ಕನ್ನಡಪ್ರಭ ವಾರ್ತೆ ಸಾಗರ
ಇಲ್ಲಿನ ಉಪವಿಭಾಗಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಬುಧವಾರ ದೇವಾಲಯಗಳ ಅಭಿವೃದ್ಧಿಗೆ ರಾಜ್ಯ ಸರ್ಕಾರದಿಂದ ಬಿಡುಗಡೆಯಾಗಿರುವ 4 ಕೋಟಿ ರು.ವಿಶೇಷ ಅನುದಾನ ಬಳಕೆ ಕುರಿತು ಕರೆಯಲಾಗಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಗ್ರಾಮೀಣ ಭಾಗದಲ್ಲಿ ಜನರು ಸಣ್ಣಪುಟ್ಟ ಗುಡಿಗಳನ್ನು ನಿರ್ಮಿಸಲು ಕಷ್ಟಪಡುತ್ತಿರುತ್ತಾರೆ. ಅವರಿಗೆ ತಕ್ಕಮಟ್ಟಿಗೆ ಆರ್ಥಿಕ ಸಹಕಾರ ನೀಡಲು ಸರ್ಕಾರಕ್ಕೆ ಮನವಿ ಮಾಡಿಕೊಂಡಾಗ ಮುಜರಾಯಿ ಸಚಿವ ರಾಮಲಿಂಗರೆಡ್ಡಿಯವರು ₹4 ಕೋಟಿ ಬಿಡುಗಡೆ ಮಾಡಿದ್ದಾರೆ ಎಂದು ಹೇಳಿದರು.
ಕ್ಷೇತ್ರವ್ಯಾಪ್ತಿಯಲ್ಲಿ ದೇವಸ್ಥಾನಗಳ ಪುನರುಜ್ಜೀವನಕ್ಕಾಗಿ 2 ರಿಂದ 20 ಲಕ್ಷ ರು.ವರೆಗೆ ಹಣ ನೀಡಲಾಗಿದೆ.ಸರ್ಕಾರ ಕೇಳುವ ಸೂಕ್ತ ದಾಖಲೆಗಳನ್ನು ದೇವಸ್ಥಾನ ಸಮಿತಿಯವರು ನೀಡಬೇಕು. ಅನುದಾನಕ್ಕೆ ಅರ್ಜಿ ಹಾಕದೆ ಇದ್ದವರಿಗೂ ಸಹ ಅನುದಾನ ನೀಡಲಾಗಿದೆ ಎಂದರು.
ಜಿಲ್ಲಾಧಿಕಾರಿಗಳ ಕಚೇರಿಯ ಮುಜರಾಯಿ ಇಲಾಖೆ ತಹಸೀಲ್ದಾರ್ ಪ್ರದೀಪ್ ಮಾತನಾಡಿ, ಶಾಸಕರ ವಿಶೇಷ ಪ್ರಯತ್ನದಿಂದ ₹4 ಕೋಟಿ ಅನುದಾನ ಬಂದಿದ್ದು, ಇದರ ಸದ್ಭಳಕೆಯಾಗಬೇಕು. ಅನುದಾನಕ್ಕೆ ಅರ್ಜಿ ಸಲ್ಲಿಸಿರುವ ದೇವಸ್ಥಾನಗಳ ಆಡಳಿತ ಸಮಿತಿ ಅಗತ್ಯ ದಾಖಲೆ ನೀಡಬೇಕು ಎಂದು ತಿಳಿಸಿದರು.
ಚಂದ್ರಗುತ್ತಿ ದೇವಸ್ಥಾನ ₹10 ಕೋಟಿ ವೆಚ್ಚದಲ್ಲಿ ಅಭಿವೃದ್ಧಿಯಾಗುತ್ತಿದ್ದರೆ, ಸಾಗರದ ಗಣಪತಿ ದೇವಸ್ಥಾನ ಸುಮಾರು ₹2 ಕೋಟಿ ವೆಚ್ಚದಲ್ಲಿ ಅಭಿವೃದ್ಧಿ ಮಾಡಲು ನೀಲನಕ್ಷೆ ಸಿದ್ದಪಡಿಸಿದೆ ಎಂದು ತಿಳಿಸಿದರು.ಈ ವೇಳೆ ಉಪವಿಭಾಗಾಧಿಕಾರಿ ಯತೀಶ್ ಆರ್, ತಹಸೀಲ್ದಾರ್ ಚಂದ್ರಶೇಖರ್ ನಾಯ್ಕ್, ಮುಜರಾಯಿ ಇಲಾಖೆಯ ವಿವಿಧ ಅಧಿಕಾರಿಗಳು ಹಾಜರಿದ್ದರು.