ಕಾರ್ಮಿಕ ಸಮುದಾಯ ಭವನಕ್ಕೆ ಕೋಟಿ ಅನುದಾನ ಕೊಡಿಸುವೆ:ಶಾಸಕ ಬಾಲಕೃಷ್ಣ

KannadaprabhaNewsNetwork | Published : Feb 11, 2025 12:47 AM

ಸಾರಾಂಶ

ಕಾರ್ಮಿಕ ಸಚಿವ ಸಂತೋಷ್ ಲಾಡ್ ರಿಗೆ ಈಗಾಗಲೇ ಸಮುದಾಯ ಭವನಕ್ಕೆ ಒಂದು ಕೋಟಿ ರು. ಅನುದಾನ ನೀಡಬೇಕೆಂದು ಮನವಿ ಮಾಡಿದ್ದು, ಇದಕ್ಕೆ ಸಚಿವರು ಕೂಡ ಒಪ್ಪಿಗೆ ನೀಡಿದ್ದಾರೆ. ಶೀಘ್ರದಲ್ಲೇ ಕಾರ್ಮಿಕರ ದೊಡ್ಡ ಸಮಾರಂಭವನ್ನು ಮಾಡಿ ಸಚಿವರನ್ನೇ ಮಾಗಡಿಗೆ ಕರೆಸಿ ಇಲ್ಲೇ ಘೋಷಣೆ ಮಾಡಿಸುತ್ತೇನೆ.

ಕನ್ನಡಪ್ರಭ ವಾರ್ತೆ ಮಾಗಡಿ

ತಾಲೂಕಿನಲ್ಲಿ ಕಾರ್ಮಿಕರಿಗಾಗಿ ಸಮುದಾಯ ಭವನ ನಿರ್ಮಾಣ ಮಾಡಲು ಸರ್ಕಾರದಿಂದ ಒಂದು ಕೋಟಿ ಅನುದಾನವನ್ನು ಕೊಡಿಸುವುದಾಗಿ ಶಾಸಕ ಎಚ್.ಸಿ.ಬಾಲಕೃಷ್ಣ ಭರವಸೆ ನೀಡಿದರು.

ಪಟ್ಟಣದ ಅಂಬೇಡ್ಕರ್ ಭವನದಲ್ಲಿ ರಾಜ್ಯ ಕಟ್ಟಡ ಮತ್ತು ಅಸಂಘಟಿತ ಕಾರ್ಮಿಕರ ಒಕ್ಕೂಟದ ವತಿಯಿಂದ ನಡೆದ ಕಾರ್ಮಿಕೋತ್ಸವ, ಲೇಬರ್ ಕಾರ್ಡ್ ವಿತರಣೆ, ಆಶಾ ಕಾರ್ಯಕರ್ತೆಯರು ಹಾಗೂ ಪೌರಕಾರ್ಮಿಕರಿಗೆ ಸನ್ಮಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಕಾರ್ಮಿಕ ಸಚಿವ ಸಂತೋಷ್ ಲಾಡ್ ರಿಗೆ ಈಗಾಗಲೇ ಸಮುದಾಯ ಭವನಕ್ಕೆ ಒಂದು ಕೋಟಿ ರು. ಅನುದಾನ ನೀಡಬೇಕೆಂದು ಮನವಿ ಮಾಡಿದ್ದು, ಇದಕ್ಕೆ ಸಚಿವರು ಕೂಡ ಒಪ್ಪಿಗೆ ನೀಡಿದ್ದಾರೆ. ಶೀಘ್ರದಲ್ಲೇ ಕಾರ್ಮಿಕರ ದೊಡ್ಡ ಸಮಾರಂಭವನ್ನು ಮಾಡಿ ಸಚಿವರನ್ನೇ ಮಾಗಡಿಗೆ ಕರೆಸಿ ಇಲ್ಲೇ ಘೋಷಣೆ ಮಾಡಿಸುತ್ತೇನೆ. ಮಾಗಡಿ ಪಟ್ಟಣದಲ್ಲಿ ಸುಸಜ್ಜಿತ ಜಾಗ ಕೊಡುವ ವ್ಯವಸ್ಥೆಯನ್ನು ಮಾಡಲಾಗುತ್ತದೆ, ಕಾರ್ಮಿಕ ಇಲಾಖೆಯಿಂದ ಸಾಕಷ್ಟು ಅನುದಾನ ಬರಲಿದ್ದು, ಕಾರ್ಮಿಕರು ಸದುಪಯೋಗಪಡಿಸಿಕೊಳ್ಳಬೇಕು ಎಂದು ಹೇಳಿದರು.

ಪ್ರಸನ್ನ ಗೌಡರವರು ವರ್ಷಗಳಿಂದಲೂ ಕಾರ್ಮಿಕರ ಪರ ದುಡಿಯುತ್ತಿದ್ದು, ಕಾರ್ಮಿಕ ಇಲಾಖೆಯಿಂದ ಸಿಗುವ ಸೌಲಭ್ಯಗಳ ಬಗ್ಗೆಯೇ ಒಂದು ಕಾರ್ಯಾಗಾರ ಮಾಡಿ ಅವರಿಗೆ ಮಾಹಿತಿ ನೀಡಿದ್ದಾರೆ. ಸರ್ಕಾರದಲ್ಲಿ ಕಾರ್ಮಿಕರಿಗಾಗಿ ಇಲಾಖೆಯಲ್ಲಿ 8 ಸಾವಿರ ಕೋಟಿ ರು. ಅನುದಾನ ಇರುವುದರಿಂದ ಇದರ ಸದುಪಯೋಗವನ್ನು ಕಾರ್ಮಿಕರ ಒಕ್ಕೂಟವು ಕಾರ್ಮಿಕರಿಗೆ ತಲುಪಿಸಲು ಸರ್ಕಾರವನ್ನು ಒತ್ತಾಯಿಸಬೇಕು ಎಂದು ತಿಳಿಸಿದರು.

ಗ್ಯಾರಂಟಿ ಅನುಷ್ಠಾನದ ಅಧ್ಯಕ್ಷ ಎಚ್.ಎಂ. ರೇವಣ್ಣ ಮಾತನಾಡಿ, ರಾಜಕಾರಣಿಗಳು ಎಲ್ಲ ಇಲಾಖೆಯಿಂದಲೂ ಜನಗಳಿಗೆ ಸೌಲಭ್ಯ ಕೊಡಲು ಸಾಧ್ಯವಿಲ್ಲ, ಒಂದೊಂದು ಕ್ಷೇತ್ರಕ್ಕೆ ಒಬ್ಬೊಬ್ಬರು ನಾಯಕರಾಗಿ ಹುಟ್ಟಿಕೊಂಡರೆ ಆ ಕ್ಷೇತ್ರದಲ್ಲಿ ಹೆಚ್ಚಿನ ಸಹಾಯವನ್ನು ಜನತೆಗೆ ಮಾಡಬಹುದು, ನಾನು ಪುರಸಭಾ ಸದಸ್ಯನಾಗಿದ್ದ ಅವಧಿಯಲ್ಲಿ ಕೂಲಿ ಕಾರ್ಮಿಕರಿಗೆ ಐವತ್ತಕ್ಕೂ ಹೆಚ್ಚು ತಳ್ಳುವ ಗಾಡಿಗಳನ್ನು ಮಾಡಿಸಿ ಉಚಿತವಾಗಿ ನೀಡಿದ್ದೆನು. ಸರ್ಕಾರ ಆಶಾ ಕಾರ್ಯಕರ್ತೆಯರ ಪರವಾಗಿ ಇದ್ದು ಅವರ ಬೇಡಿಕೆಗಳನ್ನು ಈಡೇರಿಸುವ ಕೆಲಸ ಮಾಡಲಾಗಿದೆ, ಮುಖ್ಯಮಂತ್ರಿಗಳಿಗೆ ತಿಳಿಸಿ ಪೌರ ಕಾರ್ಮಿಕರನ್ನು ಕಾಯಂ ಗೊಳಿಸುವ ಕೆಲಸ ಮಾಡಲಾಗಿದ್ದು, ಶಾಸಕ ಬಾಲಕೃಷ್ಣ ಈ ಬಾರಿ ಸಚಿವರಾಗುತ್ತಾರೆ ಎಂದು ವೇದಿಕೆಯಲ್ಲಿ ಹೇಳಿದರು.

ರಾಜ್ಯ ಕಟ್ಟಡ ಮತ್ತು ಅಸಂಘಟಿತ ಕಾರ್ಮಿಕರ ಒಕ್ಕೂಟದ ರಾಜ್ಯಾಧ್ಯಕ್ಷ ಪ್ರಸನ್ನ ಗೌಡ ಮಾತನಾಡಿ, 500 ರಿಂದ 600 ಕಾರ್ಮಿಕರಿಗೆ ಲೇಬರ್ ಕಾರ್ಡ್ ವಿತರಣೆ ಮಾಡಲಾಗಿದ್ದು, ತಾಲೂಕಿನಲ್ಲಿ 15 ರಿಂದ 16 ಸಾವಿರ ಕಾರ್ಮಿಕರು ಇದ್ದು, ಕಾರ್ಮಿಕ ಇಲಾಖೆ ಇವರೆಲ್ಲರಿಗೂ ಸರ್ಕಾರದ ಸೌಲಭ್ಯ ಕೊಡುವ ಕೆಲಸ ಆಗಬೇಕು, ಬೆಂಗಳೂರಿನಲ್ಲಿ 1 ಲಕ್ಷದ 90 ಸಾವಿರ ಲೇಬರ್ ಕಾರ್ಡ್ ಮಾಡಿ ಕಾರ್ಮಿಕರ ಪರವಾಗಿ ಹೋರಾಟ ಮಾಡಲಾಗುತ್ತಿದ್ದು, ನಮ್ಮ ಒಕ್ಕೂಟಕ್ಕೆ ಜನಪ್ರತಿನಿಧಿಗಳು ಸಹಕಾರ ನೀಡಿದರೆ ಕಾರ್ಮಿಕರ ಪರವಾಗಿ ನಿರಂತರ ದುಡಿಯುತ್ತೇವೆ ಎಂದು ತಿಳಿಸಿದರು.

ಒಕ್ಕೂಟದ ವತಿಯಿಂದ ತಾಲೂಕಿನ ಆಶಾ ಕಾರ್ಯಕರ್ತೆಯರು ಹಾಗೂ ಪೌರಕಾರ್ಮಿಕರನ್ನು ಸನ್ಮಾನಿಸಲಾಯಿತು. ಹೊಸದಾಗಿ ಲೇಬರ್ ಕಾರ್ಡ್ ವಿತರಣೆ ಮಾಡಲಾಯಿತು.

ಸಾದಮಾರನಹಳ್ಳಿ ಮಠದ ವಿಜಯಶಕ್ತಿ ಗುರೂಜಿ, ಬಿಜೆಪಿ ಯುವ ಮುಖಂಡ ಪ್ರಸಾದ್ ಗೌಡ, ಜೆಡಿಎಸ್ ಹಿರಿಯ ಮುಖಂಡ ತಮ್ಮನಗೌಡ, ಪುರಸಭೆ ಸದಸ್ಯರಾದ ಅನಿಲ್ ಕುಮಾರ್, ರಂಗಹನುಮಯ್ಯ, ನರಸಿಂಹಮೂರ್ತಿ, ಪುರುಷೋತ್ತಮ್ ಪಟೇಲ್, ವಕೀಲ ರುದ್ರೇಶ್, ಮಂಜುನಾಥ್, ಲೋಕೇಶ್ ಗೌಡ, ನಾಗರಾಜು, ಒಕ್ಕೂಟದ ಜಿಲ್ಲಾ ಘಟಕದ ಅಧ್ಯಕ್ಷ ಆನಂದ್, ಗೌರವಾಧ್ಯಕ್ಷ ಮಂಜುನಾಥ್, ತಾಲೂಕು ಗೌರವಾಧ್ಯಕ್ಷ ಶಿವಕುಮಾರ್, ತಾಲೂಕು ಅಧ್ಯಕ್ಷ ವೆಂಕಟೇಶ್, ಮಹಿಳಾ ಅಧ್ಯಕ್ಷೆ ಜಯಮ್ಮ, ಉಪಾಧ್ಯಕ್ಷ ಗೋಪಾಲ್ ಸೇರಿ ಇತರರು ಭಾಗವಹಿಸಿದ್ದರು.

Share this article