ಚಂದ್ರಶೇಖರಯ್ಯ ಮಠಪತಿಕನ್ನಡಪ್ರಭ ವಾರ್ತೆ ತಿಕೋಟಾ ತಿಕೋಟಾ: ರಾಜ್ಯದಲ್ಲಿ ಬಹುತೇಕ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುತ್ತಿದ್ದು, ನೆರೆ ಹಾಗೂ ಪ್ರಕೃತಿ ವಿಕೋಪದಿಂದ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಆದರೆ, ವಿಜಯಪುರ ಜಿಲ್ಲೆಯ ಕೆಲವು ಭಾಗದಲ್ಲಿ ಮಳೆಯೇ ಇಲ್ಲದೆ ಬೆಳೆದ ಬೆಳೆಗಳು ಒಣಗಲಾರಂಭಿಸಿವೆ. ಹೌದು, ಈ ಭಾಗದಲ್ಲಿ ಸಾಕಷ್ಟು ಮಳೆ ಕೊರತೆಯಾಗಿದ್ದು, ಎಲ್ಲ ಬೆಳೆಗಳು ಒಣಗುತ್ತಿರುವುದರಿಂದ ರೈತರು ಆತಂಕಕ್ಕೆ ಒಳಗಾಗಿದ್ದಾರೆ. ತಿಕೋಟಾ ಹಾಗೂ ದೇರಹಿಪ್ಪರಗಿ ತಾಲೂಕಿನ ಭಾಗದಲ್ಲಿ ಮುಂಗಾರು ಪೂರ್ವ ಮಳೆ ಉತ್ತಮವಾಗಿ ಸುರಿದಿದ್ದು, ಬಳಿಕ ಮಳೆಯ ಆಗಿಲ್ಲ. ಪ್ರಾರಂಭದ ಮಳೆ ನಂಬಿ ರೈತರು ಬಿತ್ತನೆ ಮಾಡಿದ್ದಾರೆ. ತಿಕೋಟಾ ತಾಲೂಕಿನ ಘೋಣಸಗಿ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ಘೋಣಸಗಿ, ಅಳಗಿನಾಳ, ಕಳ್ಳಕವಟಗಿ ಸೇರಿದಂತೆ ವಿವಿಧ ಭಾಗಗಳಲ್ಲಿ ಮಳೆಯಿಲ್ಲದೇ ಗೋವಿನ ಜೋಳ, ಸಜ್ಜೆ, ಶೇಂಗಾ, ತೊಗರಿ, ಹೆಸರು, ಉದ್ದು ಇದೀಗ ಒಣಗಲಾರಂಭಿಸಿವೆ. ಬಿತ್ತನೆ ಹಾಗೂ ಬೀಜೋಪಾರ ಮಾಡಿ ಸಾಕಷ್ಟು ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ.
------------------------------------------ಕೋಟ್
ಮುಂದಿನ ನಾಲ್ಕೈದು ದಿನಗಳಲ್ಲಿ ಮಳೆ ಬಂದರೆ ಒಳ್ಳೆಯದು ಬೆಳೆಗಳು ಬದುಕುತ್ತವೆ. ಮಳೆಯಾಗದಿದ್ದರೆ ಸಂಬಂಧಪಟ್ಟ ಅಧಿಕಾರಿಗಳು ಕಾಳಜಿ ವಹಿಸಿ ಕಾಲುವೆಗಳಿಗೆ ನೀರು ಬರುವಂತೆ ವ್ಯವಸ್ಥೆ ಮಾಡಬೇಕು. ಮಾಡಿದರೆ ನಮ್ಮ ಬೆಳೆಗಳಿಗೆ ನೀರು ಹಾಯಿಸಿ ರಕ್ಷಣೆಗೆ ಮುಂದಾಗುತ್ತೇವೆ. ಇದರ ಬಗ್ಗೆ ಅಧಿಕಾರಿಗಳು ಮೌನವಹಿಸಿದರೆ ಹೋರಾಟ ಮಾಡುವುದು ಅನಿವಾರ್ಯವಾಗಲಿದೆ.ಗಂಗಾರಾಮ, ಸ್ಥಳೀಯ ರೈತ.