ಕನ್ನಡಪ್ರಭವಾರ್ತೆ ಸೋಮವಾರಪೇಟೆ
ತಾಲೂಕು ಕಚೇರಿಯಲ್ಲಿ ಮಧ್ಯವರ್ತಿಗಳ ಹಾವಳಿಗೆ ಕಡಿವಾಣ ಹಾಕುತ್ತಿಲ್ಲ. ಸಾರ್ವಜನಿಕರ ಕೆಲಸಗಳು ಆಗುತ್ತಿಲ್ಲ ಎಂದು ಕೆಡಿಪಿ ನಾಮನಿರ್ದೇಶಿತ ಸದಸ್ಯರಾದ ಸಬಿತಾ ಚನ್ನಕೇಶವ ಸಭೆಯ ಗಮನಕ್ಕೆ ತಂದರು. ಇದಕ್ಕೆ ಪ್ರತಿಕ್ರಿಯಿಸಿದ ತಹಸೀಲ್ದಾರ್ ಕೃಷ್ಣಮೂರ್ತಿ ಮಧ್ಯವರ್ತಿಗಳಿಂದ ಕೆಲಸ ಮಾಡಿಸಬೇಡಿ. ಏನಾದರೂ ಸಮಸ್ಯೆ ಇದ್ದರೆ ನೇರವಾಗಿ ನನ್ನ ಗಮನಕ್ಕೆ ತನ್ನಿ ಎಂದರು.ವರದಿ ನೀಡಬೇಕು:
ತಾಲೂಕಿನಲ್ಲಿ ಸರ್ಕಾರ ನೀಡುತ್ತಿರುವ ಅಕ್ಕಿ ದುರುಪಯೋಗ ಆಗುತ್ತಿರುವ ಬಗ್ಗೆ ದೂರುಗಳು ಬರುತ್ತಿದ್ದು, ಸೊಸೈಟಿಗಳು, ನ್ಯಾಯಬೆಲೆ ಅಂಗಡಿಗಳು ಹಾಗೂ ಫಲಾನುಭವಿಗಳಿಂದ ಅಕ್ಕಿ ಪಡೆದುಕೊಂಡು ಮಾರಾಟ ಮಾಡುತ್ತಿರುವವರ ಬಗ್ಗೆ ತನಿಖೆ ಆಗಬೇಕಿದೆ. ಹಲವು ಶ್ರೀಮಂತರು, ಸರ್ಕಾರಿ ಇಲಾಖೆಯ ನೌಕರರ ಮನೆಯಲ್ಲೂ ಬಿಪಿಎಲ್ ಕಾರ್ಡ್ ಇದೆ. ಇದರ ಪರಿಶೀಲನೆ ಮಾಡಿ ವರದಿ ನೀಡಬೇಕು ಎಂದು ಶಾಸಕರು ಇಲಾಖೆಯ ಅಧಿಕಾರಿಗೆ ಸೂಚನೆ ನೀಡಿದರು.ಸರ್ವೆ ಇಲಾಖೆಯಲ್ಲಿ ಹೊರಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿರುವವರ ಆರ್ಭಟ ಜಾಸ್ತಿಯಾಗಿದೆ. ಗ್ರಾಮ ನಕಾಶೆಗಳನ್ನು ಸರಿಯಾಗಿ ಗುರುತಿಸುತ್ತಿಲ್ಲ.ಎಡಿಎಲ್‌ಆರ್ ರವರ ಮಾತುಗಳನ್ನು ಸಿಬ್ಬಂದಿ ಕೇಳುತ್ತಿಲ್ಲ. ಆಹಾರ ಇಲಾಖೆಯಲ್ಲಿ ಸಿಬ್ಬಂದಿಗಳೇ ಇಲ್ಲ. ಜನನ ಮರಣ ನೋಂದಣಿ ವಿಭಾಗದ ಕಚೇರಿಯಲ್ಲೂ ಯಾರೂ ಇರುವುದಿಲ್ಲ ಎಂದು ಸೂಡಾ ಅಧ್ಯಕ್ಷ ಕೆ.ಎ.ಆದಂ ಸಭೆಯ ಗಮನಕ್ಕೆ ತಂದರು.ಫಾರ್ಮ್ ನಂಬರ್ 9 ಮತ್ತು 11ರ ಪರಿವರ್ತನೆಗೆ ಸಂಬಂಧಿಸಿದಂತೆ ಅಧಿಕಾರಿಗಳು ಲಂಚದ ಆಮಿಷ ಒಡ್ಡುತ್ತಿದ್ದಾರೆ ಎಂದು ಸಾಕಷ್ಟು ದೂರುಗಳು ಬರುತ್ತಿದ್ದು. ಆರೋಪ ಸಾಬೀತಾದರೆ ಸಂಬಂಧಿಸಿದವರ ಅಮಾನತ್ತಿಗೆ ಶಿಫಾರಸು ಮಾಡಲಾಗುವುದು ಎಂದು ಶಾಸಕರು ಎಚ್ಚರಿಕೆ ನೀಡಿದರು.ಕಟ್ಟಡ ಮತ್ತು ಇತರ ಕಾರ್ಮಿಕರ ಮಕ್ಕಳ ಶ್ರೇಯೋಭಿವೃದ್ಧಿಗೆ ಸೋಮವಾರಪೇಟೆ ತಾಲೂಕಿನ ಚೆನ್ನಾಪುರ ಗ್ರಾಮದಲ್ಲಿ ವಸತಿ ಶಾಲೆ ನಿರ್ಮಾಣಕ್ಕೆ ಐದು ಏಕರೆ ಜಾಗ ಗುರುತಿಸಲಾಗಿದ್ದು, ಸುಮಾರು 40 ಕೋಟಿ ಅನುದಾನ ನೀಡುವುದಾಗಿ ಕಾರ್ಮಿಕ ಸಚಿವ ಸಂತೋಷ್ ಲಾಡ್ ಹೇಳಿದ್ದಾರೆ. ಆದರೆ ಕಾರ್ಮಿಕ ಇಲಾಖೆಯ ಅಧಿಕಾರಿಗಳ ಅಸಡ್ಡೆಯಿಂದಾಗಿ ಇನ್ನೂ ಸಂಬಂಧಪಟ್ಟ ಜಾಗವನ್ನು ಇಲಾಖೆ ಸುಪರ್ದಿಗೆ ತೆಗೆದುಕೊಳ್ಳದಿರುವ ಬಗ್ಗೆ ಶಾಸಕರು ಅಸಮಾಧಾನ ವ್ಯಕ್ತ ಪಡಿಸಿದರು.
ಸೋಮವಾರಪೇಟೆ ಪಟ್ಟಣ ಹಾಗೂ ಸಮೀಪದ ಚೌಡ್ಲು ಮತ್ತು ಹಾನಗಲ್ ಪಂಚಾಯಿತಿ ವ್ಯಾಪ್ತಿಯಲ್ಲಿ ಅನಧಿಕೃತ ಬಹುಮಹಡಿ ಕಟ್ಟಡಗಳು ನಿರ್ಮಾಣವಾಗುತ್ತಿದೆ. ಪ್ರಾಧಿಕಾರದಿಂದ ಯಾವುದೇ ಅನುಮತಿಯನ್ನು ಪಡೆದಿಲ್ಲ. ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಯಾವ ಆಧಾರದಲ್ಲಿ ನಿರಾಕ್ಷೇಪಣಾ ಪತ್ರ ನೀಡಿದ್ದಾರೆ ಎಂದು ಸೂಡಾ ಅಧ್ಯಕ್ಷ ಕೆ.ಎ.ಆದಂ ಸಭೆಯ ಗಮನಕ್ಕೆ ತಂದರು.
ಸಭೆಯಲ್ಲಿ ಆಡಳಿತಾಧಿಕಾರಿ ಅಬ್ದುಲ್ ನಭಿ, ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಪರಮೇಶ್ ಕುಮಾರ್, ತಾಲೂಕು ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ ಜಿ.ಎಂ.ಕಾಂತರಾಜ್ ಇದ್ದರು.