೩ನೇ ದಿನದ ಸಂಕಲ್ಪ ಉತ್ಸವಕ್ಕೆ ಚಾಲನೆ ನೀಡಿ ಸಂಕಲ್ಪ ಪ್ರಶಸ್ತಿ ಪ್ರದಾನ
ಕನ್ನಡಪ್ರಭ ವಾರ್ತೆ ಯಲ್ಲಾಪುರಸಮಾಜ ನನಗೇನು ನೀಡಿದೆ ಎನ್ನುವ ಸ್ವಾರ್ಥ ಮನೋಭಾವ ಬೆಳೆಯುತ್ತಿರುವ ಕಾಲಘಟ್ಟದಲ್ಲಿ ಸಂಕಲ್ಪ ಸಂಸ್ಥೆಯ ಮೂಲಕ ಸಮಾಜಕ್ಕಾಗಿ ಸ್ವಾರ್ಥರಹಿತ ಸಂಗೀತ, ಸಾಹಿತ್ಯ, ಕಲೆಯ ಆರಾಧನೆಯನ್ನು ನೀಡುವ ಪ್ರಮೋದ ಹೆಗಡೆಯವರ ಕಾರ್ಯ ಆದರ್ಶಪ್ರಾಯವಾದುದು ಎಂದು ಸಿದ್ದಾಪುರ ಶಿರಳಗಿಯ ಶ್ರೀ ಚೈತನ್ಯ ರಾಜಾರಾಮ ಕ್ಷೇತ್ರದ ಬ್ರಹ್ಮಾನಂದ ಭಾರತೀ ಸ್ವಾಮಿಗಳು ನುಡಿದರು.
ಭಾನುವಾರ ೩ನೇ ದಿನದ ಸಂಕಲ್ಪ ಉತ್ಸವಕ್ಕೆ ಚಾಲನೆ ನೀಡಿ ಸಂಕಲ್ಪ ಪ್ರಶಸ್ತಿ ಪ್ರದಾನ ಮಾಡಿ, ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.ಸನಾತನ ಧರ್ಮ ಒಬ್ಬ ವ್ಯಕ್ತಿಯಿಂದ ಬಂದದ್ದಲ್ಲ. ಅದು ಋಷಿಮುನಿಗಳು ನೀಡಿದ ಧರ್ಮ. ಧರ್ಮ ಎಂದರೆ ಯಾವುದೇ ಜಾತಿಗೆ ಸೀಮಿತವಾದದ್ದಲ್ಲ. ಸನಾತನ ಎಂಬುದು ಹಿಂದೂ, ಇಂದು, ಮುಂದು ಇರುತ್ತದೆ ಎಂದರ್ಥ. ಸಮಾಜದಲ್ಲಿಂದು ವಿಕೃತಿ ಹೆಚ್ಚುತ್ತಿದೆ. ಸುಕೃತಿ ಮತ್ತು ಸಂಸ್ಕೃತಿಯ ಉಳಿವಿಗಾಗಿ ಇಂತಹ ಮೌಲಿಕ ಕಾರ್ಯಕ್ರಮಗಳು ಎಲ್ಲೆಡೆ ನಡೆಯಬೇಕು. ಸುಸಂಸ್ಕೃತವಾದ ಬದುಕು ರೂಪಿತವಾದಾಗ ಮಾತ್ರ ಸತ್ಪ್ರಜೆಯಾಗುವುದಕ್ಕೆ ಸಾಧ್ಯ. ಮಾನವನು ತನ್ನ ಜೀವಿತಾವಧಿಯಲ್ಲಿ ಬದುಕು ಮತ್ತು ಮೋಕ್ಷ ಈ ನೆಲೆಯಲ್ಲಿ ಮುನ್ನಡೆಯಬೇಕಾದರೆ ಪರಮಾತ್ಮನ ಆರಾಧನೆ, ಜಪ-ತಪಗಳಲ್ಲಿ ಸದಾ ನಿರತರಾದರೆ ಶ್ರೇಯಸ್ಸು ಅವನ ಜೊತೆಯಲ್ಲಿರುತ್ತದೆ. ಭಗವಂತನನ್ನು ನಮ್ಮ ಹೃದಯದಲ್ಲಿ ಸ್ಥಾಪಿಸಿಕೊಂಡಾಗ ಮಾತ್ರ ಅವನ ಕೃಪೆ ನಮಗೆ ಲಭಿಸುತ್ತದೆ. ಇಂತಹ ಆರಾಧನೆಯೂ ಯಜ್ಞ ಎಂದು ಹೇಳಲ್ಪಟ್ಟಿದೆ. ಸಾಕ್ಷಾತ್ಕಾರವಾಗಲು ಈ ಎಲ್ಲ ಕಾರ್ಯವನ್ನು ಮಾಡಿದಾಗ ಸಾಧ್ಯ. ಯಾವಾಗ ರಾಮನಾಮ ಜಪದಲ್ಲಿ ನಿತ್ಯ ಭಾಗಿಯಾಗುತ್ತಾನೋ ಅವನ ಸಕಲ ಪಾಪಗಳೂ ನಾಶವಾಗುತ್ತವೆ ಎಂದ ಶ್ರೀಗಳು, ಇಂತಹ ಸಾಂಸ್ಕೃತಿಕ ಹಬ್ಬ ಎಲ್ಲೆಡೆ ನಡೆಯಬೇಕು. ಅಂದಾಗ ಮಾತ್ರ ನಮ್ಮ ಯುವಜನಾಂಗಕ್ಕೆ ನಮ್ಮ ಸಂಸ್ಕೃತಿಯ ಮೌಲ್ಯದ ಅರಿವಾಗಲು ಸಾಧ್ಯ. ಸಂಕಲ್ಪೋತ್ಸವ ಶತಮಾನವನ್ನೂ ದಾಟುವಂತಾಗಲಿ. ಪ್ರಮೋದ ಹೆಗಡೆಯವರ ಕುಟುಂಬ ಮತ್ತು ಬಳಗಕ್ಕೆ ಅದನ್ನು ನಿರಂತರ ನಡೆಸಿಕೊಂಡು ಹೋಗುವ ಶಕ್ತಿಯನ್ನು ಭಗವಂತ ನೀಡಲಿ ಎಂದರು. ಅನಂತ ಪ್ರತಿಷ್ಠಾನದ ಅಧ್ಯಕ್ಷ ಅನಂತಮೂರ್ತಿ ಹೆಗಡೆ ಮಾತನಾಡಿ, ಸಂಕಲ್ಪ ಉತ್ಸವ ಎಂದರೆ ರಾಜ್ಯದಲ್ಲೇ ಹೆಮ್ಮೆಪಡುವ ಕಾರ್ಯಕ್ರಮ. ಆ ದೃಷ್ಟಿಯಿಂದ ಪ್ರಮೋದ ಹೆಗಡೆ ಕುಟುಂಬ ಅತ್ಯಂತ ಮಹತ್ವದ ಪಾತ್ರ ವಹಿಸುತ್ತಿದೆ. ಇದರಿಂದ ನಾನೂ ಸ್ಪೂರ್ತಿಗೊಂಡು ಮುಂಬರುವ ದಿನಗಳಲ್ಲಿ ಶಿರಸಿಯಲ್ಲಿ ಇಂತಹ ಉತ್ಸವಗಳನ್ನು ಮಾಡಲು ಸಂಕಲ್ಪಿಸಿದ್ದೇನೆ ಎಂದರು.
ವೈ.ಟಿ.ಎಸ್.ಎಸ್. ನಿವೃತ್ತ ಪ್ರಾಚಾರ್ಯ ಬೀರಣ್ಣ ನಾಯಕ ಮೊಗಟಾ ಮಾತನಾಡಿ, ಒಂದು ದೇಶದ ಸಂಪತ್ತನ್ನು ಅಳೆಯಲು ಅಲ್ಲಿನ ಸಾಂಸ್ಕೃತಿಕ ಪರಂಪರೆ ಹೇಗಿದೆ ಎನ್ನುವುದರ ಮೇಲೆ ಆ ದೇಶದ ಕುರಿತು ತಿಳಿಯಲು ಸಾಧ್ಯ ಎಂದರು.ಹಿರಿಯರಾದ ಪಿ.ಜಿ. ಹೆಗಡೆ ಕಳಚೆ, ಪಿ.ಜಿ. ಭಟ್ಟ ಬರಗದ್ದೆ ಉಪಸ್ಥಿತರಿದ್ದರು. ಪತ್ರಕರ್ತರಾದ ಸುಬ್ರಾಯ ಬಿದ್ರೆಮನೆ ಮತ್ತು ನರಸಿಂಹ ಸಾತೊಡ್ಡಿ ಅವರಿಗೆ ಶ್ರೀಗಳು ಸಂಕಲ್ಪ ಪ್ರಶಸ್ತಿ ನೀಡಿ ಗೌರವಿಸಿದರು.
ಸಂಚಾಲಕ ಪ್ರಸಾದ ಹೆಗಡೆ ಪ್ರಾಸ್ತಾವಿಕ ಮಾತನಾಡಿದರು. ಶ್ರೀ ಶಾರದಾಂಬಾ ಪಾಠಶಾಲೆಯ ವಿದ್ಯಾರ್ಥಿಗಳು ವೇದಘೋಷ ಪಠಿಸಿದರು. ಪ್ರಸಾದಿನಿ ಭಟ್ಟ ಚಿಕ್ಯಾನಮನೆ ಪ್ರಾರ್ಥಿಸಿದಳು. ಡಾ. ರವಿ ಭಟ್ಟ ಸ್ವಾಗತಿಸಿದರು. ಡಾ. ಜಯರಾಮ ಭಟ್ಟ ನಿರ್ವಹಿಸಿದರು. ರಾಮಚಂದ್ರ ಚಿಕ್ಯಾನಮನೆ ವಂದಿಸಿದರು.