರ್ಜಿಗಳು ಸಲ್ಲಿಕೆಯಾಗಿದ್ದು, ಅದರಂತೆ ಕೃಷಿ ಇಲಾಖೆ ಹಾಗೂ ಜಿಲ್ಲಾಡಳಿತದಿಂದ ಸರ್ವೇ ಕಾರ್ಯವನ್ನು ಪೂರ್ಣಗೊಳಿಸಿದ್ದು ಅವರು ನೀಡಿದ ವರದಿಯಂತೆ ಬರುವ 4 ದಿನಗಳಲ್ಲಿ ಪರಿಹಾರದ ಮೊತ್ತ ರೈತರ ಖಾತೆಗೆ ನೀಡಲಿದ್ದೇವೆ ಎಂದರು.ಗೋವಿನಜೋಳ ಖರೀದಿಸಿ: ಈ ವೇಳೆ ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಬಳ್ಳಾರಿ ಮಾತನಾಡಿ, ಪ್ರತಿ ಕ್ವಿಂಟಲ್ ಗೋವಿನಜೋಳಕ್ಕೆ ಕನಿಷ್ಠ ಬೆಂಬಲ ಬೆಲೆ (ಎಂಎಸ್ ಪಿ) 2400 ರು.ಗಳನ್ನು ಕೇಂದ್ರ ಸರ್ಕಾರ ನಿಗದಿಪಡಿಸಿದೆ. ಆದರೆ ಮುಕ್ತ ಮಾರುಕಟ್ಟೆಯಲ್ಲಿ ಪ್ರತಿ ಕ್ವಿಂಟಲ್ 1400 ರು.ಗಳಿಂದ 1600 ಗಳಿಗೆ ಮಾರಾಟವಾಗುತ್ತಿದೆ. ಪ್ರಸಕ್ತ ವರ್ಷ ಅತಿವೃಷ್ಟಿಯಿಂದ ಇಳುವರಿ ಕುಂಠಿತವಾಗಿದ್ದು, ಕೈಗೆ ಬಂದಿರುವ ಅಷ್ಟಿಷ್ಟು ಬೆಳೆಗಳನ್ನು ಮಾರಾಟ ಮಾಡಲು ಸಹ ಸಾಧ್ಯವಾಗುತ್ತಿಲ್ಲ, ಮಾರುಕಟ್ಟೆ ದರ ಕುಸಿತದಿಂದ ರೈತರು ಕಂಗಾಲಾಗಿದ್ದೇವೆ. ಕೂಡಲೇ ರಾಜ್ಯ ಸರ್ಕಾರ ಎಂಎಸ್‌ಪಿ ದರಕ್ಕೆ ರಾಜ್ಯ ಸರ್ಕಾರದಿಂದ ರು. 600 ಪ್ರೋತ್ಸಾಹ ಧನ ಸೇರಿಸಿ ರೈತರಿಗೆ ನೀಡಬೇಕು ಹಾಗೂ ರಾಜ್ಯದ ಎಲ್ಲ ಕಡೆಗಳಲ್ಲಿಯೂ ಖರೀದಿ ಕೇಂದ್ರ ಆರಂಭಿಸುವಂತೆ ಆಗ್ರಹಿಸಿದರು.ಕೇಂದ್ರ ಒಪ್ಪಿದರೆ ಸಿದ್ಧ: ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ಶಿವಾನಂದ ಪಾಟೀಲ ಕೇಂದ್ರ ಸೂಚಿಸಿದರೆ ಇಂದಿನಿಂದಲೇ ಖರೀದಿ ಕೇಂದ್ರ ಆರಂಭಿಸಲು ರಾಜ್ಯ ಸರ್ಕಾರ ಸಿದ್ಧವಿದೆ. ಆದರೆ ಖರೀದಿಸಿದ ಗೋವಿನಜೋಳವನ್ನು ಪಡಿತರದಲ್ಲಿ ಸಾರ್ವಜನಿಕರಿಗೆ ವಿತರಿಸುವ ನಿಯಮವಿದೆ. ಇದರಿಂದ ಖರೀದಿಸಿದ ಗೋವಿನಜೋಳವನ್ನು ರಾಜ್ಯದಲ್ಲಿ ಯಾರೂ ಸಹ ಅಡುಗೆ ಕಾರ್ಯಕ್ಕೆ ಬಳಸುವುದಿಲ್ಲ ಇನ್ನೂ ಹೊರಗಿನ ಖಾಸಗಿ ಖರೀದಿಗಾರರು ಅಥವಾ ಎಥನಾಲ್ ತಯಾರಿಸುವ ಕಾರ್ಖಾನೆಗಳಿಗೆ ಮಾರಾಟ ಮಾಡಲು ಮುಂದಾದಲ್ಲಿ ಕೇಂದ್ರ ಸರ್ಕಾರದ ನಿಯಮವು ಅಡ್ಡಿ ಬರುತ್ತಿದೆ. ಇದಕ್ಕೊಂದು ಸ್ಪಷ್ಟ ನಿರ್ದೇಶನ ನೀಡುವಂತೆ ಕೇಂದ್ರಕ್ಕೆ ಪತ್ರ ಬರೆದು ಒತ್ತಾಯಿಸಿದ್ದೇನೆ. ನಿಮ್ಮದೂ ಕೂಡ ಕೇಂದ್ರ ಸರ್ಕಾರಕ್ಕೆ ಒತ್ತಾಯವಿರಲಿ ಎಂದರು.
ರಾಷ್ಟ್ರೀಯ ಹೆದ್ದಾರಿ ತಡೆ: ರೈತ ಸಂಘದ ಜಿಲ್ಲಾಧ್ಯಕ್ಷ ರಾಮಣ್ಣ ಕೆಂಚಳ್ಳೇರ ಮಾತನಾಡಿ, ಬರುವ 8 ದಿನಗಳಲ್ಲಿ ರಾಜ್ಯ ಸರ್ಕಾರ ಗೋವಿನ ಜೋಳ ಖರೀದಿಸದಿದ್ದರೆ ಜಿಲ್ಲೆಯ ಎಲ್ಲಾ ರೈತರೊಂದಿಗೆ ಸಂಘವು ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಸಚಿವರಿಗೆ ಎಚ್ಚರಿಕೆ ನೀಡಿದ ಅವರು, ನಮ್ಮ ರೈತರು ಹೆದ್ದಾರಿಗೆ ಹೋಗುವ ಮುನ್ನವೇ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಸಚಿವರಿಗೆ ಸೂಚಿಸಿದರು. ಈ ಸಂದರ್ಭದಲ್ಲಿ ರೈತ ಮುಖಂಡರಾದ ಗಂಗಣ್ಣ ಎಲಿ, ಮೌನೇಶ ಕಮ್ಮಾರ, ಪ್ರಭುಗೌಡ ಪ್ಯಾಟಿ, ಮರಿಗೌಡ ಪಾಟೀಲ, ದಿಳ್ಳೆಪ್ಪ ಮಣ್ಣೂರ, ಸುರೇಶ ಹೊನ್ನಪ್ಪನವರ, ಶಿವಯೋಗಿ ಹೊಸಗೌಡ್ರ, ಮಹದ್ಮಗೌಸ ಪಾಟೀಲ ಹಾಗೂ ಇನ್ನಿತರರಿದ್ದರು.