ಹಾನಗಲ್ಲ, ಬ್ಯಾಡಗಿ, ಹಾವೇರಿ ತಾಲೂಕಿನಲ್ಲಿ ಗಾಳಿ, ಅಕಾಲಿಕ ಮಳೆಗೆ ನೆಲಕ್ಕೊರಗಿದ ಫಸಲು

KannadaprabhaNewsNetwork |  
Published : Mar 22, 2025, 02:04 AM IST
21ಎಚ್‌ವಿಆರ್3- | Kannada Prabha

ಸಾರಾಂಶ

ಹಾನಗಲ್ಲ ತಾಲೂಕಿನ ಶ್ಯಾಡಗುಪ್ಪಿ ಗ್ರಾಮದ ಶಿವಯೋಗೆಪ್ಪ ಬಾಳೂರು ಸೇರಿದಂತೆ ವಿವಿಧ ರೈತರ ಜಮೀನಿನಲ್ಲಿದ್ದ ಫಲ ಕೊಡುವ ಹಂತದಲ್ಲಿದ್ದ ಬಾಳೆಗಿಡಗಳು ಬಿರುಗಾಳಿ ಹೊಡೆತಕ್ಕೆ ಗೊನೆ ಸಮೇತ ಗಿಡಗಳು ನೆಲಕ್ಕೆ ಬಿದ್ದಿವೆ.

ಹಾವೇರಿ: ಜಿಲ್ಲೆಯಲ್ಲಿ ಗುರುವಾರ ಸಂಜೆ ಬೀಸಿದ ಭಾರೀ ಗಾಳಿ, ಅಕಾಲಿಕ ಮಳೆಯಿಂದ ಫಸಲಿಗೆ ಬಂದಿದ್ದ ಬಾಳೆ ಬೆಳೆ, ಮೆಕ್ಕೆಜೋಳ, ತರಕಾರಿ ಬೆಳೆ ಹಾನಿಯಾಗಿದ್ದು, ರೈತರು ನಷ್ಟ ಅನುಭವಿಸುವಂತಾಗಿದೆ. ಹಾನಗಲ್ಲ, ಬ್ಯಾಡಗಿ, ಹಾವೇರಿ ತಾಲೂಕಿನಲ್ಲಿ ಗುರುವಾರ ಸಂಜೆ ಬೀಸಿದ ಗಾಳಿಗೆ ಬೃಹತ್ ಮರಗಳು ಧರೆಗುರುಳಿದ್ದವು. ಹೇರೂರ ಗ್ರಾಮದಲ್ಲಿ ತೆಂಗಿನಮರ ಮನೆಯ ಮೇಲೆ ಬಿದ್ದಿತ್ತು. ಅಲ್ಲದೇ ದೇವಗಿರಿ ಗ್ರಾಮದಲ್ಲಿ ನೂರಾರು ಎಕರೆಯಲ್ಲಿ ಬೆಳೆದು ನಿಂತಿದ್ದ ಮೆಕ್ಕೆಜೋಳ ನೆಲಕಚ್ಚಿದಿದ್ದರೆ, ಹಾನಗಲ್ಲ ತಾಲೂಕು ಶ್ಯಾಡಗುಪ್ಪಿ ಗ್ರಾಮದಲ್ಲಿ ಹತ್ತಾರು ಎಕರೆ ಫಸಲಿಗೆ ಬಂದಿದ್ದ ಬಾಳೆ, ಮೆಣಸಿನಗಿಡ ಸಂಪೂರ್ಣ ನೆಲಸಮ ಆಗಿವೆ. ಹಾನಗಲ್ಲ ತಾಲೂಕಿನ ಶ್ಯಾಡಗುಪ್ಪಿ ಗ್ರಾಮದ ಶಿವಯೋಗೆಪ್ಪ ಬಾಳೂರು ಸೇರಿದಂತೆ ವಿವಿಧ ರೈತರ ಜಮೀನಿನಲ್ಲಿದ್ದ ಫಲ ಕೊಡುವ ಹಂತದಲ್ಲಿದ್ದ ಬಾಳೆಗಿಡಗಳು ಬಿರುಗಾಳಿ ಹೊಡೆತಕ್ಕೆ ಗೊನೆ ಸಮೇತ ಗಿಡಗಳು ನೆಲಕ್ಕೆ ಬಿದ್ದಿವೆ. ಇದರಿಂದ ರೈತರು ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕುವಂತಾಗಿದೆ. ರೈತ ಶಿವಯೋಗೆಪ್ಪ ಬಾಳೂರು ಮಾತನಾಡಿ, ನಮ್ಮದು 3 ಎಕರೆ ಸೇರಿದಂತೆ ಗ್ರಾಮದಲ್ಲಿನ 20ಕ್ಕೂ ಹೆಚ್ಚು ಎಕರೆ ಪ್ರದೇಶದಲ್ಲಿದ್ದ ಬಾಳೆ ಗಾಳಿಗೆ ಸಿಲುಕಿ ಹಾನಿಯಾಗಿದೆ. ಈಗ ಬಾಳೆ ಹಣ್ಣಿಗೆ ದರ ಹೆಚ್ಚಾಗಿರುವುದರಿಂದ ನಮ್ಮ 3 ಎಕರೆ ಹೊಲದಲ್ಲಿ ₹8ರಿಂದ ₹10ಲಕ್ಷ ಆದಾಯದ ನಿರೀಕ್ಷೆಯಲ್ಲಿದ್ದೇವು. ಕಷ್ಟಪಟ್ಟು ಬೆಳೆದ ಫಲ ಕೈ ಸೇರುವ ಹಂತದಲ್ಲಿದ್ದಾಗ ಬಿರುಗಾಳಿಗೆ ಸಿಲುಕಿದ್ದು, ಸಂಪೂರ್ಣ ತೋಟವೇ ನಾಶವಾಗಿದೆ ಎಂದು ಅಳಲು ತೋಡಿಕೊಂಡ ಅವರು, ನಮ್ಮ ಭಾಗದಲ್ಲಿ ಬೀಸಿದ ಬಿರುಗಾಳಿಗೆ ಬಾಳೆ ಬೆಳೆ ಹಾಳಾಗಿದ್ದು, ತೋಟಗಾರಿಕೆ ಇಲಾಖೆಯವರು ಬೆಳೆನಷ್ಟವಾಗಿರುವ ರೈತರಿಗೆ ಹೆಚ್ಚಿನ ಪರಿಹಾರಧನ ವಿತರಿಸಬೇಕು ಎಂದು ಒತ್ತಾಯಿಸಿದರು. ಹಾವೇರಿ ತಾಲೂಕಿನ ಸುತ್ತಮುತ್ತಲಿನ ಗ್ರಾಮಗಳಲ್ಲಿ ಗುರುವಾರ ಸಂಜೆ ಬಿರುಗಾಳಿ, ಸಿಡಿಲು ಸಹಿತ ಸುರಿದ ಆಲಿಕಲ್ಲು ಮಳೆ ರಭಸಕ್ಕೆ ದೇವಗಿರಿ ಗ್ರಾಮದ ರೈತರ ನೂರಾರು ಎಕರೆ ಮೆಕ್ಕೆಜೋಳ ನೆಲಕ್ಕುರುಳಿ ಲಕ್ಷಾಂತರ ರು. ನಷ್ಟವಾಗಿದೆ. ಮೆಕ್ಕೆಜೋಳ ಇನ್ನೇನು ಕೆಲವೇ ದಿನಗಳಲ್ಲಿ ಕಟಾವಿಗೆ ಬರುವ ವೇಳೆಗೆ ಬಿರುಗಾಳಿ ಸಿಲುಕಿ ಹಾನಿಗೀಡಾಗಿದೆ. ಮಳೆಗಾಲದಲ್ಲಿ ಬಿತ್ತನೆ ಮಾಡಿದ್ದ ಮೆಕ್ಕೆಜೋಳವೂ ಅತಿವೃಷ್ಟಿಯಿಂದಾಗಿ ಹಾನಿಗೀಡಾಗಿತ್ತು. ಆಗ ಮಾಡಿದ್ದ ಸಾಲ ಇನ್ನೂ ತೀರಿಲ್ಲ. ಈಗ ಬೇಸಿಗೆಯಲ್ಲಿ ಹಾಕಿದ್ದ ಮೆಕ್ಕೆಜೋಳ ಫಸಲಿಗೆ ಬರುವ ಬೆಳೆಗೆ ಗಾಳಿಗೆ ಸಿಲುಕಿ ನೆಲಕ್ಕುರುಳಿದೆ. ಎರಡ್ಮೂರು ವಾರದಲ್ಲಿ ಕಟಾವಿಗೆ ಬಂದಿದ್ದ ಫಸಲು ಅಕಾಲಿಕವಾಗಿ ಬೀಸಿದ ಗಾಳಿ, ಮಳೆಗೆ ಹಾನಿಯಾಗಿದೆ. ಸರ್ಕಾರ ನಮ್ಮ ಸಂಕಷ್ಟಕ್ಕೆ ಸ್ಪಂದಿಸಿ ಹೆಚ್ಚಿನ ಪರಿಹಾರ ನೀಡಬೇಕು ಎಂದು ರೈತ ಶಂಕ್ರಪ್ಪ ತಿರಕಣ್ಣನವರ ಒತ್ತಾಯಿಸಿದ್ದಾರೆ.

PREV

Recommended Stories

ಕೆಪಿಎಸ್ಸಿ: 384 ಹುದ್ದೆ ನೇಮಕಕ್ಕೆ ಕೋರ್ಟ್‌ ಅನುಮತಿ
ಧರ್ಮಸ್ಥಳ ಗ್ರಾಮ ಕೇಸಿಂದ ಹಿಂದೆ ಸರಿದ ನ್ಯಾಯಾಧೀಶ