- ರೈತ ಸಂಘ, ಹಸಿರು ಸೇನೆ ನೇತೃತ್ವದಲ್ಲಿ ಪ್ರತಿಭಟನೆ
- ರಾಜ್ಯಾಧ್ಯಕ್ಷ ಹುಚ್ಚವ್ವನಹಳ್ಳಿ ಮಂಜುನಾಥ ಹೇಳಿಕೆ - - -ಕನ್ನಡಪ್ರಭ ವಾರ್ತೆ ದಾವಣಗೆರೆ
ರೈತರು ಬೆಳೆದ ಬೆಳೆಗಳಿಗೆ ಬೆಂಬಲ ಬೆಲೆ ಘೋಷಿಸಬೇಕು, ಬೆಂಬಲ ಬೆಲೆಗಿಂತ ಕಡಿಮೆ ಬೆಲೆಗೆ ಬೆಳೆಗಳ ಖರೀದಿಸುವ ಖರೀದಿದಾರರಿಗೆ ಕನಿಷ್ಠ 1ರಿಂದ 5 ವರ್ಷ ಜೈಲುಶಿಕ್ಷೆ ವಿಧಿಸುವುದು, ಲೈಸೆನ್ಸ್ ರದ್ದುಪಡಿಸುವುದು ಸೇರಿದಂತೆ ಕಠಿಣ ಕಾನೂನು ಜಾರಿಗೆ ತರುವಂತೆ ಒತ್ತಾಯಿಸಿ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಅ.29ರಿಂದ ರಾಜ್ಯವ್ಯಾಪಿ ಹೋಬಳಿ ಮಟ್ಟದಿಂದ ವಿವಿಧ ಹಂತದ ಹೋರಾಟ ಹಮ್ಮಿಕೊಂಡಿದೆ.ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ರಾಜ್ಯಾಧ್ಯಕ್ಷ ಹುಚ್ಚವ್ವನಹಳ್ಳಿ ಮಂಜುನಾಥ, ಕೇಂದ್ರ-ರಾಜ್ಯ ಸರ್ಕಾರಗಳು ರೈತರ ಹಿತಕಾಯುವ ಕೆಲಸ ಮಾಡಬೇಕು. ಈ ನಿಟ್ಟಿನಲ್ಲಿ ₹50 ಕಡಿಮೆ ದರಕ್ಕೆ ಖರೀದಿಸಿದರೆ ಶೇ.5ರಷ್ಟು ದಂಡ, ದಂಡದ ಹಣ ನೇರವಾಗಿ ರೈತರ ಖಾತೆಗೆ ಜಮಾ ಮಾಡಬೇಕು. ಬೆಂಬಲ ಬೆಲೆಗೆ ಖರೀದಿಸದ ಖರೀದಿದಾರರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಂಡರೆ, ಬೆಂಬಲ ಬೆಲೆ ಘೋಷಣೆ ಮಾಡಿದ್ದಕ್ಕೂ, ಬೆಂಬಲ ಬೆಲೆಗೂ ನ್ಯಾಯ ಸಿಗುತ್ತದೆ ಎಂದು ತಿಳಿಸಿದರು.
ಕೇಂದ್ರ ಸರ್ಕಾರ ಮೆಕ್ಕೆಜೋಳಕ್ಕೆ ಪ್ರತಿ ಕ್ವಿಂಟಲ್‌ಗೆ ₹2400 ಬೆಲೆ ಹೇಳಿದರೆ, ಖರೀದಿದಾರರು ₹1300 ರಿಂದ ₹1700 ದರಕ್ಕೆ ಖರೀದಿಸುತ್ತಾರೆ. ಈ ಹಿನ್ನೆಲೆ ಕೇಂದ್ರ, ರಾಜ್ಯ ಸರ್ಕಾರ, ಜಿಲ್ಲಾಡಳಿತ ಮಧ್ಯ ಪ್ರವೇಶಿಸಿ, ರೈತರಿಗೆ ಬೆಲೆ ಖಾತ್ರಿಗೊಳಿಸಬೇಕು. ಇಲ್ಲದಿದ್ದರೆ ರಾಜ್ಯಾದ್ಯಂತ ಹೋರಾಟ ತೀವ್ರಗೊಳಿಸಲಾಗುವುದು ಎಂದು ಎಚ್ಚರಿಸಿದರು.ಸಂಬಂಧಿಸಿದ ಅಧಿಕಾರಿಗಳಿಗೆ ಸಾಕಷ್ಟು ಸಲ ಮನವಿ ಮಾಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಈ ಹಿನ್ನೆಲೆ ಅ.29ರಿಂದಲೇ ಹೋಬಳಿ, ತಾಲೂಕು, ಜಿಲ್ಲಾಮಟ್ಟದಿಂದ ವಿವಿಧ ಹಂತದ ಹೋರಾಟ ಆರಂಭಿಸಲಾಗುವುದು. ಕೇಂದ್ರದಲ್ಲಿ 2014ರಂದ ಈವರೆಗೂ ಮೆಕ್ಕೆಜೋಳ ಖರೀದಿ ಕೇಂದ್ರವನ್ನು ಸ್ಥಾಪಿಸಿಲ್ಲ. ಕೇಂದ್ರ ಸರ್ಕಾರ ಬೆಂಬಲ ಘೋಷಣೆ ಮಾಡಿದ ಮಾತ್ರಕ್ಕೆ ರೈತರಿಗೆ ಪ್ರಯೋಜನ ಆಗುವುದಿಲ್ಲ. ರಾಜ್ಯ ಸರ್ಕಾರ ಖರೀದಿ ಕೇಂದ್ರ ಸ್ಥಾಪಿಸಿ, ಆವರ್ತ ನಿಧಿಯಡಿ ಮೆಕ್ಕೆಜೋಳ ಖರೀದಿಸಲಿ ಎಂದು ಒತ್ತಾಯಿಸಿದರು.
ಸಂಘದ ಮುಖಂಡರಾದ ಹೂವಿನಮಡು ನಾಗರಾಜ, ಕಾರಿಗನೂರು ಕ್ರಾಸ್ ಶಿವಕುಮಾರ, ಗುಮ್ಮನೂರು ರುದ್ರೇಶ, ಪಾಮೇನಹಳ್ಳಿ ಗೌಡ್ರ ಶೇಖರಪ್ಪ, ಕುರ್ಕಿ ಹನುಮಂತಪ್ಪ, ಹೊಸಹಳ್ಳಿ ಮೋಹನ ನಾಯ್ಕ, ಭೀಮಾನಾಯ್ಕ, ಭೀಮೇಶ ಗುಮ್ಮನೂರು, ಆಲೂರು ಪರಶುರಾಮ ಇತರರು ಇದ್ದರು.- - -
-28ಕೆಡಿವಿಜಿ3.ಜೆಪಿಜಿ:ದಾವಣಗೆರೆಯಲ್ಲಿ ಮಂಗಳವಾರ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ರಾಜ್ಯಾಧ್ಯಕ್ಷ ಹುಚ್ಚವ್ವನಹಳ್ಳಿ ಮಂಜುನಾಥ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.