ಕನ್ನಡಪ್ರಭ ವಾರ್ತೆ ಕುಶಾಲನಗರ
ಅವರು ಕುಶಾಲನಗರದಲ್ಲಿ ನಿರ್ಮಾಣಗೊಂಡ ನೂತನ ಪುರಸಭಾ ಕಚೇರಿ ಕಟ್ಟಡ ಉದ್ಘಾಟನೆ ನೆರವೇರಿಸಿ ಮಾತನಾಡಿದರು.
ರಾಜ್ಯಕ್ಕೆ ಮುಖ್ಯಮಂತ್ರಿಯನ್ನು ನೀಡಿದ ಕುಶಾಲನಗರ ಪಟ್ಟಣದಲ್ಲಿ ಗುಂಡೂರಾಯರ ಸ್ಮರಣೆಗಾಗಿ ಪುತ್ಥಳಿಯನ್ನು ನಿರ್ಮಾಣ ಮಾಡುವ ನಿಟ್ಟಿನಲ್ಲಿ ಪೌರಾಡಳಿತ ಇಲಾಖೆ ಮೂಲಕ ಎಲ್ಲಾ ರೀತಿಯ ಸಹಕಾರ ನೀಡಲಾಗುವುದು ಎಂದರು.ಸರ್ಕಾರದ ಮೂಲಕ ಪಕ್ಷಾತೀತವಾಗಿ ಜಾತ್ಯತೀತವಾಗಿ ಎಲ್ಲ ರೀತಿಯ ಕೆಲಸ ಕಾರ್ಯಗಳು ನಡೆಯುತ್ತಿವೆ ಎಂದು ಸಚಿವರು ಇಂದಿರಾ ಕ್ಯಾಂಟೀನ್ ರಾಜ್ಯದ ಎಲ್ಲೆಡೆ ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿದೆ ಎಂದರು.
ಬಡವರು ನೌಕರರು ಕಾರ್ಮಿಕರಿಗೆ ಈ ವ್ಯವಸ್ಥೆಯಿಂದ ಹೆಚ್ಚಿನ ಅನುಕೂಲ ಆಗಲಿದೆ ಎಂದು ಸಚಿವರು ಹೇಳಿದರು. ಆಶ್ರಯ ಯೋಜನೆಯಲ್ಲಿ ವಸತಿ ನಿವೇಶನ ರಹಿತ ಜನರ ಸಂಖ್ಯೆ ಜಿಲ್ಲೆಯಲ್ಲಿ ಅಧಿಕವಾಗಿದ್ದು ಅವರುಗಳಿಗೆ ಅಗತ್ಯ ಯೋಜನೆ ರೂಪಿಸುವ ನಿಟ್ಟಿನಲ್ಲಿ ಮನವಿ ಸಲ್ಲಿಸಿದ ಶಾಸಕರ ಕೋರಿಕೆಗೆ ಪ್ರತಿಕ್ರಿಯಿಸಿದ ಸಚಿವರು ಈ ನಿಟ್ಟಿನಲ್ಲಿ ಸರ್ಕಾರದ ಜೊತೆಗೆ ಚರ್ಚಿಸಿ ಸೂಕ್ತ ಕ್ರಮವನ್ನು ಸದ್ಯದಲ್ಲಿಯೇ ತೆಗೆದುಕೊಳ್ಳಲಾಗುವುದು ಎಂದರು. ಕ್ಷೇತ್ರದ ಶಾಸಕರಾದ ಮಂತರ್ ಗೌಡ ಅವರ ಕಳಕಳಿ ಬಗ್ಗೆ ಸಚಿವರು ಮೆಚ್ಚುಗೆ ವ್ಯಕ್ತಪಡಿಸಿದರು.
ಈ ಸಂದರ್ಭ ಮಾತನಾಡಿದ ಮಡಿಕೇರಿ ಕ್ಷೇತ್ರ ಶಾಸಕ ಡಾ ಮಂತರ್ ಗೌಡ, ಕುಶಾಲನಗರಕ್ಕೆ 24 * 7 ಕಾಲ ಕುಡಿಯುವ ನೀರು ಸರಬರಾಜು ಮಾಡುವ ನಿಟ್ಟಿನಲ್ಲಿ ಈಗಾಗಲೇ ಕಾವೇರಿ ನದಿಯಿಂದ ನೀರೆತ್ತಿ ಗ್ರಾಮಾಂತರ ಪ್ರದೇಶಗಳು ಸೇರಿದಂತೆ ಕುಶಾಲನಗರ ಪಟ್ಟಣಕ್ಕೆ ಅಮೃತ ಯೋಜನೆ ಅಡಿಯಲ್ಲಿ ಕಾಮಗಾರಿ ಪ್ರಗತಿಯಲ್ಲಿದೆ.
ಮಡಿಕೇರಿ ಕುಶಾಲನಗರ ಪಟ್ಟಣ ವ್ಯಾಪ್ತಿಯ ತ್ಯಾಜ್ಯ ವಿಲೇವಾರಿಗೆ ಈಗಾಗಲೇ 12 ಕೋಟಿ ವೆಚ್ಚದಲ್ಲಿ ತ್ಯಾಜ್ಯ ತೆರವು ಮಾಡುವ ಮೂಲಕ ಸ್ವಚ್ಛ ನಗರಗಳನ್ನಾಗಿ ಮಾಡುವ ಘಟಕಗಳ ನಿರ್ಮಾಣ ನಡೆಯುತ್ತಿದೆ ಎಂದ ಶಾಸಕರು, ಕುಶಾಲನಗರ ವ್ಯಾಪ್ತಿಯಲ್ಲಿ ಮೂರು ಕೋಟಿ ವೆಚ್ಚದಲ್ಲಿ ಕಸ ವಿಲೇವಾರಿ ಘಟಕ ಸಿದ್ಧಗೊಳ್ಳುತ್ತಿದೆ ಎಂದು ತಿಳಿಸಿದರು.
ಕುಶಾಲನಗರ ಪಟ್ಟಣದ ಒಳಚರಂಡಿ ಯೋಜನೆ ಬಹುತೇಕ ಕಾಮಗಾರಿ ಮುಗಿದಿದ್ದು ಕಾವೇರಿ ನದಿ ಸಂರಕ್ಷಣೆಗೆ ಹೆಚ್ಚಿನ ಆದ್ಯತೆ ಕಲ್ಪಿಸಲಾಗುವುದು ಎಂದು ಹೇಳಿದರು.
ಕೆಎಸ್ಆರ್ಟಿಸಿ ಬಸ್ ಡಿಪೋ ಕಾಮಗಾರಿ ಪ್ರಗತಿಯಲ್ಲಿದ್ದು ಈ ವರ್ಷದ ಅಂತ್ಯದಲ್ಲಿ ಕಾಮಗಾರಿ ಪೂರ್ಣಗೊಳ್ಳಲಿದೆ.
ಮಾಜಿ ಮುಖ್ಯಮಂತ್ರಿ ಆರ್ ಗುಂಡುರಾಯರ ನೆನಪಿಗಾಗಿ ಕುಶಾಲನಗರ ನೂತನ ಪುರಸಭೆ ಕಟ್ಟಡದ ಆವರಣದಲ್ಲಿ ಬೃಹತ್ ಪ್ರತಿಮೆ ನಿರ್ಮಿಸಲು ಪುರಸಭೆ ಆಡಳಿತ ನಿರ್ಣಯ ಕೈಗೊಂಡಿದೆ ಎಂದರು.
ಸರ್ಕಾರದ ಉದ್ದೇಶವಾಗಿದೆ:ಕುಶಾಲನಗರ ಪುರಸಭೆ ನೂತನ ವಾಣಿಜ್ಯ ಸಂಕೀರ್ಣ ಅಂದಾಜು 6.8 ಕೋಟಿ ರು. ವೆಚ್ಚದಲ್ಲಿ ನಿರ್ಮಾಣಗೊಂಡಿದ್ದು ಇದೀಗ ಸಾರ್ವಜನಿಕರ ಅನುಕೂಲಕ್ಕಾಗಿ ಲೋಕಾರ್ಪಣೆಗೊಂಡಿದೆ. ಸರ್ಕಾರಿ ಅಧಿಕಾರಿ ಸಿಬ್ಬಂದಿಗಳು ಉತ್ತಮ ರೀತಿಯಲ್ಲಿ ಸಾರ್ವಜನಿಕರಿಗೆ ಸೇವೆ ನೀಡಬೇಕಾಗಿದೆ. ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸುವುದು ಹಾಗೂ ಜನಸ್ನೇಹಿ ಆಡಳಿತ ನೀಡುವುದು ಸರ್ಕಾರದ ಉದ್ದೇಶವಾಗಿದೆ ಎಂದರು.
ಪ್ರಸಕ್ತ ತನ್ನ ಕ್ಷೇತ್ರದ ಅನುದಾನದಲ್ಲಿ 2.5 ಕೋಟಿ ಅನುದಾನವನ್ನು ಕುಶಾಲನಗರ ಪಟ್ಟಣದ ಅಭಿವೃದ್ಧಿಗೆ ಮೀಸಲಿಡಲಾಗಿದೆ ಎಂದರು ಮುಂದೆ ಬರುವ ಐವತ್ತು ಕೋಟಿ ರು ಅನುದಾನದಲ್ಲಿ ಕುಶಾಲನಗರ ಪಟ್ಟಣ ಅಭಿವೃದ್ಧಿ ಸಂಬಂಧ 5 ಕೋಟಿ ಹಣವನ್ನು ಒದಗಿಸಲಾಗುವುದು ಎಂದರು.ಕುಶಾಲನಗರ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷರಾದ ವಿ ಪಿ ಶಶಿಧರ್ ಪ್ರಾಸ್ತಾವಿಕವಾಗಿ ಮಾತನಾಡಿ ಕುಶಾಲನಗರದ ಅಭಿವೃದ್ಧಿಯ ಬಗ್ಗೆ ಮಾಹಿತಿ ಒದಗಿಸಿದರು.
ಕುಶಾಲನಗರ ಪುರಸಭೆ ಅಧ್ಯಕ್ಷರಾದ ಜಯಲಕ್ಷ್ಮಿ ಚಂದ್ರು ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕುಶಾಲನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಪ್ರಮೋದ್ ಮುತ್ತಪ್ಪ, ಪುರಸಭೆ ಉಪಾಧ್ಯಕ್ಷರಾದ ಪುಟ್ಟಲಕ್ಷ್ಮಿ, ಸ್ಥಾಯಿ ಸಮಿತಿ ಅಧ್ಯಕ್ಷರಾದ ಎಂ ಬಿ ಸುರೇಶ್, ಜಿಲ್ಲಾಧಿಕಾರಿ ವೆಂಕಟರಾಜ್, ಮುಖ್ಯ ಇಂಜಿನಿಯರ್ ಶ್ರೀನಿವಾಸ್, ಕುಶಾಲನಗರ ಪುರಸಭೆ ಮುಖ್ಯ ಅಧಿಕಾರಿ ಟಿ ಎಸ್ ಗಿರೀಶ್, ಹಿಂದಿನ ಮುಖ್ಯ ಅಧಿಕಾರಿ ಕೃಷ್ಣಪ್ರಸಾದ್, ಪುರಸಭೆ ಸಹಾಯಕ ಅಭಿಯಂತರ ಅರ್ಬಸ್ ಅಹಮದ್, ಪಕ್ಷದ ನಾಯಕರು, ವಿವಿಧ ಸಂಘ ಸಂಸ್ಥೆಗಳ ಪ್ರಮುಖರು ಇದ್ದರು.